ಬ್ರೈನ್‌ಟ್ಯೂಮರ್‌ನಿಂದ ಕೋಮಾ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ..!

| Published : May 07 2025, 12:51 AM IST

ಬ್ರೈನ್‌ಟ್ಯೂಮರ್‌ನಿಂದ ಕೋಮಾ ಸ್ಥಿತಿಯಲ್ಲಿದ್ದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ..!
Share this Article
  • FB
  • TW
  • Linkdin
  • Email

ಸಾರಾಂಶ

ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿ ತಲುಪಿದ್ದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವುದರೊಂದಿಗೆ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದ ಅಪರೂಪದ ಪ್ರಕರಣ ಮಂಡ್ಯ ಮಿಮ್ಸ್‌ನಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ಎಚ್.ಮಲ್ಲೀಗೆರೆ ಗ್ರಾಮದ ಶಂಕರ್ ಅವರ ಪತ್ನಿ ಕವಿತಾ (೨೬) ಎಂಬಾಕೆಯೇ ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿಗೆ ತಲುಪಿ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿ ತಲುಪಿದ್ದ ಗರ್ಭಿಣಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವುದರೊಂದಿಗೆ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿದ ಅಪರೂಪದ ಪ್ರಕರಣ ಮಂಡ್ಯ ಮಿಮ್ಸ್‌ನಲ್ಲಿ ನಡೆದಿದೆ.

ತಾಲೂಕಿನ ಎಚ್.ಮಲ್ಲೀಗೆರೆ ಗ್ರಾಮದ ಶಂಕರ್ ಅವರ ಪತ್ನಿ ಕವಿತಾ (೨೬) ಎಂಬಾಕೆಯೇ ಬ್ರೈನ್ ಟ್ಯೂಮರ್‌ನಿಂದ ಕೋಮಾ ಸ್ಥಿತಿಗೆ ತಲುಪಿ ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆಯಾಗಿದ್ದಾರೆ.

ತಾಲೂಕಿನ ಎಚ್. ಮಲ್ಲೀಗೆರೆ ಗ್ರಾಮದ ಕವಿತಾ ಅವರು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದರು. ೬ ತಿಂಗಳ ಗರ್ಭಿಣಿಯಾಗಿದ್ದ ವೇಳೆ ಇದ್ದಕ್ಕಿದಂತೆ ಕವಿತಾ ಅವರು ತೊದಲು ನುಡಿಯನ್ನಾಡಲು ಪ್ರಾರಂಭಿಸಿದ್ದರು. ಫೆ.೧೭ರಂದು ಮುಂಜಾನೆ ೫ ಗಂಟೆ ಸಮಯದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದರು. ತಕ್ಷಣ ಆಕೆಯನ್ನು ಮಿಮ್ಸ್‌ಗೆ ಕರೆತಂದು ತಪಾಸಣೆ ನಡೆಸಿದ ವೇಳೆ ಅವರಿಗೆ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. ಮಿಮ್ಸ್‌ನ ವೈದ್ಯರು ಬೆಂಗಳೂರಿನ ಉನ್ನತ ಕೇಂದ್ರಕ್ಕೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು.

ಪೋಷಕರು ಆಕೆಯನ್ನು ನಿಮ್ಹಾನ್ಸ್‌ಗೆ ಕರೆದೊಯ್ದರು. ರೋಗಿಯ ಸ್ಥಿತಿಯನ್ನು ಕಂಡ ನಿಮ್ಹಾನ್ಸ್‌ನವರು ಅಲ್ಲಿ ರೋಗಿಯನ್ನು ದಾಖಲು ಮಾಡಿಕೊಳ್ಳಲು ನಿರಾಕರಿಸಿದರು. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಾಗಲೂ ಅಲ್ಲೂ ಕೈಚೆಲ್ಲಿದರು. ಬಳಿಕ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದೊಯ್ದು ಫೆ.೧೭ರಂದು ಆಕೆಗೆ ಬ್ರೈನ್ ಟ್ಯೂಮರ್ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಮೂರ್ನಾಲ್ಕು ದಿನಗಳಿಗೆ ೩ ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಲಾಗಿತ್ತು. ನಂತರ ಆಕೆಯ ಪೋಷಕರು ಮಂಡ್ಯದ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿ ಸಹಾಯ ಮಾಡುವಂತೆ ಕೇಳಿಕೊಂಡರು.

