ಪ್ರಾಸ್ಟೇಟ್‌ ಕ್ಯಾನ್ಸರ್‌ ರೋಗಿಗೆ ಗಂಗಾವತಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

| Published : Feb 13 2024, 12:48 AM IST

ಸಾರಾಂಶ

ಜನನೇಂದ್ರಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವೃದ್ಧ ರೋಗಿಯೊಬ್ಬರಿಗೆ ಗಂಗಾವತಿಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಈ ಶಸ್ತ್ರಚಿಕಿತ್ಸೆ ಬೆಂಗಳೂರಿನಲ್ಲಿ ಮಾತ್ರ ಮಾಡಲಾಗುತ್ತಿದೆ.

ಗಂಗಾವತಿ: ಆನುವಂಶೀಯತೆ ಸೇರಿದಂತೆ ನಾನಾ ಕಾರಣಗಳಿಂದ ಉಂಟಾಗುವ ಜನನೇಂದ್ರಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ವೃದ್ಧ ವ್ಯಕ್ತಿಗೆ ಇಲ್ಲಿನ ಮೂತ್ರರೋಗ ಹಾಗೂ ಮೂತ್ರ ಕ್ಯಾನ್ಸರ್ ತಜ್ಞ ನಾಗರಾಜ್ ಅವರ ನೇತೃತ್ವದ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ಹೊಸಪೇಟೆ ತಾಲೂಕಿನ ಕಮಲಾಪುರದ ರಾಮಪ್ಪ (75) ಎಂಬವರು ಕಳೆದ ಹಲವು ವರ್ಷದಿಂದ ಮೂತ್ರ ಸೋಂಕಿನಿಂದ ಬಳಲುತ್ತಿದ್ದರು. ಪದೇ ಪದೇ ಮೂತ್ರ ವಿಸರ್ಜನೆಯ ಬಯಕೆ, ಮೂತ್ರ ವಿಸರ್ಜಿಸುವಾಗ ಶಿಶ್ನದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿತ್ತು. ಹೀಗಾಗಿ ಚಿಕಿತ್ಸೆ ಪಡೆಯಲು ಮಲ್ಲಿಕಾರ್ಜುನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಜನನೇಂದ್ರಿಯ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು.

ರೋಗಿಯನ್ನು ಪರಿಶೀಲಿಸಿದ ವೈದ್ಯರ ತಂಡಕ್ಕೆ, ರೋಗಿಯ ಜನನೇಂದ್ರಿಯ (ಪ್ರಾಸ್ಟ್ರೇಟ್) ಗ್ರಂಥಿ ಊದಿಕೊಂಡಿರುವುದು ಕಂಡುಬಂದಿದೆ. ಪ್ರಾಸ್ಟೇಟ್ ಗ್ರಂಥಿಯಲ್ಲಿ ಅಸಹಜ ಸಿರಮ್ ಕಂಡುಬಂದಿದೆ. ಬಯಾಪ್ಸಿ ಸ್ಯಾಂಪಲ್ ಸಂಗ್ರಹಿಸಿ ಹಿಸ್ಟೋಪೆಥಾಲಜಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದಾಗ ಜನನೇಂದ್ರಿಯದ ಕ್ಯಾನ್ಸರ್ ಇರುವುದು ಖಚಿತವಾಗಿದೆ. ಪ್ರಾಸ್ಟೇಟ್ ಗ್ರಂಥಿಗೆ ಹರಡಿದ್ದ ಕ್ಯಾನ್ಸರ್‌ಗೆ ಬೆಂಗಳೂರಿನಲ್ಲಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ ಲಭ್ಯವಾಗುತ್ತದೆ. ಅಲ್ಲಿಗೆ ಹೋಗುವಂತೆ ವೈದ್ಯರು ರೋಗಿಗೆ ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಒಪ್ಪದ ರೋಗಿ, ಇಲ್ಲಿಯೇ ಶಸ್ತ್ರಚಿಕಿತ್ಸೆ ಮಾಡುವಂತೆ ಮನವಿ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ.

ಅಪರೂಪದ ಶಸ್ತ್ರಚಿಕಿತ್ಸೆ: ನಮ್ಮ ಉತ್ತರ ಕರ್ನಾಟಕ ಅಥವಾ ಕಲ್ಯಾಣ ಕರ್ನಾಟಕದಲ್ಲಿ ಈ ತರಹದ ಶಸ್ತ್ರಚಿಕಿತ್ಸೆ ವಿರಳ. ಬೆಂಗಳೂರಿನಲ್ಲಿ ಮಾತ್ರ ಈ ಶಸ್ತ್ರಚಿಕಿತ್ಸೆ ಲಭ್ಯವಿದೆ. ಈ ತರಹದ ಶಸ್ತ್ರಚಿಕಿತ್ಸೆ ನನ್ನ ಸೇವಾ ಅವಧಿಯಲ್ಲಿ ಎರಡನೆಯದ್ದು ಎಂದು ಮೂತ್ರರೋಗ ಹಾಗೂ ಮೂತ್ರ ಕ್ಯಾನ್ಸರ್ ತಜ್ಞ ವೈದ್ಯ ಎಚ್. ನಾಗರಾಜ ತಿಳಿಸಿದರು.ವೈದ್ಯರ ತಂಡದಲ್ಲಿ ಅರವಳಿಕೆ ತಜ್ಞೆ ಸವಿತಾ ಸಿಂಗನಾಳ, ಸಿಬ್ಬಂದಿ ಚೈತ್ರಾ, ಮುಸ್ಕಾನ್, ಮಹಾಂತೇಶ, ಮಲ್ಲೇಶ, ಶರಣೇಗೌಡ, ಮಹೆಬೂಬ, ಮಹೇಶ ಇದ್ದರು.