ಸಾರಾಂಶ
ಧಾರವಾಡ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಹಾಗೂ ಜನರ ಜ್ವಲಂತ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಗುರುವಾರ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಸ್ಟ್ (ಎಸ್‌ಯುಸಿಐ)ದಿಂದ ಧಾರವಾಡದಲ್ಲಿ ಜಿಲ್ಲಾ ಮಟ್ಟದ ಪ್ರತಿಭಟನಾ ರ್‍ಯಾಲಿ ನಡೆಯಿತು.
ಕಡಪಾ ಮೈದಾನದಲ್ಲಿ ಸೇರಿದ ಪ್ರತಿಭಟನಾಕಾರರು ಹಳೆ ಬಸ್ ನಿಲ್ದಾಣ, ಜ್ಯುಬಲಿ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಜಿಲ್ಲೆಯ ವಿವಿಧ ತಾಲೂಕು,ಬಡಾವಣೆ, ಕೊಳಗೇರಿಗಳಿಂದ ಹಾಗೂ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು, ರೈತರು, ಮಹಿಳೆಯರು, ವಿದ್ಯಾರ್ಥಿ-ಯುವಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಇಂದು ಸರ್ವಾಂಗೀಣ ಬಿಕ್ಕಟ್ಟು ಜನರ ಜೀವನ ಬೀದಿಗೆ ತಳ್ಳಿದೆ. ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ-ಆರೋಗ್ಯದ ಖಾಸಗೀಕರಣ ಮೊದಲಾದ ಮೂಲಭೂತ ಸಮಸ್ಯೆಗಳಿಂದ ಜನಸಾಮಾನ್ಯರ ಬದುಕು ಬೀದಿಗೆ ಬಂದಿದೆ. ಇನ್ನೊಂದೆಡೆ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, ಬರ ಪೀಡಿತ ಎಂದು ಘೋಷಣೆ ಮಾಡಿ ರಾಜ್ಯ ಸರ್ಕಾರ ಬರಪರಿಹಾರ ಕಾಮಗಾರಿ ಕೈಗೆತ್ತಿಕೊಂಡಿಲ್ಲ. ಬರದ ಸಂದರ್ಭದಲ್ಲಿ ಗುಳೆ ತಪ್ಪಿಸಲು ಕೂಲಿ ಕಾರ್ಮಿಕರಿಗೆ ನೆರವಾಗಬೇಕಾದ ನರೇಗಾ ಯೋಜನೆ ಅನುಷ್ಠಾನಗೊಳ್ಳುತ್ತಿಲ್ಲ. ಆಳುವ ಸರ್ಕಾರಗಳು ನೈಜ ಸಮಸ್ಯೆಗಳಿಂದ ಜನಸಾಮಾನ್ಯರನ್ನು ದಿಕ್ಕು ತಪ್ಪಿಸಲು ಧರ್ಮ, ಜಾತಿ, ಭಾಷೆ, ನೆಲ, ಜಲ ಮುಂತಾದ ವಿಷಯಗಳಲ್ಲಿ ಮುಳುಗಿಸುತ್ತಿವೆ ಎಂದು ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಜಡಗನ್ನವರ ಆಕ್ರೋಶ ವ್ಯಕ್ತಪಡಿಸಿದರು.
ಈಗ ಮತ್ತೊಮ್ಮೆ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಬಂಡವಾಳಶಾಹಿಪರ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿವೆ ಎಂದರು.ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ಶರಣು ಗೋನವಾರ ಮಾತನಾಡಿ, ರೈತರ ಬದುಕು ತೀವ್ರ ಸಂಕಷ್ಟದಿಂದ ಕೂಡಿದೆ. ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ವಾಗ್ದಾನ ನೀಡಿದ್ದ ಕೇಂದ್ರ ಸರ್ಕಾರ ದೆಹಲಿ ಹೋರಾಟ ನಡೆದು ಎರಡು ವರ್ಷಗಳ ನಂತರವೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದ ಬಗರ್ ಹುಕುಂ ಸಾಗುವಳಿದಾರರು ಭೂಮಿಯ ಹಕ್ಕುಪತ್ರಗಳಿಗಾಗಿ ಸತತವಾಗಿ ಹೋರಾಡುತ್ತಿದ್ದಾರೆ. ಕೈಗಾರೊಕೋದ್ಯಮಿಗಳಿಗೆ ರಾತ್ರೋರಾತ್ರಿ ಭೂಮಿ ಮಂಜೂರು ಮಾಡುವ ಸರ್ಕಾರಗಳು ಬಡವರಿಗೆ ತುಂಡು ಭೂಮಿ ಕೊಡಲು ಮೀನಾಮೇಷ ಎಣಿಸುತ್ತವೆ. ಇದು ಸರ್ಕಾರಗಳ ಹಿತಾಸಕ್ತಿ ಯಾರ ಪರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.
ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ನರೇಗಾ ಯೋಜನೆಯಡಿ ಬಾಕಿ ಇರುವ ಕೂಲಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಕೂಡಲೇ ಹೆಚ್ಚುವರಿ 50 ದಿನಗಳ ಕೆಲಸವನ್ನು ನೀಡಬೇಕು. ಜಿಲ್ಲೆಯಲ್ಲಿ ತೀವ್ರ ಬರವಿದ್ದು ದನಕರುಗಳಿಗೆ ಮೇವು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ವಿವಿಧ ಬರ ಪರಿಹಾರ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು. ಜಿಲ್ಲಾ ಸಮಿತಿಯ ಸದಸ್ಯರಾದ ಭುವನಾ ಬಳ್ಳಾರಿ, ದೀಪಾ ಧಾರವಾಡ, ಭವಾನಿಶಂಕರ್ ಗೌಡ, ಮಧುಲತಾ ಗೌಡರ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.