ಸಾರಾಂಶ
ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧೨ ಗಂಟೆಯ ವರೆಗೆ ನಡೆದ ಪ್ರತಿಭಟನೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚಿನ ಟ್ಯಾಂಕರ್ ಲಾರಿ ಚಾಲಕರು ಭಾಗವಹಿಸಿದ್ದರು.
ಕನ್ನಡಪ್ರಭ ವಾರ್ತೆ ಮಂಗಳೂರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪೆಟ್ರೋಲ್ ಸಾಗಾಟದ ಟ್ಯಾಂಕರ್ ಲಾರಿ ಚಾಲಕರು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ಪೆಟ್ರೋಲ್ ಪ್ಲಾಂಟ್ ಬಳಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು. ಟ್ಯಾಂಕ್ ಫೀಲಿಂಗ್‌ನ್ನು ಬೆಳಗ್ಗೆ ೯ಗಂಟೆಯಿಂದ ಆರಂಭಿಸಿ ಸಂಜೆ ೬ ಗಂಟೆಗೆ ಮುಕ್ತಾಯಗೊಳಿಸಬೇಕು. ತಿಂಗಳಿಗೆ ಆರು - ಏಳು ಸಾವಿರ ಕಿ.ಮೀ. ಟ್ರಿಪ್ ನೀಡಲಾಗುತ್ತಿತ್ತು. ಪ್ರಸ್ತುತ ಅದನ್ನು ೨ ಸಾವಿರ ಕಿ.ಮೀ. ನಿಗದಿಪಡಿಸಲಾಗಿದೆ. ಪ್ರತಿ ಕಿ.ಮೀ. ಗೆ ಕೇವಲ ೬ ರು. ನೀಡುತ್ತಿದ್ದು, ಇದರಿಂದ ಚಾಲಕರಿಗೆ ಸಂಬಳದ ಕೊರತೆ ಉಂಟಾಗುತ್ತಿದೆ. ಹಾಗಾಗಿ ಮೊದಲಿನಂತೆ ಆರು-ಏಳು ಸಾವಿರ ಕಿ.ಮೀ. ಟ್ರಿಪ್ ನೀಡಬೇಕು. ಲಾರಿ ಚಾಲಕರಿಗೆ ತೊಂದರೆ ನೀಡುತ್ತಿರುವ ರಾಜ್ ಗಟ್ಟಿ ಎಂಬ ಪ್ಲಾನಿಂಗ್ ಅಧಿಕಾರಿಯನ್ನು ವರ್ಗಾಯಿಸಬೇಕು. ವರ್ಷದಲ್ಲಿ ಹಬ್ಬಕ್ಕೆ ಚಾಲಕರಿಗೆ ೧೦ ರಜೆ ಇದ್ದು, ಆ ರಜೆಯನ್ನು ಚಾಲಕರಿಗೆ ಸರಿಯಾಗಿ ನೀಡಬೇಕು ಎಂದು ಬೇಡಿಕೆಗಳನ್ನು ಪ್ರತಿಭಟನಾನಿರತ ಟ್ಯಾಂಕರ್ ಚಾಲಕರು ಮುಂದಿಟ್ಟರು. ಪ್ರತಿಭಟನೆಯ ಮಾಹಿತಿ ತಿಳಿದು ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್‌ನ ಅಧಿಕಾರಿಗಳು ಹಾಗೂ ಟ್ಯಾಂಕರ್ ಲಾರಿ ಮಾಲಕರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಚಾಲಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಆ ಬಳಿಕ ಚಾಲಕರು ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಬೆಳಗ್ಗೆ ೧೧ರಿಂದ ಮಧ್ಯಾಹ್ನ ೧೨ ಗಂಟೆಯ ವರೆಗೆ ನಡೆದ ಪ್ರತಿಭಟನೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚಿನ ಟ್ಯಾಂಕರ್ ಲಾರಿ ಚಾಲಕರು ಭಾಗವಹಿಸಿದ್ದರು.