ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಾಂಪ್ರದಾಯಿಕವಾಗಿ ತಿಲಕವಿಟ್ಟು ಸ್ವಾಗತಿಸುವ ಮೂಲಕ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಹುಬ್ಬಳ್ಳಿ:
ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವುದು, ವಿಮಾನ ನಿಲ್ದಾಣದ ಸೌಲಭ್ಯ ಸುಧಾರಣೆ, ಸುರಕ್ಷತೆ ಮತ್ತು ಜಾಗೃತಿ ಹೆಚ್ಚಿಸುವುದು ಹಾಗೂ ಪ್ರಯಾಣಿಕ ಸ್ನೇಹಿ ಸೇವೆ ಬಲಪಡಿಸುವ ಉದ್ದೇಶದಿಂದ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೆ. 17ರಿಂದ ಅ.10ರ ವರೆಗೆ ನಡೆಸಿದ ಯಾತ್ರಿ ಸೇವಾ ಅಭಿಯಾನ-2026 ಅತ್ಯಂತ ಯಶಸ್ವಿಯಾಯಿತು.ಅಭಿಯಾನದ ಮೊದಲ ದಿನ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಾಂಪ್ರದಾಯಿಕವಾಗಿ ತಿಲಕವಿಟ್ಟು ಸ್ವಾಗತಿಸುವ ಮೂಲಕ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನದ ಅವಧಿಯಲ್ಲಿ ಸ್ಥಳೀಯ ಸಂಸ್ಕೃತಿ, ಪರಂಪರೆ ಮತ್ತು ಭಾರತೀಯ ಆತಿಥ್ಯವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಸ್ವಾಗತ ಹಾಗೂ ಪ್ರದರ್ಶನ ಆಯೋಜಿಸಲಾಯಿತು. ಪ್ರತಿದಿನ ಒಂದೊಂದು ವಿಷಯವಾಗಿ ಕಾರ್ಯಕ್ರಮ ಆಯೋಜಿಸಿದ್ದು ವಿಶೇಷ.
ಸೆ. 27ರಂದು ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಆರ್ಟ್ ವಾಲೇ ಅವರ ನೇರ ಚಿತ್ರಕಲೆ ಪ್ರದರ್ಶನ ಮತ್ತು ಪ್ರಯಾಣಿಕರ ಭಾಗವಹಿಸುವಿಕೆಗೆ ಅವಕಾಶ ಕಲ್ಪಿಸಲಾಯಿತು. ದಿನವಾರು ಕ್ರಿಯಾ ಯೋಜನೆಯಡಿ ವಿಮಾನ ನಿಲ್ದಾಣದ ಸ್ವಚ್ಛತೆ, ಮೂಲಸೌಕರ್ಯ ಮತ್ತು ಪ್ರಯಾಣಿಕರ ಅನುಕೂಲವನ್ನು ಸುಧಾರಿಸಲು ಹಲವು ಕ್ರಮಕೈಗೊಳ್ಳಲಾಯಿತು. ಪ್ರವೇಶದ ಚಾವಣಿ ಮತ್ತು ಟರ್ಮಿನಲ್ ಪ್ರದೇಶಗಳ ಸ್ವಚ್ಛತೆ ಹಾಗೂ ನಿರ್ವಹಣೆ, ಆಸನ ವ್ಯವಸ್ಥೆಗಳ ಸುಧಾರಣೆ, ವಿಶೇಷ ಸಹಾಯ ಅಗತ್ಯವಿರುವ ಪ್ರಯಾಣಿಕರಿಗೆ ನೆರವು ನೀಡುವ ಕುರಿತು ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.ವಿಮಾನ ಮಾಹಿತಿ ಪ್ರದರ್ಶನ ವ್ಯವಸ್ಥೆಗಳ ಪರಿಶೀಲನೆ, ಕಳೆದುಹೋದ ವಸ್ತುಗಳ ಮಾಹಿತಿ ಮತ್ತು ಟ್ರಾಲಿಗಳ ಲಭ್ಯತೆಯ ಸುಧಾರಣೆ ಹಾಗೂ ಭದ್ರತಾ ತಪಾಸಣೆಯ ಟ್ರೇಗಳ ಸ್ವಚ್ಛತೆಗೆ ಆದ್ಯತೆ ನೀಡಲಾಯಿತು.ಆರ್‌ಒ ನೀರಿನ ವಿತರಕಗಳ ನಿರ್ವಹಣೆ, ವೈ-ಫೈ ಸಂಪರ್ಕದ ಪರೀಕ್ಷೆ ಮತ್ತು ವಿಮಾನ ಹಾಗೂ ಹವಾಮಾನ ಮಾಹಿತಿಯ ಪ್ರದರ್ಶನಗಳ ಪರಿಶೀಲನೆ ನಡೆಸಲಾಯಿತು. ಪ್ರಯಾಣಿಕರ ಕಲ್ಯಾಣಕ್ಕಾಗಿ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಜಾಗೃತಿ ಕಾರ್ಯಕ್ರಮಗಳು, ತಾಯಂದಿರ ಆರೈಕೆ ಮತ್ತು ಮಕ್ಕಳ ಆರೈಕೆ ಸೌಲಭ್ಯಗಳ ಪರಿಶೀಲನೆ, ಪ್ರಯಾಣಿಕರ ಅಭಿಪ್ರಾಯ ಸಂಗ್ರಹಿಸಲು ಫೀಡ್‌ಬ್ಯಾಕ್ ವಾಲ್ ಸ್ಥಾಪನೆ ಹಾಗೂ ಮಕ್ಕಳ ಆರೈಕೆ ಕೊಠಡಿಯ ಮಾರ್ಗಸೂಚಿಗಳ ಕುರಿತು ಜಾಗೃತಿ ಮೂಡಿಸಲಾಯಿತು. 15 ದಿನ ಪ್ರಯಾಣಿಕರಿಗೆ ಸೌಲಭ್ಯಗಳ ಸುಧಾರಣೆ, ಸುರಕ್ಷತೆ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ವಿಶೇಷ. ವಿಮಾನ ನಿಲ್ದಾಣದ ನಿರ್ದೇಶಕರು, ಸೇರಿದಂತೆ ವಿವಿಧ ಹಂತಗಳ ಅಧಿಕಾರಿ ವರ್ಗ, ಸಿಬ್ಬಂದಿಗಳು ಭಾಗವಹಿಸಿದ್ದರು.