ತಕ್ಷಣ ಕಾರ್ಯಪ್ರವೃತ್ತರಾದ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಅವರು ತಮ್ಮ ಆಸ್ಪತ್ರೆಯ ನ್ಯೂರೋಸರ್ಜನ್ ಡಾ.ಲಿಂಗರಾಜು ಮತ್ತು ಸ್ತ್ರೀರೋಗ ತಜ್ಞ ಡಾ.ಮನೋಹರ್ ಅವರೊಂದಿಗೆ ಚರ್ಚಿಸಿ, ರೋಗಿಯನ್ನು ಮಾ.೧ರಂದು ತಮ್ಮ ಆಸ್ಪತ್ರೆಗೆ ದಾಖಲಿಸಿಕೊಂಡರು. ನಂತರ ಆಕೆಗೆ ಹೊಂಬಾಳೆ ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಈ ಮಧ್ಯೆ ಆಕೆ ಗರ್ಭಿಣಿಯಾಗಿ ೨೬ ವಾರ ಆಗಿತ್ತು.

ಈ ಅವಧಿಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಮಗುವನ್ನು ಹೊರ ತೆಗೆದರೆ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮತ್ತೆ ಆಕೆಗೆ ಚಿಕಿತ್ಸೆ ಮುಂದುವರಿಸಲಾಯಿತು. ಯಶಸ್ವಿಯಾಗಿ ೩೬ ವಾರಗಳ ಕಾಲ ಚಿಕಿತ್ಸೆ ನೀಡಿದ ನಂತರ ಸ್ತ್ರೀ ರೋಗ ತಜ್ಞ ಡಾ.ಮನೋಹರ್ ಮತ್ತು ತಂಡ ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ತಾಯಿಗೆ ಅಗತ್ಯ ಪೌಷ್ಟಿಕಾಂಶದ ಕೊರತೆ ಇದ್ದ ಕಾರಣ ಮಗು ಕೇವಲ ೧ ಕೆಜಿ ೬೦೦ ಗ್ರಾಂ ತೂಕ ಇತ್ತು.

ಮಗುವಿನ ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ ಮಕ್ಕಳ ವಿಭಾಗದ ಡಾ.ಕೀರ್ತಿ ಅವರು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಿದ್ದರು. ಒಂದು ವಾರ ಐಸಿಯುನ ವಿಶೇಷ ಘಟಕದಲ್ಲಿ ಚಿಕಿತ್ಸೆ ನೀಡಿದ ನಂತರ ಮಗು ಈಗ ೨ ಕೆಜಿ ೬೦೦ ಗ್ರಾಂ ತೂಕವಿದೆ.

ಲಕ್ಷಾಂತರ ರು. ಖರ್ಚು ಮಾಡಿ ಉನ್ನತ ಕೇಂದ್ರದಲ್ಲಿ ಚಿಕಿತ್ಸೆ ನೀಡಿದರೂ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವುದು ಕಷ್ಟ. ಇಂತಹ ಸಮಯದಲ್ಲಿ ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಮತ್ತು ಶುಶ್ರೂಷಕರ ತಂಡ ತಾಯಿ ಮತ್ತು ಮಗುವಿನ ಪ್ರಾಣ ಉಳಿಸುವಲ್ಲಿ ವಿಶೇಷ ಕಾಳಜಿ ವಹಿಸಿದೆ ಎಂದು ಮಿಮ್ಸ್ ನಿರ್ದೇಶ ಡಾ.ನರಸಿಂಹಸ್ವಾಮಿ ಅಭಿಮಾನದಿಂದ ನುಡಿದರು. ಲಕ್ಷಕ್ಕೆ ಒಬ್ಬರಿಗೆ ಈ ರೀತಿ ಆಗುವ ಸಾಧ್ಯತೆ ಇದೆ. ಇದೊಂದು ವಿಶೇಷ ಪ್ರಕರಣ. ನಾನು ಮತ್ತು ನಮ್ಮ ತಂಡ ವಿಶೇಷ ಕಾಳಜಿ ವಹಿಸಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡು ತಾಯಿ ಮಗುವನ್ನು ಕಾಪಾಡಿದ್ದೇವೆ.

