ಸಮರ್ಪಕ ಬಸ್‌ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

| Published : Dec 21 2023, 01:15 AM IST

ಸಮರ್ಪಕ ಬಸ್‌ ಸೌಲಭ್ಯಕ್ಕಾಗಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ನಿತ್ಯ ಗ್ರಾಮೀಣ ಪ್ರದೇಶಗಳಿಂದ ಜಿಲ್ಲಾ ಕೇಂದ್ರ ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ನಗರಗಳಿಗೆ ಹೈಸ್ಕೂಲ್, ಕಾಲೇಜ ಶಿಕ್ಷಣಕ್ಕೆ ಹೋಗುತ್ತಿದ್ದು, ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಅಂತಿಮ ವರ್ಷದ ಪದವಿ ತರಗತಿಗಳು ಶುರುವಾದರೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಕನ್ನಡಪ್ರಭ ವಾರ್ತೆ ಶಿರಹಟ್ಟಿ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಓಡಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ತಿಂಗಳಲ್ಲಿ ಮೂರು ಬಾರಿ ಬಸ್‌ ತಡೆದು ಪ್ರತಿಭಟನೆ ನಡೆಸಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದು, ಪ್ರತಿಭಟನಾ ಸ್ಥಳಕ್ಕೆ ಶಾಸಕರು ಆಗಮಿಸಿ ನಮ್ಮ ಮನವಿ ಸ್ವೀಕರಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಅವರ ಮಾತಿಗೂ ಕವಡೆ ಕಾಸಿನ ಕಿಮ್ಮತ್ತು ನೀಡದೆ ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಚೆಲ್ಲಾಟವಾಡುತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಬುಧವಾರ ಬೆಳಗ್ಗೆ ೮ ಗಂಟೆಯಿಂದಲೇ ನೂರಾರು ವಿದ್ಯಾರ್ಥಿಗಳು ಶಿರಹಟ್ಟಿ ಬಸ್ ನಿಲ್ದಾಣದಲ್ಲಿ ಬಸ್ ತಡೆದು ದೀಢೀರ್ ಪ್ರತಿಭಟನೆ ನಡೆಸಿದರು. ಈ ವೇಳೆ ಸುನೀಲ ಸಾಳುಂಕೆ, ಲಕ್ಷ್ಮಣ ಲಮಾಣಿ ಮಾತನಾಡಿ, ಈಗಾಗಲೆ ಪದವಿ ಎಂಜನಿಯರಿಂಗ್ ಮತ್ತು ಡಿಪ್ಲೋಮಾ ತರಗತಿಗಳು ಪ್ರಾರಂಭವಾಗಿವೆ.ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದು, ನಿತ್ಯ ಬಸ್ ತೊಂದರೆಯಿಂದ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ.

ನಿತ್ಯ ಗ್ರಾಮೀಣ ಪ್ರದೇಶಗಳಿಂದ ಜಿಲ್ಲಾ ಕೇಂದ್ರ ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ನಗರಗಳಿಗೆ ಹೈಸ್ಕೂಲ್, ಕಾಲೇಜ ಶಿಕ್ಷಣಕ್ಕೆ ಹೋಗುತ್ತಿದ್ದು, ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಅಂತಿಮ ವರ್ಷದ ಪದವಿ ತರಗತಿಗಳು ಶುರುವಾದರೂ ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳಿಗೆ ಸಾರಿಗೆ ಸಂಚಾರ ತೊಂದರೆಯಾಗಿ ಪರಿಣಮಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಿಗದಿತ ಸಮಯಕ್ಕೆ ಬಸ್ ಓಡಿಸಬೇಕು ಎಂದು ಆಗ್ರಹಿಸಿದರು.

