ಜನಪರ ರಾಜಿ ರಹಿತ ಹೋರಾಟ ನಡೆಸುವ ಎಸ್‌ಯುಸಿಐ ಪಕ್ಷ ಗೆಲ್ಲಿಸಲು ಕರೆ

| Published : Mar 25 2024, 12:50 AM IST

ಸಾರಾಂಶ

ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಬಂಡವಾಳಶಾಹಿ ಪಕ್ಷಗಳು. ಇವು ಜನರ ನಿಜವಾದ, ಗಂಭೀರ ಸಮಸ್ಯೆಗಳನ್ನು ಚುನಾವಣಾ ವಿಷಯಗಳನ್ನಾಗಿ ಮಾಡುವುದಿಲ್ಲ.

ಬಳ್ಳಾರಿ: ಚುನಾವಣೆ ಇರಲಿ ಅಥವಾ ಇಲ್ಲದಿರಲಿ ಎಸ್‌ಯುಸಿಐ (ಸಿ) ಪಕ್ಷವು ನಿರಂತರವಾಗಿ ಜನ ಹೋರಾಟದಲ್ಲಿ ತೊಡಗಿದೆ. ಜನರ ಈ ಹೋರಾಟದ ಧ್ವನಿಯನ್ನು ಸಂಸತ್ತಿನಲ್ಲೂ ಎತ್ತಿ ಹಿಡಿಯಬೇಕಾದರೆ ಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯ ಕರೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಹಾಗೂ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಎ.ದೇವದಾಸ್ ಮಾತನಾಡಿ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ಬಂಡವಾಳಶಾಹಿ ಪಕ್ಷಗಳು. ಇವು ಜನರ ನಿಜವಾದ, ಗಂಭೀರ ಸಮಸ್ಯೆಗಳನ್ನು ಚುನಾವಣಾ ವಿಷಯಗಳನ್ನಾಗಿ ಮಾಡುವುದಿಲ್ಲ. ಬದಲಿಗೆ ಪೊಳ್ಳು ಘೋಷಣೆಗಳನ್ನು ನೀಡುತ್ತಾ, ಪರಸ್ಪರ ಕೆಸರೆರಚಾಟದಲ್ಲೇ ಮುಳುಗುತ್ತವೆ ಎಂದರು.ಧರ್ಮ-ಜಾತಿಯಂತಹ ಭಾವನಾತ್ಮಕ ವಿಷಯಗಳನ್ನು ಉದ್ರೇಕಿಸುತ್ತಾ, ಜನರನ್ನು ದಿಕ್ಕು ತಪ್ಪಿಸುವ ಕುತಂತ್ರ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ಪಕ್ಷವು ಚುನಾವಣೆಯನ್ನು ಒಂದು ಹೋರಾಟವೆಂದೇ ಭಾವಿಸುತ್ತದೆ. ಹತ್ತು ಹಲವು ರೀತಿಯ ಪ್ರಚಾರ ಕಾರ್ಯಕ್ರಮದ ಮೂಲಕ ಲಕ್ಷಾಂತರ ಜನರನ್ನು ತಲುಪಿ, ವೈಚಾರಿಕ ಜಾಗೃತಿಯನ್ನು ಮೂಡಿಸುತ್ತದೆ. ಈ ಕೆಲಸದಲ್ಲಿ ಪ್ರತಿಯೊಬ್ಬರು ಕೈಜೋಡಿಸಿ, ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.ಪಕ್ಷದ ಜಿಲ್ಲಾ ಸಮಿತಿಯ ನಾಗಲಕ್ಷ್ಮಿ, ಬಿಜೆಪಿ, ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲ ಪಕ್ಷಗಳು ಸಾಮಾನ್ಯ ಜನರನ್ನು ಪ್ರತಿನಿಧಿಸುವ ಎಲ್ಲ ಅರ್ಹತೆಯನ್ನು ಕಳೆದುಕೊಂಡಿವೆ. ಚುನಾವಣಾ ಬಾಂಡ್‌ಗಳ ಹಗರಣದಿಂದಲೇ ಈ ಎಲ್ಲ ಪಕ್ಷಗಳ ನಿಜವಾದ ಬಣ್ಣ ಮತ್ತಷ್ಟು ಬಯಲಾಗಿದೆ. ಈ ಎಲ್ಲ ಪಕ್ಷಗಳು ಯಾರ ಹಿತಾಸಕ್ತಿಗಾಗಿ ಇವೆ ಎಂಬುದು ಸ್ಪಷ್ಟವಾಗಿದೆ. ಈ ಎರಡು ಪಕ್ಷಗಳನ್ನು ಸೋಲಿಸಬೇಕು. ಜನಪರ ಹೋರಾಟದಲ್ಲಿ ಜನರ ಜೊತೆ ಇರುವ ಪಕ್ಷ ಬೆಂಬಲಿಸಬೇಕು ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಯುವ ಮುಖಂಡ ಡಾ.ಪ್ರಮೋದ್ ಎನ್. ಪಕ್ಷದ ಸೈದ್ಧಾಂತಿಕ ನಿಲುವು, ರಾಜಿರಹಿತ ಜನಪರ ಹೋರಾಟ ಕುರಿತು ತಿಳಿಸಿದರು.ಪಕ್ಷದ ಜಿಲ್ಲಾ ಪ್ರಮುಖರಾದ ಸೋಮಶೇಖರ ಗೌಡ, ಶಾಂತಾ, ಗೋವಿಂದ್ ಸೇರಿದಂತೆ ಪಕ್ಷದ ಸದಸ್ಯರು, ಬೆಂಬಲಿಗರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.