ಸಾರಾಂಶ
ರಿಯಾಜಅಹ್ಮದ ಎಂ. ದೊಡ್ಡಮನಿ
ಡಂಬಳ: ಈರುಳ್ಳಿ ಬೆಲೆ ದಿಢೀರ್ ಕುಸಿತ ಕಂಡಿದ್ದು, ರೈತರಿಗೆ ಬರಸಿಡಿಲು ಬಡಿದಂತಾಗಿದೆ.ಎರಡು ವಾರಗಳ ಹಿಂದೆ ₹4 ಸಾವಿರದಿಂದ ₹5 ಸಾವಿರದ ವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿಯ ದರ ಈಗ ಕಡಿಮೆಯಾಗಿದೆ. ಮೊದಲನೆಯ ಮಾದರಿಯ ಈರುಳ್ಳಿಗೆ ₹2500ರಿಂದ ₹3000, ಎರಡನೆಯ ಮಾದರಿಯ ಈರುಳ್ಳಿ ₹1500ರಿಂದ ₹2000ರ ವರೆಗೆ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ, ಎರಡನೇ, ಮೂರನೇ ಹಂತದ ಈರುಳ್ಳಿಯನ್ನು ಕೇಳುವವರೇ ಇಲ್ಲ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ.
ಈರುಳ್ಳಿ ಬೆಳೆಯಲು ರೈತರು ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದಾರೆ. ಟ್ರ್ಯಾಕ್ಟರ್ ಮೂಲಕ ಜಮೀನು ಹದಗೊಳಿಸಲು ಎಕರೆಗೆ ಒಂದು ಸಾವಿರ ರು., ರಂಟೆ ಹೊಡೆಯಲು ₹1100, ಬಿತ್ತನೆಗೆ, ಬೀಜವನ್ನು ಖರೀದಿಸಲು, ಬಿತ್ತಲು, ರಸಗೊಬ್ಬರ ಖರೀದಿಸಲು ಸಾಕಷ್ಟು ಹಣ ವ್ಯಯ ಮಾಡಿದ್ದಾರೆ. ಅಲ್ಲದೆ ಈರುಳ್ಳಿ ನಡುವೆ ಬೆಳೆದಿರುವ ಕಸ ತೆಗೆಯಲು ಕೂಲಿಕಾರರಿಗೆ ಒಬ್ಬರಂತೆ ₹400 ನೀಡಬೇಕಿದೆ. ಈರುಳ್ಳಿ ಕೊಯ್ಲಿಗೂ ಒಬ್ಬ ಕೂಲಿಕಾರನಿಗೆ ₹400 ನೀಡಬೇಕಿದೆ. ಕಟಾವು ಮಾಡಲು ಒಂದು ಬುಟ್ಟಿಗೆ ₹15 ಕೊಡಬೇಕು. ಇಷ್ಟೆಲ್ಲ ಖರ್ಚು ಮಾಡಿರುವ ರೈತರಿಗೆ ಕೊನೆಯಲ್ಲಿ ಏನೂ ಸಿಗದಂತಾಗಿದೆ.ಸತತ ನಷ್ಟ: ಈರುಳ್ಳಿ ಬೆಳೆಗಾರರು ಸತತ ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ವರ್ಷ ಮಳೆ ಕೊರತೆಯಿಂದ ಇಳುವರಿ ಕುಂಠಿತವಾಗಿತ್ತು. ಬೋರ್‌ವೆಲ್, ಟ್ಯಾಂಕರ್ ನೀರು ಉಣಿಸಿ ರೈತರು ಈರುಳ್ಳಿ ಬೆಳೆದಿದ್ದರು. ಕೊನೆಗೆ ರೈತರು ಸಾಲದ ಸುಳಿಗೆ ಸಿಲುಕುವಂತಾಗಿತ್ತು. ಅದಕ್ಕೂ ಮೊದಲು ಕೋವಿಡ್ ಕಾರಣದಿಂದ ರೈತರಿಗೆ ಈರುಳ್ಳಿ ನಷ್ಟ ತಂದಿತ್ತು. ಈ ವರ್ಷವೂ ಈರುಳ್ಳಿ ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ಬೆಂಬಲ ಬೆಲೆ: ಈರುಳ್ಳಿ ಬೆಂಬಲ ಬೆಲೆಯಲ್ಲಿ ಖರೀದಿಸುವ ಮೂಲಕ ಸರ್ಕಾರ ರೈತರ ನೆರವಿಗೆ ಬರಬೇಕು ಎಂಬುದು ರೈತರ ಆಗ್ರಹ. ಕನಿಷ್ಠ ₹6-7 ಸಾವಿರಕ್ಕೆ ಸರ್ಕಾರ ಈರುಳ್ಳಿ ಖರೀದಿಸಿದರೆ ರೈತರು ನಷ್ಟದಿಂದ ಪಾರಾಗಬಹುದು. ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರ ಬೆಳೆಸಾಲ ಮನ್ನಾ ಮಾಡಬೇಕು. ಜನಪ್ರತಿನಿಧಿಗಳು ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಲು ಶ್ರಮಿಸಬೇಕು ಎಂದು ರೈತ ಸಂಘಟನೆಗಳು ಮುಖಂಡರು ಆಗ್ರಹಿಸುತ್ತಾರೆ.ಲಕ್ಷಾಂತರ ರು. ಸಾಲ ಮಾಡಿ ಈರುಳ್ಳಿ ಬೆಳೆದಿದ್ದೇವೆ. ಆದರೆ ದಿಢೀರ್ ಬೆಲೆ ಕುಸಿತವಾಗಿದೆ. ಈರುಳ್ಳಿ ಬೆಳೆಗೆ ಸೂಕ್ತ ಬೆಂಬಲ ಬೆಲೆಯನ್ನು ಸರ್ಕಾರ ನಿಗದಿ ಮಾಡಬೇಕು. ಸತತವಾಗಿ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಮಾಡಿರುವ ಬೆಳಸಾಲವನ್ನು ಮನ್ನಾ ಮಾಡಬೇಕು ಎಂದು ಡಂಬಳ ರೈತ ರಾಮಣ್ಣ ಹೇಳುತ್ತಾರೆ.