ಕರವೇ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ವಡವಿ, ಕುಂದುಕೊರತೆ ಸಂಘಟನೆ ಅಧ್ಯಕ್ಷ ಅಕಬರ ಯಾದಗಿರಿ ಮಾತನಾಡಿ, ದಿನಕ್ಕೊಂದು ಅಥವಾ ಎರಡು ಬಸ್‌ಗಳು ಸಂಚರಿಸುವ ಬಹುತೇಕ ಹಳ್ಳಿಗಳು ತಾಲೂಕಿನಲ್ಲಿವೆ. ಇಂತಹ ಹಳ್ಳಿಯ ವಿದ್ಯಾರ್ಥಿಗಳು ತರಗತಿಯ ಸಮಯಕ್ಕೆ ಶಾಲೆ-ಕಾಲೇಜುಗಳಿಗೆ ಬರಲು ಸಾಧ್ಯವಾಗುತ್ತಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಬರಿ ಹಾರಿಕೆ ಉತ್ತರ ನೀಡಿ ಸಮಜಾಯಿಸಿ ಕಳಿಸುತ್ತಾರೆ. ಸರ್ಕಾರ ಶೈಕ್ಷಣಿಕ ಅಭಿವೃದ್ಧಿಗೆ ಏನೆಲ್ಲ ಸೌಲಭ್ಯ ನೀಡಿದರೂ ಅದು ಉಪಯೋಗಕ್ಕೆ ಬರದಂತಾಗಿದೆ ಎಂದು ದೂರಿದರು.

ಪ್ರತಿಭಟಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಇಲಾಖೆ ಅಧಿಕಾರಿ:

ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿ ಒಂದು ತಾಸು ಕಳೆದ ನಂತರ ಸಾರಿಗೆ ಇಲಾಖೆ ಡಿಪೋ ಮ್ಯಾನೇಜರ್ ಶಾಂತಾಬಾಯಿ ಕದಂಪೂರ ಸ್ಥಳಕ್ಕೆ ಆಗಮಿಸಿ ಮತ್ತೆ ಅದೇ ಉತ್ತರ ಹೇಳಲು ಮುಂದಾದಾಗ ವಿದ್ಯಾರ್ಥಿಗಳು ಸಿಟ್ಟಿಗೆದ್ದು, ನಿಮ್ಮ ಹಾರಿಕೆ ಉತ್ತರ ನಮಗೆ ಬೇಕಿಲ್ಲ. ನೀವು ಸಧ್ಯದ ಪರಿಸ್ಥಿತಿ ಹತೋಟಿಗೆ ತರಲು ಮಾತ್ರ ಭರವಸೆ ನೀಡುತ್ತಿದ್ದು, ನಿತ್ಯ ನಮಗಾಗುವ ತೊಂದರೆಗೆ ಕಿಂಚಿತ್ತು ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ತುರ್ತು ಬೆಳಗ್ಗೆ ೭ಗಂಟೆ, ೮ಗಂಟೆ, ೯ ಗಂಟೆಗೆ ಒಂದರಂತೆ ಶಾಲಾ ಕಾಲೇಜ ಅವಧಿಯಲ್ಲಿ ಬಸ್ ಓಡಿಸುವುದಾಗಿ ಲಿಖಿತ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆ ಕೈಬಿಡುವುದಾಗಿ ಬಿಗಿಪಟ್ಟು ಹಿಡಿದರು. ಎರಡು ಮೂರು ತಾಸು ಸಾರ್ವಜನಿಕರೂ ಕೂಡ ಸಂಚಾರಕ್ಕೆ ಪರದಾಡುವಂತಾಯಿತು.

ನಂತರ ಡಿಪೋ ಮ್ಯಾನೇಜರ್ ಶಾಂತಾಬಾಯಿ ಕದಂಪೂರ ಅವರು ಜಿಲ್ಲಾ ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿ ಜಿ.ಆರ್.ಬಸವಂತಪೂರ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ವಾಸ್ತವ ಸ್ಥಿತಿ ತಿಳಿಸಿದರು. ಅವರ ಸೂಚನೆಯಂತೆ ಎರಡು ಮೂರು ದಿನಗಳಲ್ಲಿ ಬಸ್ ಓಡಿಸುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ಮೂರು ದಿನಗಳ ಒಳಗಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡದಿದ್ದರೆ ಎಲ್ಲ ವಿದ್ಯಾರ್ಥಿಗಳ ಪರವಾಗಿ ಮತ್ತೆ ಬಸ್ ನಿಲ್ದಾಣದಲ್ಲಿ ಬಸ್ ತಡೆ ಹಿಡಿದು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸುರೇಶ ಲಮಾಣಿ, ಸಂತೋಷ ರಾಠೋಡ, ಕಿರಣ ಮಜ್ಜಿಗುಡ್ಡ, ಪರಶುರಾಮ ಪೂಜಾರ ಎಚ್ಚರಿಸಿದ್ದಾರೆ.