ಸಾರಾಂಶ
ತಾಲೂಕಿನ ಮಂಚೀಕೇರಿ ಸಮೀಪದ ಕೆರೆಹೊಸಳ್ಳಿ ಅರೆ ಬಯಲುಸೀಮೆ ಪ್ರದೇಶವಾಗಿದೆ.
ಯಲ್ಲಾಪುರ: ತಾಲೂಕಿನ ಮಂಚೀಕೇರಿ ಸಮೀಪದ ಕೆರೆಹೊಸಳ್ಳಿ ಅರೆ ಬಯಲುಸೀಮೆ ಪ್ರದೇಶವಾಗಿದೆ. ಇದರ ನೀರಿನ ಬವಣೆ ನೀಗಿಸಲು ಆಧುನಿಕ ಭಗೀರಥ ಶಾಸಕ ಶಿವರಾಮ ಹೆಬ್ಬಾರ ಪ್ರಯತ್ನದಿಂದ ವರ್ಷದ ಹಿಂದೆ ಏತ ನೀರಾವರಿ ಮಾಡಿಕೊಟ್ಟಿದ್ದು, ಈ ಭಾಗದ ರೈತರಿಗೆ ವರದಾನವಾಗಿದೆ ಎಂದು ಗ್ರಾಮ ಅರಣ್ಯ ಸಮಿತಿ ಮಾಜಿ ಅಧ್ಯಕ್ಷ ಡಿ.ಜಿ. ಭಾಗ್ವತ್ ಕೆರೆಹೊಸಳ್ಳಿ ಹೇಳಿದರು.
ಅವರು ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿ, ಕೆರೆಹೊಸಳ್ಳಿ ನೀರಿನ ಸಮಸ್ಯೆ ತೀವ್ರವಾಗಿತ್ತು. ೨೦೧೯-೨೦ರಲ್ಲಿ ನಮ್ಮ ಬೇಡಿಕೆಗೆ ಶಾಸಕರು ಸ್ಪಂದಿಸಿ, ಸಣ್ಣ ನೀರಾವರಿ ಇಲಾಖೆಯಿಂದ ಡಬಗೆವಹಳ್ಳಕ್ಕೆ ಬಾಂದಾರು ಮಾಡಿಸಿಕೊಟ್ಟರು. ನಂತರ ಸುಮಾರು ₹೩.೫೦ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಮಾಡಿಕೊಟ್ಟದ್ದು, ರೈತರಿಗೆ ಅನುಕೂಲವಾಗಿದೆ ಎಂದರು.ಪಂಪ್‌ಹೌಸ್ ಮಾಡಿ ೬೦ ಎಚ್ಪಿಯ ಮೂರು ಪಂಪ್ ಅಳವಡಿಸಿ ದೂರದೃಷ್ಟಿ ಯೋಜನೆ ಅನುಷ್ಠಾನಗೊಳಿಸಿದರು. ಸಣ್ಣ ಹಳ್ಳಿಯಲ್ಲಿ ಆಧುನಿಕ ಭಗೀರಥ ಪ್ರಯತ್ನದಿಂದ ಅನುಷ್ಠಾನಗೊಂಡ ದೊಡ್ಡ ಯೋಜನೆಯಿಂದ ೧೮ ಗೇಟ್ ವಾಲ್ ಮೂಲಕ ೪೦ ಕುಟುಂಬದ ಸುಮಾರು ೧೨೦ ಎಕರೆ ಕೃಷಿ ಜಮೀನಿಗೆ ನೀರು ಹೋಗುತ್ತಿದ್ದು, ಈ ಭಾಗದ ರೈತರಿಗೆ ವರ್ಷವಿಡೀ ನೀರಿನ ಸಮಸ್ಯೆ ದೂರವಾಗಿದೆ ಎಂದರು.
ವಿಎಫ್‌ಸಿ ಅಧ್ಯಕ್ಷ ರಾಮಚಂದ್ರ ಜಾನು ಕುಣಬಿ ಮಾತನಾಡಿ, ನೀರಿಲ್ಲದೇ ಮಳೆಗಾಲದಲ್ಲಿ ಮಾಡಿದ ತೋಟ ಬೇಸಿಗೆಯಲ್ಲಿ ಒಣಗುತ್ತಿತ್ತು. ಯೋಜನೆಯಿಂದ ಈಗ ನೀರಿನ ಕೊರತೆ ಇಲ್ಲ. ನಿರ್ವಹಣೆಗೆ ಸಮಿತಿ ಮಾಡಿಕೊಂಡು ವಾರಕ್ಕೊಂದು ಬಾರಿ ಸಭೆ ಸೇರಿ ಯಾರಿಗೂ ತೊಂದರೆಯಾಗದಂತೆ ನಿರ್ವಹಿಸುತ್ತಿದ್ದೇವೆ. ಕೆಲವರು ಸಣ್ಣ ಕೆರೆ ಮಾಡಿಕೊಂಡು ನೀರು ಸಂಗ್ರಹಿಸಿ ತೋಟಗಳಿಗೆ ನೀರು ಬಿಡುತ್ತಿದ್ದೇವೆ. ಎಲ್ಲ ರೈತರಿಗೂ ಸಣ್ಣ ಕೆರೆ ನಿರ್ಮಿಸಿ, ನೀರು ಸಂಗ್ರಹಿಸಲು ಅರಣ್ಯ ಇಲಾಖೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.ಉಳಿದ ೪ ಗೇಟ್ ಬಂದ್ ಮಾಡಲಾಗಿದೆ. ಅದನ್ನು ಪ್ರಾರಂಭಿಸಲು ಶಾಸಕರಲ್ಲಿ ಒತ್ತಾಯಿಸಿದ್ದು, ಅದಕ್ಕೆ ಶಾಸಕರು ಸ್ಪಂದಿಸಿದ್ದಾರೆ. ಯೋಜನೆ ಸದುಪಯೋಗ ಆಗಿದೆ. ನೀರಾವರಿ ಯೋಜನೆಯ ಅಧಿಕಾರಿಗಳೂ ಸ್ಪಂದಿಸುತ್ತಿದ್ದಾರೆ ಎಂದರು.
ಗ್ರಾಮಸ್ಥರಾದ ಚಂದ್ರಬಾಬು ಸಿದ್ದಿ, ಗಣಪತಿ ನಾಗಪ್ಪ ಸಿದ್ದಿ ಇದ್ದರು.