ಯಶಸ್ವಿಯಾದ ನುಡಿ ಜಾತ್ರೆ, ಬಂದೆರಗಿದ ಭೀಕರ ಬರ!

| Published : Dec 31 2023, 01:30 AM IST

ಸಾರಾಂಶ

2023 ನೇ ಇಸ್ವಿಯು ಜಿಲ್ಲೆಯ ಪಾಲಿಗೆ ಸಿಹಿ ಕಹಿ ಎರಡನ್ನೂ ಸಮಾನವಾಗಿ ನೀಡಿದೆ. ವರ್ಷದ ಆರಂಭದಲ್ಲೇ ನಡೆದ ನುಡಿ ಜಾತ್ರೆಯು ಯಶಸ್ವಿಯಾಗಿ ಜಿಲ್ಲೆಯ ಕೀರ್ತಿ ಹೆಚ್ಚಿದರೆ, ಮುಂಗಾರು ಕೈಕೊಟ್ಟಿದ್ದರಿಂದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪಟಾಕಿ ದುರಂತದಲ್ಲಿ ನಾಲ್ವರು ಸಜೀವ ದಹನಗೊಂಡರೆ, ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ

ನಾರಾಯಣ ಹೆಗಡೆ ಹಾವೇರಿ

2023 ನೇ ಇಸ್ವಿಯು ಜಿಲ್ಲೆಯ ಪಾಲಿಗೆ ಸಿಹಿ ಕಹಿ ಎರಡನ್ನೂ ಸಮಾನವಾಗಿ ನೀಡಿದೆ. ವರ್ಷದ ಆರಂಭದಲ್ಲೇ ನಡೆದ ನುಡಿ ಜಾತ್ರೆಯು ಯಶಸ್ವಿಯಾಗಿ ಜಿಲ್ಲೆಯ ಕೀರ್ತಿ ಹೆಚ್ಚಿದರೆ, ಮುಂಗಾರು ಕೈಕೊಟ್ಟಿದ್ದರಿಂದ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪಟಾಕಿ ದುರಂತದಲ್ಲಿ ನಾಲ್ವರು ಸಜೀವ ದಹನಗೊಂಡರೆ, ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿತು.

ಹಾವೇರಿ ನಗರದಲ್ಲಿ ಜನವರಿ ೬,೭ ಮತ್ತು ೮ರಂದು ಐತಿಹಾಸಿಕವಾಗಿ ನಡೆದ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಾಡಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಪ್ರೊ. ದೊಡ್ಡರಂಗೇಗೌಡರ ಸಾರಥ್ಯದಲ್ಲಿ ನಡೆದ ನುಡಿಜಾತ್ರೆಯಲ್ಲಿ ಅಧ್ಯಕ್ಷರ ಮೆರವಣಿಗೆ ರಥ, ಕನ್ನಡ ರಥ, ಬಾಡ ಅರಮನೆಯ ಕೋಟೆ ಮಾದರಿಯ ದ್ವಾರ ಬಾಗಿಲು ಸೇರಿದಂತೆ ಹಲವು ವಿಶೇಷಗಳಿಗೆ ಮುನ್ನುಡಿ ಬರೆಯಿತು. ಆಸನ, ಊಟ, ನೀರು, ವಸತಿ, ವಾಹನ ಸೌಲಭ್ಯ ಸಾಹಿತ್ಯ ಪ್ರೇಮಿಗಳನ್ನು ಸಂಪ್ರೀತಗೊಳಿಸಿತು. ನುಡಿ ಜಾತ್ರೆಗೆ ಬರೋಬ್ಬರಿ ₹೨೫ ಕೋಟಿ ವೆಚ್ಚ ತಗುಲಿದ್ದು, ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲೇ ದಾಖಲೆಯ ವೆಚ್ಚ ಎನಿಸಿದೆ.

