ಸಾರಾಂಶ
ಬೆಳ್ತಂಗಡಿ : ಸೋಮವಾರ ಸಂಜೆ ಗಾಡಾಂಧಕಾರ. ಕೆಲಹೊತ್ತಿನಲ್ಲಿ ನದಿಯಲ್ಲಿ ಏಕಾಏಕಿ ಮಣ್ಣುಮಿಶ್ರಿತ ನೀರಿನ ಪ್ರವಾಹ. ಇದು ತಾಲೂಕಿನ ಕೆಲ ಭಾಗದಲ್ಲಿ ಕಂಡು ಬಂದ ದೃಶ್ಯ. ಒಂದು ವಾರದಿಂದ ಮಳೆ ಕಡಿಮೆಯಾಗಿ ಶಾಂತವಾಗಿದ್ದ ನೇತ್ರಾವತಿ ಮತ್ತು ಮೃತ್ಯುಂಜಯ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಸೋಮವಾರ ಸಂಜೆ ಕಂಡು ಬಂತು.
ತಾಲೂಕಿನಾದ್ಯಂತ ಹೆಚ್ಚಿನ ಮಳೆ ಇಲ್ಲದಿದ್ದರೂ ಈ ನದಿಗಳ ಉಗಮ ಸ್ಥಾನದಲ್ಲಿ ಭಾರಿ ಮಳೆಯಾಗಿರುವ ಸಾಧ್ಯತೆ ಇದ್ದು ನದಿಗಳಲ್ಲಿ ಪ್ರವಾಹದಂತೆ ನೀರು ಹರಿದಿದೆ.
ಜುಲೈ ತಿಂಗಳಲ್ಲಿ ಆಗಾಗ ಸಾಮಾನ್ಯ ಪ್ರವಾಹ ಸ್ಥಿತಿಯಲ್ಲಿ ಹರಿದ ಈ ನದಿಗಳು ಮತ್ತೆ ಸೋಮವಾರ ಪ್ರವಾಹದ ಭೀತಿ ಸೃಷ್ಟಿಸಿದವು ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಸೋಮವಾರ ಮಧ್ಯಾಹ್ನ ಸಾಮಾನ್ಯ ಮಳೆಯಾಗಿತ್ತು ಆದರೆ ಸಂಜೆ 5ರ ವೇಳೆಗೆ ನದಿಗಳು ಏಕಾಏಕಿ ತುಂಬಿ ಹರಿಯ ತೊಡಗಿದವು.
ಮುಂಡಾಜೆ, ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು ಮೊದಲಾದ ಗ್ರಾಮಗಳ ಕಡೆ ಹೆಚ್ಚಿನ ತೋಟಗಳಿಗೆ ಪ್ರವಾಹದ ನೀರು ನುಗ್ಗಿ ಕಡಿರುದ್ಯಾವರದಿಂದ 10 ಕಿಮಿ ದೂರದಲ್ಲಿರುವ ಬಂಡಾಜೆ ಜಲಪಾತಜಲಪಾತ ತುಂಬಿ ಹರಿಯುವ ದೃಶ್ಯ ಕಡಿರುದ್ಯಾವರದಲ್ಲಿ ಗೋಚರಿಸುತ್ತಿತ್ತು.
....................
ನೀರಿನೊಂದಿಗೆ ಅಪಾರ ಪ್ರಮಾಣದ ಮರಮಟ್ಟುಗಳು ತೇಲಿಬರುತ್ತಿರುವ ದೃಶ್ಯ ನೋಡಿದರೆ ಪಶ್ಚಿಮ ಘಟ್ಟದ ದಟ್ಟಾರಣ್ಯದ ನಡುವೆ ಭೂ ಕುಸಿತವಾಗಿದೆ ಎಂಬ ಸಂಶಯ ಉಂಟಾಗಿದೆ. 2019 ರಲ್ಲೂ ಇದೇ ರೀತಿಯ ಚಿತ್ರಣ ಕಂಡುಬಂದಿತ್ತು. ರಾತ್ರಿಯೊಳಗೆ ನದಿ ನೀರಿನ ಪ್ರಮಾಣ ಇಳಿಕೆಯಾಗಿರುವುದರಿಂದ ಆದರೆ ಅಂದಿನಷ್ಟು ಸೋಮವಾರ ಕುಸಿತ ಆಗಿಲ್ಲ.
..............
ಸಂಜೆ 3 ಗಂಟೆಯ ಬಳಿಕ ಅಂಧಕಾರ ಮೂಡಿತ್ತು. ಮಳೆ ಇಲ್ಲದಿದ್ದರೂ ನದಿಗಳಲ್ಲಿ ಪ್ರವಾಹದಂತೆ ಹರಿದುಬಂದ ನೀರು ಕಂಡ ನದಿ ಪಾತ್ರಗಳಲ್ಲಿ ವಾಸಿಸುವ ಜನರು ಭೀತಿಗೊಳಗಾದರು. ಹಲವರು ತಮ್ಮ ವಾಸ್ತವ್ಯ ಬದಲಿಸಿದರು. ರಾತ್ರಿ 8:30ರ ಹೊತ್ತಿಗೆ ನದಿ ನೀರು ಇಳಿಕೆಯಾಗ ತೊಡಗಿತು.
ಇದು ಈ ವರ್ಷ ಈ ಎರಡು ನದಿಗಳಲ್ಲಿ ಹರಿದ ಅತಿ ಹೆಚ್ಚಿನ ನೀರಿನ ಪ್ರಮಾಣವಾಗಿದೆ.
ಭೂ-ಕುಸಿತ?
ನದಿ ನೀರಿನ ಬಣ್ಣ, ಹರಿಯುವ ವೇಗ ಹಾಗೂ ತೇಲಿ ಹೋಗುತ್ತಿದ್ದ ಮರಮಟ್ಟು ಇತ್ಯಾದಿಗಳನ್ನು ಕಂಡಾಗ ನದಿಗಳ ಪ್ರದೇಶದಲ್ಲಿ ಭೂಕುಸಿತಗೊಂಡಿರುವ ಅನುಮಾನ ವ್ಯಕ್ತವಾಗಿದೆ. ಸವಣಾಲಿನಲ್ಲಿ ನದಿಯಲ್ಲಿ ಮಣ್ಣು ಮಿಶ್ರಿತ ಕಪ್ಪು ಬಣ್ಣದ ನೀರು ಹರಿದಿದ್ದು ನದಿ ನೀರು ದುರ್ಗಂಧದಿಂದ ಕೂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.