ಮಳೆ ಇಲ್ಲದಿದ್ದರೂ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ಪ್ರವಾಹ, ಸ್ಥಳೀಯರಲ್ಲಿ ಆತಂಕ

| Published : Aug 21 2024, 12:34 AM IST

ಮಳೆ ಇಲ್ಲದಿದ್ದರೂ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ಪ್ರವಾಹ, ಸ್ಥಳೀಯರಲ್ಲಿ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

ಮೃತ್ಯುಂಜಯ ನದಿ ಮಾತ್ರ ಸಂಜೆ ಉಕ್ಕಿ ಹರಿದಿದ್ದರೂ ರಾತ್ರಿ ವೇಳೆ ನೀರಿನ ಮಟ್ಟ ತಗ್ಗಿದೆ. ಬಂಡಾಜೆ ಹಳ್ಳದಿಂದ ಕೆಸರು ಮಿಶ್ರಿತ ನೀರು ಬಂದಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸೋಮವಾರ ಸಂಜೆ ಮೇಘಸ್ಪೋಟದಿಂದಾಗಿ ಮೃತ್ಯುಂಜಯ ಹಾಗೂ ನೇತ್ರಾವತಿ ನದಿಗಳು ಉಕ್ಕಿ ಹರಿದಿದ್ದವು. ಆದರೆ ತಾಲೂಕಿನಲ್ಲಿ ಎಲ್ಲಿಯೂ ಮಳೆ ಇಲ್ಲದಿದ್ದರೂ ಮಂಗಳವಾರ ಸಂಜೆ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿ ಭಯ ಭೀತಿ ಮೂಡಿಸಿದೆ. ಚಾರ್ಮಾಡಿ ಘಾಟಿ ಮತ್ತು ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಬಿದ್ದ ಮತ್ತು ಭೂ ಕುಸಿತ ಉಂಟಾಗಿರುವ ಕಾರಣ ಈ ರೀತಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಮೃಂತ್ಯುಜಯ ನದಿ ಉಗಮ ಸ್ಥಾನದಲ್ಲಿ ಮಳೆ ಬಿದ್ದ ಪರಿಣಾಮ ಭಾರೀ ನೀರು ಬಂದು ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಹರಿದಿದೆ. ಕೆಸರು ಮಿಶ್ರಿತ ನೀರು ಮಾತ್ರವಲ್ಲದೆ ದೊಡ್ಡ ಕಲ್ಲುಗಳು, ಮರಮಟ್ಟುಗಳೂ, ಕೆಸರು ರಸ್ತೆಗೆ ಬಿದ್ದಿದೆ. ಇದರಿಂದ ಸಂಜೆ ವೇಳೆ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮೃತ್ಯುಂಜಯ ನದಿ ತೀರದಲ್ಲಿರುವ ಅಡಕೆ ತೋಟಗಳಿಗೆ ಮಂಗಳವಾರವೂ ನೀರು ನುಗ್ಗಿದು ಕಂಡುಬಂತು. ಮಳೆಯೇ ಇಲ್ಲದಿದ್ದರೂ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದು ನದಿ ದಡದಲ್ಲಿರುವ ನಿವಾಸಿಗಳು ಕಂಗಾಲಾಗಿದ್ದಾರೆ.

ನೇತ್ರಾವತಿಯಲ್ಲಿ ಸೋಮವಾರ ಸಂಜೆ ಭಾರಿ ನೀರು ಕಂಡುಬಂದು 2019ರ ಚಿತ್ರಣ ಮತ್ತೆ ಮರುಕಳಿಸಬಹುದೇನೋ ಎಂಬ ಆತಂಕ ಮೂಡಿತ್ತು. ನದಿ ದಡದಲ್ಲಿದ್ದ ಕೆಲ ಜನರನ್ನು ಸ್ಥಳಾಂತರವೂ ಮಾಡಲಾಗಿತ್ತು. ಆದರೆ ಮಂಗಳವಾರ ನೇತ್ರಾವತಿ ಶಾಂತವಾಗಿ ಹರಿಯುತ್ತಿರುವುದು ಕಂಡು ಬಂತು. ಮೃತ್ಯುಂಜಯ ನದಿ ಮಾತ್ರ ಸಂಜೆ ಉಕ್ಕಿ ಹರಿದಿದ್ದರೂ ರಾತ್ರಿ ವೇಳೆ ನೀರಿನ ಮಟ್ಟ ತಗ್ಗಿದೆ. ಬಂಡಾಜೆ ಹಳ್ಳದಿಂದ ಕೆಸರು ಮಿಶ್ರಿತ ನೀರು ಬಂದಿದೆ.