ಜಿಲ್ಲೆಯಲ್ಲಿ ಮುಂಗಾರು ವೈಫಲ್ಯದಿಂದ ಉಂಟಾದ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಭೀಕರ ಬರ: ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಗಳು ಕೈಕೊಟ್ಟ ಪರಿಣಾಮ ಬೆಳೆ ನಷ್ಟವಾಗಿ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಜಿಲ್ಲೆಯ ಎಂಟು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿವೆ. ಸಾಲಬಾಧೆ ಮತ್ತು ಬೆಳೆ ನಷ್ಟದಿಂದ ಅನ್ನದಾತರು ಆತ್ಮಹತ್ಯೆಯ ಮೊರೆ ಹೋದರು. ೨೦೨೩ರ ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ೬೨ ರೈತ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ರಾಜ್ಯದಲ್ಲೇ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ₹೫ ಲಕ್ಷ ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ಹೆಚ್ಚಳವಾಗುತ್ತಿದೆ ಎಂಬರ್ಥದಲ್ಲಿ ನೀಡಿದ ಹೇಳಿಕೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆದು, ರೈತರು ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಕುಲಕರ್ಣಿಗೆ ರಾಜ್ಯೋತ್ಸವ: ಕಟ್ಟತೇವ ನಾವು ಕಟ್ಟತೇವ ಎಂಬ ಕ್ರಾಂತಿಗೀತೆಯ ಮೂಲಕ ನಾಡಿನಾದ್ಯಂತ ಚಿರಪರಿಚಿತರಾದ ಸಾಹಿತಿ ಸತೀಶ ಕುಲಕರ್ಣಿ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ದೊರಕಿತು. ೪೦ ವರ್ಷಗಳ ಅನನ್ಯ ಸಾಹಿತ್ಯ ಸೇವೆ ಮತ್ತು ಹಾವೇರಿ ನೆಲದ ಮಣ್ಣಿನ ಸೊಗಡನ್ನು ಪಸರಿಸಿದ ಬಂಡಾಯ ಸಾಹಿತ್ಯದ ಗಟ್ಟಿಧ್ವನಿಯಾಗಿದ್ದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಜಿಲ್ಲೆಯ ಹಿರಿಮೆ ಎನಿಸಿದೆ.

ಹಾವೇರಿ ತಾಲೂಕಿನ ಜಂಗಮನಕೊಪ್ಪ ಗ್ರಾಮದಲ್ಲಿ ₹೧೧೦ ಕೋಟಿ ವೆಚ್ಚದ ಯುಎಚ್‌ಟಿ ಹಾಲು ಪ್ಯಾಕಿಂಗ್ ಸ್ಥಾವರ ಮತ್ತು ಹಾಲು ಸ್ಯಾಚೆಟ್ ಪ್ಯಾಕಿಂಗ್ ಘಟಕದ ಉದ್ಘಾಟನೆಯನ್ನು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದ್ದರು. ಪ್ರತಿ ದಿನ ೧ ಲಕ್ಷ ಲೀಟರ್‌ವರೆಗೆ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್ ಮಾಡುವ ಸಾಮರ್ಥ್ಯವನ್ನು ಈ ಘಟಕ ಹೊಂದಿದ್ದು, ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹ ನೀಡಿದೆ.

ಪ್ರಧಾನಿ ಮೋದಿ ಭೇಟಿ: ವಿಧಾನಸಭಾ ಚುನಾವಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಾವೇರಿ ನಗರಕ್ಕೆ ಭೇಟಿ ನೀಡಿ, ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದರು. ೨೦೨೩ರ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಯಿತು. ಜಿಲ್ಲೆಯ ೬ ಕ್ಷೇತ್ರಗಳ ಪೈಕಿ ೧ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯಭೇರಿ ಬಾರಿಸಿತು. ೫ ಕ್ಷೇತ್ರಗಳಲ್ಲಿ ಗೆದ್ದ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ಸಿಗಲಿಲ್ಲ, ಹೊರಗಿನವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡರು. ಬಳಿಕ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ಲಭಿಸಿತು. ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರಿಗೆ ವಿಪ ಮುಖ್ಯಸಚೇತಕ ಹುದ್ದೆ ದೊರಕಿತು. ಉಳಿದಂತೆ ಕಾರ್ಯಕರ್ತರು ನಿಗಮ ಮಂಡಳಿಯ ಕನಸಿನೊಂಡಿಗೆ ೨೦೨೪ನ್ನು ಸ್ವಾಗತಿಸಿಕೊಳ್ಳುವಂತಾಗಿದೆ.

ರೈತ ಆತ್ಮಹತ್ಯೆ: ರೈತ ಆತ್ಮಹತ್ಯೆ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಿರುವುದು ಸರ್ಕಾರದ ಗಮನ ಸೆಳೆಯಿತು. ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಿ ಈ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಈ ಕುರಿತು ಕನ್ನಡಪ್ರಭ ಪ್ರಕಟಿಸಿದ ವರದಿ ಕೂಡ ಸರ್ಕಾರದ ಕಣ್ಣು ತೆರೆಸುವಲ್ಲಿ ಯಶಸ್ವಿಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಮಳೆಯಿಂದ ಆಸ್ಪತ್ರೆ ಸೋರುತ್ತಿರುವುದನ್ನು ಮತ್ತು ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಆರೋಗ್ಯ ಇಲಾಖೆಯ ಎಇಇ ಅವರನ್ನು ಸ್ಥಳದಲ್ಲೇ ಅಮಾನತು ಮಾಡಿದ್ದರು. ನಂತರ ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಸೂಚ್ಯಂಕದಲ್ಲಿ ಜಿಲ್ಲೆಯ ಕಳಪೆ ಸಾಧನೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದರು.

