ಸಾರಾಂಶ
ಬ್ಯಾಡಗಿ: ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಅನಾಹುತಗಳಿಗೆ ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ಕಾರಣವೆಂದು ಆರೋಪಿಸಿ ಸುಭಾಸ್ ಪ್ಲಾಟ್ ನಿವಾಸಿಗಳು ಕರವೇ ಸಂಘಟನೆಗಳೊಂದಿಗೆ ಹಠಾತ್ ಪ್ರತಿಭಟನೆ ನಡೆಸಿದ್ದಲ್ಲದೇ ಸುಮಾರು 3 ತಾಸಿಗೂ ಅಧಿಕ ಕಾಲ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಸ್ಥಗಿತಗೊಳಿಸಿದರು.
ಸುಮಾರು 200ಕ್ಕೂ ಹೆಚ್ಚು ಸುಭಾಸ್ ಪ್ಲಾಟ್ ನಿವಾಸಿಗಳು ರಸ್ತೆಗೆ ಅಡ್ಡಲಾಗಿ ಕಲ್ಲು ಬೊಂಬು ಹಾಗೂ ಮರದ ದಿಮ್ಮಿಗಳನ್ನಿಟ್ಟು ಪ್ರತಿಭಟನೆ ನಡೆಸಲಾರಂಭಿಸಿದರು. ಪ್ರತಿಭಟನೆಯಿಂದಾಗಿ ನೂರಾರು ಸಂಖ್ಯೆಯಲ್ಲಿ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು.ಕರವೇ ಮುಖಂಡ ಹನುಮಂತ ಭೋವಿ ಮಾತನಾಡಿ, ರಾಜಕಾಲುವೆಗೆ ಹೊಂದಿಕೊಂಡು ಸುಭಾಸ್ ಪ್ಲಾಟ್ ನಿವಾಸಿಗಳಿದ್ದು ಕಳೆದ ಆರೇಳು ದಶಕದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆನೀರು ನುಗ್ಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಯಾರೂ ಸಿದ್ಧರಿಲ್ಲ ಎಂದು ಆರೋಪಿಸಿದರು.
ಜೀವ ಕೈಯಲ್ಲಿಟ್ಟುಕೊಂಡು ಬದುಕುತ್ತಿದ್ದೇವೆ: ಬಸವರಾಜ ಹಾವನೂರ ಮಾತನಾಡಿ, ಸುಭಾಸ್ ಪ್ಲಾಟ್, ಇಸ್ಲಾಂಪುರಗಲ್ಲಿ ಶಿವಪುರ ಬಡಾವಣೆ ಇನ್ನಿತರ ಕಡೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಳಿಸಿದೆ, ಹೆದ್ದಾರಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಎತ್ತರಕ್ಕೆ ನಿರ್ಮಿಸಿ ನೀರು ಸರಾಗವಾಗಿ ಹೋಗುವಂತೆ ಮಾಡಬೇಕು ಹಾಗೂ ರಾಜ ಕಾಲುವೆ ಒತ್ತುವರಿ ತೆರವುಗೊಳಿಸಿ ದುರಸ್ತಿ ಕಾರ್ಯ ನಡೆಸುವಂತೆ ಬಿಗಿಪಟ್ಟು ಹಿಡಿದರು.ಸ್ಥಳಕ್ಕೆ ಅಧಿಕಾರಿಗಳನ್ನು ಕರೆತನ್ನಿ: ಸಮಜಾಯಿಷಿ ನೀಡಲು ಪೊಲೀಸ್ ಅಧಿಕಾರಿಗಳು ಮುಂದಾದರೂ ಪ್ರಯೋಜನವಾಗಲಿಲ್ಲ, ಇದರಲ್ಲಿ ಜನಪ್ರತಿನಿಧಿಗಳ ಪಾತ್ರವಿಲ್ಲ ಬದಲಾಗಿ ಅಧಿಕಾರಿಗಳ ನಿರ್ಲಕ್ಷ್ಯವೇ ಹೆಚ್ಚಾಗಿದೆ, ಕಾಮಗಾರಿ ವಿಳಂಬಕ್ಕೆ ಸೂಕ್ತ ಕಾರಣ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿಗಳು:ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಪ್ರತಿಭಟನಾಕಾರರಿಗೆ ಸಮಜಾಯಿಷಿ ನೀಡಿದರು. ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಸರ್ವೇ ನಡೆಸಿ ಒತ್ತುವರಿದಾರರನ್ನು ಹೊರಹಾಕಿ ರಾಜಕಾಲುವೆ ಕಾಮಗಾರಿ ಆರಂಭಿಸಲಾಗುವುದು, ಅಲ್ಲಿಯವರೆಗೂ ಸ್ವಲ್ಪ ತಾಳ್ಮೆಯಿಂದ ಇರುವಂತೆ ಮನವಿ ಮಾಡಿದರು, ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.ಸ್ಥಳ ಪರಿಶೀಲನೆ: ಜಿಲ್ಲಾಧಿಕಾರಿಗಳೊಂದಿಗೆ ತೆರಳಿದ ಸ್ಥಳೀಯ ಅಧಿಕಾರಿಗಳು ರಾಜ ಕಾಲವೆಯ ವಾಸ್ತವ ಸಂಗತಿಗಳನ್ನು ತಿಳಿಸಿದರು, ವಿವಿಧ ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಅಲ್ಲಿಯ ವರೆಗೆ ಧೈರ್ಯದಿಂದ ಇರುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರ ಪುತ್ರ ನಿಂಗರಾಜ ಶಿವಣ್ಣನವರ, ದಾನಪ್ಪ ಚೂರಿ, ಮಂಜುನಾಥ ಕೋಡಿಹಳ್ಳಿ, ಮುನ್ನ ಎರೇಶೀಮಿ ದುರ್ಗೇಶ ಗೋಣೆಮ್ಮನವರ, ರಫೀಕ್ ಮುದಗಲ್ಲ, ಮೆಹಬೂಬ ಅಗಸನಹಳ್ಳಿ, ನಾಗರಾಜ ಆನವೇರಿ, ಉಪ ವಿಭಾಗಾಧಿಕಾರಿ ಚನ್ನಬಸಪ್ಪ, ತಹಸೀಲ್ದಾರ್ ಫಿರೋಜ್‌ಶಾ ಸೋಮನಕಟ್ಟಿ, ಮುಖ್ಯಾಧಿಕಾರಿ ವಿನಯಕುಮಾರ, ಸಿಪಿಐ ಮಹಾಂತೇಶ ಲಂಬಿ, ಪಿಎಸ್‌ಐ ಅರವಿಂದ, ಎಎಸ್‌ಐ ಯು.ಎಂ.ನಂದಿಗೌಡ್ರ ಇನ್ನಿತರರಿದ್ದರು.