- ಡಾ.ಮನೋಹರ್, ಸ್ತ್ರೀರೋಗ ತಜ್ಞ, ಮಿಮ್ಸ್, ಮಂಡ್ಯಬ್ರೈನ್ ಟ್ಯೂಮರ್‌ ರೋಗದಿಂದ ಬಳಲುತ್ತಿದ್ದ ರೋಗಿಯನ್ನು ಅದರಲ್ಲೂ ಶಸ್ತ್ರಚಿಕಿತ್ಸೆ ನಂತರ ನೋಡಿಕೊಳ್ಳುವುದು ತುಂಬಾ ಕಷ್ಟ. ಇಂತಹ ಕ್ಲಿಷ್ಟಕರ ಸಮಯದಲ್ಲಿ ಗರ್ಭಿಣಿಯಾಗಿದ್ದರಿಂದ ಮಗುವಿನ ಮೇಲೆ ದುಷ್ಪರಿಣಾಮ ಬೀರಬಹುದೆಂಬ ಕಾರಣಕ್ಕೆ ಔಷಧವನ್ನು ಸರಿದೂಗಿಸಿಕೊಂಡು ಚಿಕಿತ್ಸೆ ನೀಡುವುದು ಸವಾಲಿನ ಕೆಲಸವಾಗಿತ್ತು. ಅದನ್ನು ಯಶಸ್ವಿಯಾಗಿ ಮಾಡಿದ್ದೇವೆ. ಹೆಮ್ಮೆ ಇದೆ.

- ಡಾ.ಲಿಂಗರಾಜು, ನ್ಯೂರೋ ಸರ್ಜನ್, ಮಿಮ್ಸ್ ಮಂಡ್ಯ

ತಾಯಿಯ ಆರೋಗ್ಯದಲ್ಲಿ ಏರುಪೇರಾಗಿತ್ತಲ್ಲದೆ ಪೌಷ್ಟಿಕ ಆಹಾರದ ಕೊರತೆ, ಔಷಧಗಳ ಸೇವನೆಯಿಂದ ಮಗುವಿನ ಮೇಲೆ ಪರಿಣಾಮ ಬೀರಿತ್ತು. ಮಗುವಿನ ಆರೋಗ್ಯವನ್ನು ಕಾಪಾಡುವುದು ನಮಗೂ ಒಂದು ರೀತಿಯ ಸವಾಲಾಗೇ ಪರಿಣಮಿಸಿತ್ತು. ೧ ವಾರಗಳ ಕಾಲ ತೀವ್ರ ನಿಗಾ ವಹಿಸಿ ಕಾಳಜಿಯಿಂದ ನೋಡಿಕೊಳ್ಳಲಾಯಿತು.

- ಡಾ.ಕೀರ್ತಿ, ಮಕ್ಕಳ ತಜ್ಞ, ಮಿಮ್ಸ್ ಮಂಡ್ಯ

ಇಂತಹ ಪ್ರಕರಣದಲ್ಲಿ ಅನೆಸ್ತೇಷಿಯಾ ನೀಡುವುದು ತುಂಬಾ ಕಷ್ಟದ ಕೆಲಸ. ಸ್ವಲ್ಪ ಹೆಚ್ಚು ಕಡಿಮೆ ಆದರೂ ರೋಗಿಯ ಪ್ರಾಣಕ್ಕೆ ತೊಂದರೆ ಆಗುವ ಸಾಧ್ಯತೆಗಳಿರುತ್ತವೆ. ಔಷಧವನ್ನು ಸರಿಯಾದ ಪ್ರಮಾಣದಲ್ಲಿ ನೀಡಿ ಅತ್ಯಂತ ಜಾಗರೂಕತೆಯಿಂದ ನಮ್ಮ ತಂಡ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದೆ.

- ಡಾ.ಶಿವಕುಮಾರ್, ವೈದ್ಯಕೀಯ ಅಧೀಕ್ಷಕ, ಮಿಮ್ಸ್