ಪಟಾಕಿ ದುರಂತ: ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸಮೀಪ ಪಟಾಕಿ ಗೋದಾಮಿನಲ್ಲಿ ನಡೆದ ಬೆಂಕಿ ಅವಘಡದಲ್ಲಿ ನಾಲ್ವರು ಸಜೀವ ದಹನಗೊಂಡು, ಇಬ್ಬರು ಗಾಯಗೊಂಡರು. ಸುಮಾರು ₹೧ ಕೋಟಿಗೂ ಅಧಿಕ ಮೌಲ್ಯದ ಪಟಾಕಿಗಳು ಭಸ್ಮವಾದವು. ಸಂಭ್ರಮ ಹೆಚ್ಚಿಸಬೇಕಾದ ಪಟಾಕಿಗಳು, ಮನೆಯ ದೀಪವನ್ನೇ ಆರಿಸಿದವು. ರಾಣೆಬೆನ್ನೂರಿನ ಮಾರುತಿನಗರದ ಯರೇಕುಪ್ಪಿ ರಸ್ತೆ ಸ್ಪಾರ್ಕ್ ಕ್ಯಾಂಡಲ್ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿ ಒಬ್ಬರು ಮೃತಪಟ್ಟು, ೭ ಮಂದಿ ಗಾಯಗೊಂಡಿದ್ದರು.

ಗಾಂಧಿ ಪುರಸ್ಕಾರ: ಜಿಲ್ಲೆಯ ೮ ಗ್ರಾಪಂಗಳು ೨೦೨೨-೨೩ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡವು. ಬ್ಯಾಡಗಿ ತಾಲೂಕಿನ ಬನ್ನಿಹಟ್ಟಿ, ಹಾನಗಲ್ಲ ತಾಲೂಕಿನ ಗೆಜ್ಜಿಹಳ್ಳಿ, ಹಾವೇರಿ ತಾಲೂಕಿನ ಆಲದಕಟ್ಟಿ, ರಾಣಿಬೆನ್ನೂರ ತಾಲೂಕಿನ ಅಂತರವಳ್ಳಿ, ಹಿರೇಕೆರೂರು ತಾಲೂಕಿನ ಅರಳಿಕಟ್ಟಿ, ಸವಣೂರ ತಾಲೂಕಿನ ಹಿರೇಮುಗದೂರ, ಶಿಗ್ಗಾವಿ ತಾಲೂಕಿನ ಅಂದಲಗಿ, ರಟ್ಟೀಹಳ್ಳಿ ತಾಲೂಕಿನ ನಾಗವಂದ ಗ್ರಾಪಂಗಳು ಉತ್ತಮ ಕಾರ್ಯ ಸಾಧನೆಗೆ ಮೂಲಕ ಪುರಸ್ಕಾರದ ಮನ್ನಣೆ ಪಡೆದಿವೆ.

ಹಾವೇರಿ ವಿವಿ ಆರಂಭ: ತಾಲೂಕಿನ ಕೆರಿಮತ್ತಿಹಳ್ಳಿಯ ಪಿ.ಜಿ.ಸೆಂಟರ್‌ನಲ್ಲಿ ನೂತನ ಹಾವೇರಿ ವಿಶ್ವವಿದ್ಯಾಲಯವು ಪ್ರಸ್ತುತ ೨೦೨೩-೨೪ನೇ ಶೈಕ್ಷಣಿಕ ಸಾಲಿನಿಂದ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿತು. ಪ್ರಸ್ತುತ ವಿವಿಯಲ್ಲಿರುವ ಎಲ್ಲ ಕೋರ್ಸ್ಗಳಿಗೂ ಪ್ರವೇಶಾವಕಾಶ ಕಲ್ಪಿಸಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೌಶಲಾಧಾರಿತ ಹಾಗೂ ಉದ್ಯೋಗ ಸೃಷ್ಟಿಗೆ ಪೂರಕ ಪದವಿ ಕೋರ್ಸ್ಗಳನ್ನು ಆರಂಭಿಸುವ ಚಿಂತನೆ ವಿವಿ ಕುಲಪತಿಗಳು ಹೊಂದಿದ್ದಾರೆ.