ದಿಢೀರ್‌ ಬೆಲೆ ಕುಸಿತ, ಟೊಮೆಟೊ ರಸ್ತೆಗೆ ಸುರುವಿ ಪ್ರತಿಭಟನೆ

| Published : Mar 24 2025, 12:33 AM IST

ದಿಢೀರ್‌ ಬೆಲೆ ಕುಸಿತ, ಟೊಮೆಟೊ ರಸ್ತೆಗೆ ಸುರುವಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಲೆ ದಿಢೀರ್ ಕುಸಿದ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿಯಲ್ಲಿ ಮಾರಾಟಕ್ಕೆ ತಂದ ಟೊಮೆಟೊ ರಸ್ತೆಗೆ ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಲಕ್ಷ್ಮೇಶ್ವರ: ಬೆಲೆ ದಿಢೀರ್ ಕುಸಿದ ಹಿನ್ನೆಲೆಯಲ್ಲಿ ಪಟ್ಟಣದ ಎಪಿಎಂಸಿಯಲ್ಲಿ ಮಾರಾಟಕ್ಕೆ ತಂದ ಟೊಮೆಟೊ ರಸ್ತೆಗೆ ಸುರಿದು ರೈತರು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಕಳೆದ ಹಲವು ದಿನಗಳಿಂದ ಟೊಮೆಟೊ ಮಾರುಕಟ್ಟೆಯಲ್ಲಿ ಕೊಳ್ಳುವವರು ಇಲ್ಲದೆ ಬೆಲೆ ಪಾತಾಳ ಕಂಡಿದೆ. ಭಾನುವಾರ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಬಾಕ್ಸ್ ಒಂದಕ್ಕೆ ₹50ರಿಂದ ₹100ಗಳ ವರೆಗೆ ಮಾರಾಟವಾಗಿದೆ. ತಾವು ಖರ್ಚು ಮಾಡಿದ ಹಣ, ಆಳಿನ ಖರ್ಚು ಹಾಗೂ ಮಾರುಕಟ್ಟೆಗೆ ತರುವ ಗಾಡಿಯ ಖರ್ಚು ಕೂಡಾ ಮೈಮೇಲೆ ಬೀಳುವುದರಿಂದ ಆಕ್ರೋಶಗೊಂಡ ರೈತರು ಟೊಮೆಟೊ ಹಣ್ಣನ್ನು ರಸ್ತೆಗೆ ಸುರಿದು ಆಕ್ರೋಶ ಹೊರಹಾಕಿದ್ದಾರೆ.

ಬೇಸಿಗೆ ಹಂಗಾಮಿನಲ್ಲಿ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿ ತಾಲೂಕಿನ ಲಕ್ಷ್ಮೇಶ್ವರ, ಹುಲ್ಲೂರು, ಯಲವಿಗಿ, ಸವಣೂರು, ಬಸವನಕೊಪ್ಪ, ಕಡಕೋಳ, ಅಮರಾಪುರ ಸೇರಿದಂತೆ ವಿವಿಧ ಗ್ರಾಮದ ರೈತರು ಬೆಳಗ್ಗೆಯೇ ಮಾರುಕಟ್ಟೆಗೆ ಟೊಮೆಟೊ ತಂದಿದ್ದರು. ಆದರೆ ಬಾಕ್ಸ್ ಒಂದಕ್ಕೆ (೨೦-೨೫ ಕಿಲೋ) ಕೇವಲ ₹ ೩೦-೫೦ರ ವರೆಗೆ ಮಾರಾಟವಾಗುತ್ತಿದ್ದಂತೆ, ರೈತರು ಆಘಾತಕ್ಕೊಳಗಾದರು. ಅಲ್ಲದೆ ಕಳೆದ ಒಂದು ವಾರದಿಂದಲೂ ದರ ಏರಿಕೆ ಕಾಣದೆ ಇರುವುದು ಹಾಗೂ ಭಾನುವಾರ ದಿಢೀರ್ ಕುಸಿತ ಕಂಡ ಹಿನ್ನೆಲೆಯಲ್ಲಿ ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದರು.ಎಕರೆ ಟೊಮೆಟೊ ಬೆಳೆಯಲು ಸಾವಿರಾರು ರು. ಖರ್ಚು: ಲಕ್ಷ್ಮೇಶ್ವರ, ಶಿರಹಟ್ಟಿ, ಸವಣೂರು ತಾಲೂಕಿನ ರೈತರು ಸುಮಾರು ೧೦೦ - ೨೦೦ ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಬೆಲೆ ಕುಸಿತ ಕಂಡ ಬೆನ್ನಲ್ಲೇ ಟೊಮೆಟೊ ಮಾರುಕಟ್ಟೆಗೆ ಕೊಂಡೊಯ್ಯಲು ಮನಸ್ಸು ಬಾರದೆ ಹೊಲದಲ್ಲಿ ಹಾಗೆ ಬಿಟ್ಟಿರುವುದು ಕೂಡಾ ಕಂಡು ಬರುತ್ತಿದೆ. ಒಂದು ಎಕರೆಗೆ ₹ ೮೦- ೯೦ ಸಾವಿರ ಖರ್ಚು ಮಾಡಿ ರೈತರು ಟೊಮೆಟೊ ಬೆಳೆದಿದ್ದರು. ಇದೀಗ ಬೆಲೆ ಇಲ್ಲದೇ ಇರುವುದು ರೈತರು ಸಾಲದ ಸುಳಿಯಲ್ಲಿ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಾಡಿದ ಖರ್ಚು ಸಹ ಕೈಗೆ ಸಿಗುತ್ತಿಲ್ಲ: ಹುಲ್ಲೂರು ಗ್ರಾಮದ ರಮೇಶ ಕೆರೆಕೊಪ್ಪ, ಶಂಭು ಮೇಟಿ ಹಾಗೂ ಬಸನಕೊಪ್ಪದ ಯಲ್ಲಪ್ಪ ಇಟಗಿ, ಯಲವಿಗಿಯ ಮಂಜುನಾಥ ಮಲಸಮುದ್ರ, ಮಾರುತಿ ಒಡ್ಡರ, ಕಡಕೋಳದ ಚಂದ್ರು ದಡೆಪ್ಪನವರ ಮುಂತಾದ ರೈತರು ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ.

