ಸಾರಾಂಶ
ಪ್ರಮುಖ ಬೀದಿಗಳಲ್ಲಿ ಸೀತಾ-ರಾಮ ಮೂರ್ತಿಗಳ ಮೆರವಣಿಗೆ । ಉತ್ಸವದಲ್ಲಿ ನೂರಾರು ಭಕ್ತರು ಭಾಗಿ
ಕನ್ನಡಪ್ರಭ ವಾರ್ತೆ ರಾಮನಗರಅಯೋಧ್ಯೆಯಲ್ಲಿ ಶ್ರೀ ಬಾಲರಾಮನ ಪ್ರಾಣಪ್ರತಿಷ್ಠೆಯ ಅಂಗವಾಗಿ ಜಿಲ್ಲಾ ಕೇಂದ್ರ ರಾಮನಗರದಲ್ಲಿ ನಡೆದ ವಿಶೇಷ ಆಚರಣೆಯ ಮುಂದುವರೆದ ಭಾಗವಾಗಿ ಸೀತಾರಾಮ ಕಲ್ಯಾಣೋತ್ಸವ ನಡೆಯಿತು.
ಅಯೋಧ್ಯೆ ಶ್ರೀರಾಮ ಪ್ರತಿಷ್ಠಾಪನೆ ಆಚರಣಾ ಸಮಿತಿ ವತಿಯಿಂದ ನಗರದ ಛತ್ರದ ಬೀದಿಯ ಶ್ರೀರಾಮನ ದೇವಾಲಯದ ಬಳಿ ಸೀತಾರಾಮ ಕಲ್ಯಾಣೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಪುರೋಹಿತ ನರಸಿಂಹ ಮೂರ್ತಿ ಮತ್ತು ರಾಧಾಕೃಷ್ಣರ ನೇತೃತ್ವದಲ್ಲಿ ನಡೆದ ಕಲ್ಯಾಣೋತ್ಸವವನ್ನು ನೂರಾರು ಭಕ್ತರು ವೀಕ್ಷಿಸಿದರು.ಕಲ್ಯಾಣೋತ್ಸವಕ್ಕೆ ಮುನ್ನ ಶ್ರೀರಾಮ ದೇವ-ಸೀತ ಮಾತೆಯ ಮೂರ್ತಿಗಳನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ದೇವಾಲಯದ ಮುಂಭಾಗ ನಿರ್ಮಿಸಲಾಗಿದ್ದ ತಾತ್ಕಾಲಿಕ ವೇದಿಕೆಯಲ್ಲಿ ಕಲ್ಯಾಣೋತ್ಸವದ ಧಾರ್ಮಿಕ ಕೈಂಕರ್ಯಗಳು ಯಶಸ್ವಿಯಾಗಿ ನೆರೆವೇರಿದವು. ನೂರಾರು ಭಕ್ತರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಮುಖ್ಯಸ್ಥ ಕೆ.ವಿ.ಉಮೇಶ್, ವನವಾಸದ ಸಂದರ್ಭದಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣರು ಇಲ್ಲಿರುವ ಬೆಟ್ಟಕ್ಕೆ ಆಗಮಿಸಿದ್ದರು ಎಂಬ ಗಾಢ ನಂಬಿಕೆಯಿದೆ ಎಂದರು.ಕಾಗೆಯ ರೂಪದಲ್ಲಿದ್ದ ಅಸುರನೊಬ್ಬ ತೊಂದರೆ ಕೊಟ್ಟಾಗ ಶ್ರೀರಾಮನು ಅಸುರನನ್ನು ಸಂಹಾರ ಮಾಡಿದ್ದ ಎಂಬ ಪೌರಾಣಿಕ ಪ್ರತೀತಿಯಿದೆ. ಹೀಗಾಗಿಯೇ ಶ್ರೀರಾಮ ದೇವನ ಬೆಟ್ಟದಲ್ಲಿ ಕಾಗೆಗಳು ಕಾಣ ಸಿಗದು ಎಂದು ಹಿರಿಯರು ಹೇಳುತ್ತಾರೆ. ಅಲ್ಲದೆ ಬೆಟ್ಟದ ಮೇಲೆ ಶ್ರೀರಾಮನ ಬಾಣದಿಂದ ನಿರ್ಮಾಣವಾಗಿರುವ ಸೊಣೆಯಲ್ಲಿ ಸದಾ ನೀರಿನ ಶೇಖರಣೆ ಇದ್ದೇ ಇರುತ್ತದೆ. ಈ ಪುರಾಣದ ಅಂಶಗಳು ರಾಮನಗರದ ನಿವಾಸಿಗಳಿಗೆ ದಿನನಿತ್ಯ ಶ್ರೀರಾಮನ ಸ್ಮರಣೆಗೆ ಕಾರಣವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಯೋಧೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ದಿನಾಚರಣೆಯ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಿರಲಿ ಎಂಬ ಕಾರಣಕ್ಕೆ ಸ್ಥಳೀಯ ಪೊಲೀಸರು ಅನೇಕ ನಿರ್ಬಂಧಗಳನ್ನು ಹೇರಿದ್ದರು. ಇದು ಶ್ರೀರಾಮ ಭಕ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಇಂದು ಸೀತಾರಾಮ ಕಲ್ಯಾಣ ಮಹೋತ್ಸವವನ್ನು ನಾಗರಿಕರ ಅಪೇಕ್ಷೆಯ ಮೇರೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಮತ್ತು ಆಡಳಿತ ಇಲಾಖೆ ಸಹಕಾರ ನೀಡಿವೆ ಎಂದು ಕೆ.ವಿ.ಉಮೇಶ್ ತಿಳಿಸಿದರು.----------------------------------28ಕೆಆರ್ ಎಂಎನ್ 1,2.ಜೆಪಿಜಿ
ರಾಮನಗರದ ಛತ್ರದ ಬೀದಿಯಲ್ಲಿರುವ ಶ್ರೀರಾಮನ ದೇಗುಲದ ಬಳಿ ಸೀತಾ ರಾಮ ಕಲ್ಯಾಣೋತ್ಸವ ನಡೆಯಿತು.--------------------------