ಮಾಗಡಿ: ಯುವಜನತೆ ಮಾದಕ ವಸ್ತು ಹಾಗೂ ದುಶ್ಚಟಗಳಿಗೆ ದಾಸರಾದರೆ ಅವರ ಭವಿಷ್ಯವೇ ನಾಶವಾಗಲಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಟಿ.ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು

ಮಾಗಡಿ: ಯುವಜನತೆ ಮಾದಕ ವಸ್ತು ಹಾಗೂ ದುಶ್ಚಟಗಳಿಗೆ ದಾಸರಾದರೆ ಅವರ ಭವಿಷ್ಯವೇ ನಾಶವಾಗಲಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜಿ.ಟಿ.ಶ್ರೀನಿವಾಸ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಬೈಚಪುರದಲ್ಲಿರುವ ವಿದ್ಯಾಚೇತನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ವಿರೋಧಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಯುವಪೀಳಿಗೆ ಮತ್ತು ವಿದ್ಯಾರ್ಥಿಗಳು ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ವಿಷಯ. ಇದು ದೇಶದ ದುರಂತ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ವಾಮಿ ವಿವೇಕಾನಂದರು ಯುವಶಕ್ತಿಯ ಮಹತ್ವವನ್ನು ಇಡೀ ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಅವರ ಸ್ಪೂರ್ತಿ ಹಾಗೂ ಅನೇಕ ಮಹಾತ್ಮರ ತ್ಯಾಗ-ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ಆದರೆ, ಸ್ವಾತಂತ್ರ್ಯ ಸಿಕ್ಕ ಕೆಲವೇ ದಶಕಗಳಲ್ಲಿ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ದೇಶದ ಪ್ರಗತಿಗೆ ಮಾರಕ ಎಂದು ಅಭಿಪ್ರಾಯಪಟ್ಟರು.

ವಿದ್ಯಾಚೇತನ ಕಾಲೇಜಿನ ಪ್ರಾಂಶುಪಾಲರಾದ ರವಿಕುಮಾರ್ ಮಾತನಾಡಿ, ಯುವಕರು ಮದ್ಯ ಅಥವಾ ಯಾವುದೇ ಮಾದಕ ವಸ್ತುವಿನ ಅಮಲಿಗೆ ಒಳಗಾಗದೆ ಚೆನ್ನಾಗಿ ವ್ಯಾಸಂಗ ಮಾಡಿ ದೇಶದ ಜವಾಬ್ದಾರಿಯುತ ಹಾಗೂ ಸತ್ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ಅಪರಾಧ ಸ್ಥಳ ಪರಿಶೀಲಕರಾದ ಶ್ರೀಕಂತ್ ಹಾಗೂ ಮನೋತಜ್ಞ ಮುರಳಿ ಮಾದಕ ದ್ರವ್ಯ ಸೇವನೆಯಿಂದ ಆರೋಗ್ಯ, ಮಾನಸಿಕ ಸ್ಥಿತಿ ಮತ್ತು ಜೀವನದ ಮೇಲಾಗುವ ಭೀಕರ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಗಂ.ದಯಾನಂದ್, ಬೋಧಕ/ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.