ಒಂದು ಟೊಮೆಟೊ ಬಾಕ್ಸ್‌ಗೆ ₹ ೩೦-೫೦ ಇದ್ದು, ಖರ್ಚು ಮಾಡಿದ ಹಣವು ಬಾರದಂತಾಗಿದೆ. ರೈತರ ಟೊಮೆಟೊ ಸಸಿ ನಾಟಿ ಮಾಡಿದ ಒಂದು ತಿಂಗಳು ಕಳೆದು ಫಸಲು ಕೈಗೆ ಬರುವಷ್ಟರಲ್ಲಿ ದರ ಕುಸಿದಿದೆ. ಒಂದು ಬಾಕ್ಸ್ ಟೊಮೆಟೊ ಮಾರುಕಟ್ಟೆಗೆ ಬರಲು ಕೂಲಿ, ಗಾಡಿ ಬಾಡಿಗೆ, ದಲಾಲಿ ಇವುಗಳನ್ನು ನೀಡಲು ಸಹ ಹಣ ಸಾಲದಂತಾಗಿದೆ. ರೈತರು ಹಣ್ಣು ತಂದು ಪೇಟೆಯಲ್ಲಿ ಸುರಿದು ಖಾಲಿ ಬಾಕ್ಸ್ ತೆಗೆದುಕೊಂಡು ಹೋಗುವಂತಾಗಿದೆ. ಸರ್ಕಾರ ಎಲ್ಲದ್ದಕ್ಕೂ ಬೆಂಬಲ ಬೆಲೆ ನೀಡುತ್ತಾರೆ. ಆದರೆ ರೈತರು ಬೆಳೆದ ಟೊಮೆಟೊ ಬೆಲೆ ಕುಸಿದು ಪಾತಾಳ ಕಂಡಿದ್ದರೂ ತೋಟಗಾರಿಕೆ ಇಲಾಖೆ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಮಾರುಕಟ್ಟೆಯಲ್ಲಿ ಯಾವ ತರಕಾರಿ ಬೆಲೆ ಕುಸಿತ ಕಂಡಿದೆ ಎಂಬುದನ್ನು ಅರಿತು ಅದಕ್ಕೆ ಉತ್ತಮ ಬೆಲೆ ಬರುವಂತೆ ಮಾಡುವ ನಿಟ್ಟಿನಲ್ಲಿ ಯೋಚನೆ ಮಾಡದಿರುವುದು ನೋವಿನ ಸಂಗತಿಯಾಗಿದೆ. ಸರ್ಕಾರ ಕೂಡಾ ಈ ಬಗ್ಗೆ ಚಿಂತನೆ ಮಾಡಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.