ಸಾರಾಂಶ
ಬೀದಿಗಿಳಿ ನಗರಸಭೆಯ ಹಾಲಿ, ಮಾಜಿ ಸದಸ್ಯರು । ಗಂಟೆಗೂ ಹೆಚ್ಚುಕಾಲ ರಸ್ತೆತಡೆ, ಸಂಚಾರ ಅಸ್ತವ್ಯಸ್ತಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದಲ್ಲಿ ನಿರ್ಮಿಸಲಾಗಿರುವ ಅವೈಜ್ಞಾನಿಕ ಡಿವೈಡರ್‌ಗಳನ್ನು ಕೂಡಲೇ ತೆರವುಗೊಳಿಸಬೇಕೆಂದು ನಗರಸಭೆಯ ಹಾಲಿ ಮತ್ತು ಮಾಜಿ ಸದಸ್ಯರು ಹಾಗೂ ಸಾರ್ವಜನಿಕರು ಮಂಗಳವಾರ ಬೀದಿಗಳಿದು ಪ್ರತಿಭಟನೆ ನಡೆಸಿದರು. ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್‌ನಿಂದ ಬಿಡಿ ರಸ್ತೆಗೆ ಸಂಪರ್ಕಿಸುವ ಮಾರ್ಗದಲ್ಲಿ ಅವೈಜ್ಞಾನಿಕವಾಗಿ ಡಿವೈಡರ್ ನಿರ್ಮಿಸಿದ್ದು, 50 ಮೀಟರ್‌ನಷ್ಟು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.ಗಂಟೆಗೂ ಅಧಿಕ ಹೊತ್ತು ಪ್ರತಿಭಟಿಸಿದ ಕಾರಣ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿ ಅಸ್ತವ್ಯಸ್ತವಾಯಿತು. ತೆರವುಗೊ ಳಿಸಲು ಕ್ರಮವ ಹಿಸದ ಹೊರತು ಇಲ್ಲಿಂದ ಕದಲುವುದಿಲ್ಲವೆಂದು ಪ್ರತಿಭಟನಾಕಾರರು ಬಿಗಿ ಪಟ್ಟು ಹಿಡಿದು ಆಕ್ರೋಶ ಹೊರಹಾಕಿದರು. ಪೊಲೀಸರು ಸಮಾಧಾನಪಡಿಸಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕೋರಿದರೂ ಪಟ್ಟು ಸಡಿಲಿಸಲಿಲ್ಲ.ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಚಳ್ಳಕೆರೆ, ಬೆಂಗಳೂರಿನಿಂದ ನಗರ ಪ್ರವೇಶಿಸುವ, ಸಿಟಿಯೊಳಗಿನಿಂದ ಬರುವ ವಾಹನಗಳು ತಿರುವು ಪಡೆಯುವಾಗ ಒಂದಕ್ಕೊಂದು ಕಾಣದಂತೆ ಅವೈಜ್ಞಾನಿಕವಾಗಿ ರಸ್ತೆ ವಿಭಜಕ ನಿರ್ಮಿಸಿರುವ ಕಾರಣ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳಿಗೆ ಹಾನಿ ಆಗುತ್ತಿದೆಯೇ ಹೊರತು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಯಾರಾದರೂ ಮೃತಪಟ್ಟರೆ, ಯಾರು ಹೊಣೆ ಎಂದು ಪ್ರಶ್ನಿಸಿದರು.
ಈ ಮಾರ್ಗದಲ್ಲಿ ಹೆಚ್ಚಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ನಡೆದುಕೊಂಡು, ವಾಹನಗಳಲ್ಲಿ ಬರುತ್ತಾರೆ. ಕೆಲವೊಮ್ಮೆ ಅಪಘಾತಗಳಾಗಿವೆ. ಮಕ್ಕಳಿಗೂ ತೊಂದರೆಯಾಗುವ ಸಾಧ್ಯತೆಗಳೇ ಹೆಚ್ಚಿದೆ. ಆದ್ದರಿಂದ ತೆರವುಗೊಳಿಸಲೇಬೇಕು ಎಂದು ಒತ್ತಾಯಿಸಿದರು.ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲೂ ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಕೂಡ ಅವೈಜ್ಞಾನಿಕವೆಂದು ಹೇಳಿ ತೆರವಿಗೆ ಕ್ರಮವಹಿಸುವುದಾಗಿ ಹೇಳಿದ್ದರು. ಪೊಲೀಸರಿಗೆ ಇಲ್ಲಿನ ಸಮಸ್ಯೆ ತಿಳಿದಿದ್ದರೂ ಸಂಬಂಧಿಸಿದವರ ಗಮನಕ್ಕೆ ತರುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅರವಿಂದ್ ಗಾರ್ಮೆಂಟ್ಸ್ ಮುಂಭಾಗ ಈ ಹಿಂದೆ ರಸ್ತೆ ವಿಭಜಕ ನಿರ್ಮಿಸಿ, ಮೂರು ದಿನದಲ್ಲಿ ಅಧಿಕಾರಿಗಳು ತೆರವುಗೊಳಿ ಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಗಾಗಿ ನಾವು ಪ್ರತಿಭಟಿಸಿದರೆ, ಕಾನೂನಿನ ಬಗ್ಗೆ ಮಾತನಾಡುತ್ತಾರೆ. ಆಗ ಅಡ್ಡಿಯಾಗದ ಕಾನೂನು ಈಗೇಕೆ ಎಂದು ಪ್ರಶ್ನಿಸಿದರು. ಭರವಸೆ ಆಗದೆ, ಕಾರ್ಯಗತವಾಗಬೇಕು. ಇಲ್ಲದಿದ್ದರೆ, ಜೆಸಿಬಿ ಮೂಲಕ ತೆರವು ಗೊಳಿಸಲಾಗುವುದು. ಯಾವುದೇ ಪ್ರಕರಣ ದಾಖಲಿಸಿದರೂ ಎದುರಿಸಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.ನಗರಸಭೆ ಸದಸ್ಯ ಜೆ.ಎಸ್.ದೀಪಕ್, ಮುಖಂಡರಾದ ಅಂಜಿನಪ್ಪ, ಪಿ.ತಿಪ್ಪೇಸ್ವಾಮಿ, ಮಂಜುನಾಥ್, ಎಸ್.ನಾಗೇಶ್, ಆರ್.ಮಂಜುನಾಥ್, ವಿ.ಎನ್.ರುಜತ್, ಜಗದೀಶ್, ಎನ್.ಶರಣಪ್ಪ, ಓಬಳೇಶ, ಎನ್.ಪ್ರವೀಣ್, ಕೆ.ಎನ್.ಸುನೀಲ್, ಶಿವು, ಹರೀಶ್, ಕೆ.ವಿನಾಯಕ, ಆರ್.ಅನುಕುಮಾರ್, ಸಿ.ಏಕಾಂತ, ಬಿ.ಮಂಜುನಾಥ್, ಟಿ.ಆರ್.ಗುರುಪ್ರಸಾದ್ ಸೇರಿ ನೂರಾರು ಮಂದಿ ಇದ್ದರು.
----------------ಡಿವೈಡರ್‌ಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜಿಲ್ಲಾಧಿಕಾರಿಗಳೂ, ಶಾಸಕರು ಹಾಗೂ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು. - ಎಂ.ರೇಣುಕಾ, ನಗರಸಭೆ ಪೌರಾಯುಕ್ತೆ-----------------