ಸಾರಾಂಶ
ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದಿಸದಿರುವುದಕ್ಕೆ ಆಕ್ರೋಶಶಿರಹಟ್ಟಿ:ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜುಗಳಿಗೆ ಹೋಗುತ್ತಿರುವ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲದೇ ಇರುವುದರಿಂದ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಆಗುತ್ತಿಲ್ಲ. ಅನೇಕ ಬಾರಿ ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸೋಮವಾರ ಬಸ್ ನಿಲ್ದಾಣದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮಾತನಾಡಿ, ನಿತ್ಯ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ವಿದ್ಯಾರ್ಥಿಗಳು ಹೈಸ್ಕೂಲ್ ಮತ್ತು ಕಾಲೇಜ್ ಶಿಕ್ಷಣಕ್ಕೆ ಹೋಗುತ್ತಿದ್ದು, ಬಸ್ ವ್ಯವಸ್ಥೆ ಇಲ್ಲದೇ ಪರದಾಡುವಂತಾಗಿದೆ. ಬೆಳಗ್ಗೆ ಸಮಯಕ್ಕೆ ಸರಿಯಾಗಿ ಪ್ರತ್ಯೇಕವಾಗಿ ಬಸ್ ಓಡಿಸಬೇಕು ಎಂದು ಆಗ್ರಹಿಸಿದರು.ಗ್ರಾಮೀಣ ಪ್ರದೇಶಗಳಿಂದ ಜಿಲ್ಲಾ ಕೇಂದ್ರ ಗದಗ, ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ ನಗರಗಳಿಗೆ ವಿದ್ಯಾರ್ಥಿಗಳು ಹೋಗುತ್ತಿದ್ದು, ಬೆಳಗಿನ ಸಮಯದಲ್ಲಿ ಬಸ್ ಇಲ್ಲದೆ ಪರದಾಡುವಂತಾಗಿದೆ. ಈ ಸಮಯ ತಪ್ಪಿದಲ್ಲಿ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಮೇಲಾಗಿ ಬಸ್ ಕೂಡ ವಾರದಲ್ಲಿ ಎರಡು, ಮೂರು ದಿನ ಬರುವುದೇ ಇಲ್ಲ. ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ಏನೆಲ್ಲ ಅನುಕೂಲತೆಗಳನ್ನು ಕಲ್ಪಿಸಿದ್ದರೂ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವಂತಾಗಿದೆ ಎಂದು ಆರೋಪಿಸಿದರು.
ನಮ್ಮ ಓದಿಗೆ ಹಿನ್ನಡೆಯಾಗುತ್ತಿದೆ. ತರಗತಿಗಳಿಗೆ ಹಾಜರಾಗಲು ಬಹಳ ತೊಂದರೆಯಾಗುತ್ತಿದೆ. ಸಮಯಕ್ಕೆ ಸರಿಯಾಗಿ ಬಸ್ ಓಡಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ ಸ್ಪಂದಿಸುತ್ತಿಲ್ಲ. ಎರಡು-ಮೂರು ದಿನಕ್ಕೊಮ್ಮೆ ಬೆಳಗ್ಗೆ ಒಂದೇ ಬಸ್ ಬರುತ್ತಿದ್ದು, ಬಸ್‌ಗಳು ಭರ್ತಿಯಾಗಿ ಬರುತ್ತಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಾಗೆ ಪ್ರತ್ಯೇಕ ಬಸ್ ಓಡಿಸಬೇಕೆಂದು ಆಗ್ರಹಿಸಿದರು.ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಗ್ರಾಮದಿಂದ ಸಂಚರಿಸುವ ರಸ್ತೆಯುದ್ದಕ್ಕೂ ಕಾಡು ಬೆಳೆದಿದ್ದು, ವಿದ್ಯಾರ್ಥಿಗಳು ಭಯದಲ್ಲಿಯೇ ಬೆಳಗಿನ ಜಾವ ನಡೆದು ಬರುತ್ತಿದ್ದು, ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಬಸ್ ಓಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಾರಿಗೆ ಇಲಾಖೆ ಮೇಲಧಿಕಾರಿಗಳು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಬೇಕು. ತುರ್ತಾಗಿ ಸಮಯಕ್ಕೆ ಸರಿಯಾಗಿ ಬಸ್ ಓಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ದಿಢೀರ್ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಕೆಲಹೊತ್ತು ಬಸ್ ಓಡಿಸದ್ದಕ್ಕೆ ಪ್ರಯಾಣಿಕರು ಪರದಾಡುವಂತಾಯಿತು.ಅಧಿಕಾರಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಮೊದಲಿನಂತೆ ಗ್ರಾಮೀಣ ಪ್ರದೇಶಗಳಿಂದ ಬಸ್ ಓಡಿಸಲು ಕ್ರಮ ತೆಗೆದುಕೊಳ್ಳಬೇಕು. ವಿಳಂಬ ನೀತಿ ಅನುಸರಿಸಿದಲ್ಲಿ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಿನ್ನಡೆಗೆ ಅವಕಾಶವಾಗದಂತೆ ಕ್ರಮ ತೆಗೆದುಕೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ತಂದೆ ತಾಯಿಗಳು ನಮಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಲಿ ಎಂಬ ದೃಷ್ಟಿಯಿಂದ ಕಷ್ಟಪಟ್ಟು ಬೆಳಗ್ಗೆಯೆ ಊಟ-ತಿಂಡಿ ಮಾಡಿ ಕೊಟ್ಟು ನಗರಕ್ಕೆ ಕಳುಹಿಸುತ್ತಾರೆ. ಆದರೆ ನಮಗೆ ಸೂಕ್ತ ಬಸ್‌ಗಳೇ ಸಿಗದೇ ಶಾಲೆಗೆ ಹೋಗಲು ತಡವಾದಾಗ ನಮ್ಮ ಜೊತೆ ಅವರು ದುಃಖ ಪಡುತ್ತಾರೆ. ಬಸ್ ಪಾಸ್ ತೆಗೆದುಕೊಂಡರೂ ಪ್ರಯೋಜನವಿಲ್ಲದಾಗಿದೆ. ಆದ್ದರಿಂದ ಸಿಕ್ಕ ಯಾವುದೇ ವಾಹನಗಳಲ್ಲಿ ಶಾಲೆಗೆ ಹೋಗುವ ಅನಿವಾರ್ಯತೆ ಎದುರಾಗಿದೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನೋವಿನಿಂದ ಅಳಲು ತೋಡಿಕೊಂಡರು.