ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣ ಅಕ್ರಮವಾಗಿ ನಡೆದಿದೆ ಎಂದು ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಅಧಿಕಾರಿಗಳು ಸ್ಪಂದಿಸದೆ ಇದ್ದಾಗ ದಿಢೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ ನಡೆಸಿದರು.ಪಟ್ಟಣದ ಹಳೇ ಪ್ರವಾಸಿ ಮಂದಿರದಿಂದ ಜಿಲ್ಲಾ ರೈತಸಂಘದ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ, ರಾಜ್ಯ ಮುಖಂಡ ಡಾ.ಗುರುಪ್ರಸಾದ್ ನೇತೃತ್ವದಲ್ಲಿ ರೈತಸಂಘದ ಕಾರ್ಯಕರ್ತರು ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿ ತಮ್ಮ ಆಕ್ರೋಶ ಹೊರ ಹಾಕಿದರು. ತಾಲೂಕು ಕಚೇರಿಗೆ ಜಮಾಯಿಸಿದ ಪ್ರತಿಭಟನಕಾರರು ಧರಣಿ ನಡೆಸಿ ಮತ್ತೆ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಪೊಲೀಸ್ ಇಲಾಖೆ ಅಧಿಕಾರಿ ಹೊರತು ಪಡಿಸಿ ಇತರೆ ಅಧಿಕಾರಿಗಳು ಸ್ಥಳಕ್ಕೆ ಬರದೆ ಇದ್ದಾಗ ಆಕ್ರೋಶಗೊಂಡ ರೈತರು ಮೈಸೂರು-ಊಟಿ ಹೆದ್ದಾರಿಗೆ ಬಂದು ರಸ್ತೆ ತಡೆ ನಡೆಸಿದರು. ರಸ್ತೆತಡೆಯಿಂದ ಸಾವಿರಾರು ವಾಹನಗಳ ಹೆದ್ದಾರಿಯಲ್ಲಿ ಸಾಲು ಗಟ್ಟಿ ನಿಂತವು. ಇತ್ತ ರೈತರು ರಾಜ್ಯ ಸರ್ಕಾರ ಹಾಗು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾಗ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ರೈತರ ಮನವಿ ಆಲಿಸಿದರು.
ರಸ್ತೆತಡೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಿಮ್ಮ ಸಮಸ್ಯೆಗಳೇನಿದ್ದರೂ ನನಗೆ ಹೇಳಿ ಅಧಿಕಾರಿಗಳ ಸಭೆ ಕರೆಸುವೆ ಅಲ್ಲಿ ಸಮಸ್ಯೆಗಳ ಹೇಳಿ ಎನ್ನುತ್ತಿದ್ದಾಗ ರೈತರೊಬ್ಬರು ಸಿಎಫ್, ಎಸಿಎಫ್ ಸಸ್ಪೆಂಡ್ ಮಾಡಿಸಿ ಎಂದು ಕೂಗಿದಾಗ ಶಾಸಕರು ಸಸ್ಪೆಂಡ್ ಮಾಡಿಸುವುದಾದರೆ ನೀವೇ ಮಾಡಿಸಿಕೊಳ್ಳಿ ಎಂದರು. ಮತ್ತೆ ರೈತರೊಂದಿಗೆ ಚರ್ಚಿಸಿದ ಶಾಸಕರು ಚಿತ್ರೀಕರಣಕ್ಕೆ ಪಿಸಿಸಿಎಫ್ ನೀಡಿದ್ದಾರೆ. ಚಿತ್ರೀಕರಣ ಅನುಮತಿ ಸಿಕ್ಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ತಪ್ಪಾಗಿದ್ದರೆ ನೋಡೋಣ ರಸ್ತೆ ತಡೆ ಬಿಡಿ ಎಂದರು. ಶಾಸಕರ ಮಾತಿಗೆ ರೈತರು ಸ್ಪಂದಿಸಿ ತಾಲೂಕು ಕಚೇರಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಅಧಿಕಾರಿಗಳನ್ನು ಕಳುಹಿಸಿ ಎಂಬ ಬೇಡಿಕೆ ಇಟ್ಟಾಗ ಶಾಸಕರು ತಹಸೀಲ್ದಾರ್ ಇಲ್ಲ, ಇನ್ನೂಳಿದ ಅಧಿಕಾರಿಗಳು ಬರುತ್ತಾರೆ ಎಂದಾಗ ರಸ್ತೆತಡೆಗೆ ಬ್ರೇಕ್ ಬಿದ್ದಿದೆ. ಪ್ರತಿಭಟನೆಯಲ್ಲಿ ಕುಂದಕೆರೆ ಸಂಪತ್ತು ಸೇರಿದಂತೆ ರೈತಸಂಘದ ಕಾರ್ಯಕರ್ತರು ಇದ್ದರು.ಎಸಿಎಫ್, ಆರ್‌ಎಫ್‌ಒಗೆ ಬೆವರಿಳಿಸಿದ ರೈತರು:
ಪಟ್ಟಣದ ತಾಲೂಕು ಕಚೇರಿ ನಡೆಯುತ್ತಿದ್ದ ರೈತಸಂಘದ ಧರಣಿ ಸ್ಥಳಕ್ಕಾಗಮಿಸಿದ ಎಸಿಎಫ್ ಎನ್.ಪಿ.ನವೀನ್ ಕುಮಾರ್, ಆರ್‌ಎಫ್ ಒ ಬಿ.ಎಂ.ಮಲ್ಲೇಶ್‌ರನ್ನು ರೈತಸಂಘದ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಕೇರಳ ಭಾಷೆಯ ಸಿನಿಮಾಗೆ ಅನುಮತಿ ಕೊಟ್ಟವರು ಯಾರು?ಅನುಮತಿ ಕೊಟ್ಟ ಬಳಿಕ ನೀವು ತೆಗೆದುಕೊಂಡ ಕ್ರಮವೇನು? ಲಕ್ಷ ರು. ಕಟ್ಟಿಸಿಕೊಂಡಿದ್ದರಲ್ಲ ಯಾವ ರೀತಿ? ನಿಮಗೆ ಅನುಮತಿ ನೀಡಿದ ಆದೇಶ ಕೊಡಿ ಎಂದು ರೈತರು ತರಾಟೆಗೆ ತೆಗೆದುಕೊಂಡರು. ಮುಜರಾಯಿ ಇಲಾಖೆಗೆ ಸೇರಿದ ಜಾಗದಲ್ಲಿ ಸಿನಿಮಾ ಶೂಟಿಂಗ್ ತೆಗೆಯಲು ನೀವೇಕೆ ಹಣ ಕಟ್ಟಿಸಿಕೊಂಡಿದ್ದೀರಾ ಹೇಳಿ ಎಂದು ರೈತರು ಪ್ರಶ್ನಿಸಿದಾಗ ಎಸಿಎಫ್,ಆರ್‌ಎಫ್ ಒ ಮಾತಿಲ್ಲದೆ ತಲೆ ತಗ್ಗಿಸಿ ನಿಂತರು.ಖಾಸಗಿ ಕೇಸ್ ಹಾಕಲು ನಿರ್ಧಾರ:
ಗೋಪಾಲಸ್ವಾಮಿ ಬೆಟ್ಟದಲ್ಲಿ ಸಿನಿಮಾ ಚಿತ್ರೀಕರಣ ಸಂಬಂಧ ಬಂಡೀಪುರ ಅಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಲು ರೈತಸಂಘ ನಿರ್ಧರಿಸಿದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಹೇಳಿದರು. ಸಿನಿಮಾ ಚಿತ್ರೀಕರಣಕ್ಕೆ ರಾಜ್ಯ ಮಟ್ಟದಲ್ಲಿ ಅನುಮತಿ ಸಿಕ್ಕಿದೆ. ಆದರೆ ಸ್ಥಳೀಯವಾಗಿ ಚಿತ್ರೀಕರಣ ಸಂಬಂಧ ನಿಯಮಗಳನ್ನು ಪಾಲಿಸಿಲ್ಲ. ಅಕ್ರಮ ಎಸಗಿದ ಅಧಿಕಾರಿಗಳ ಮೇಲೆ ಕ್ರಮವಾಗದಿದ್ದಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲಾಗುವುದು ಎಂದರು.ದಿಡೀರ್ ಪ್ರತಿಭಟನೆಗೆ ಪ್ರವಾಸಿಗರ ಆಕ್ರೋಶ:ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತ ಸಂಘದ ಕಾರ್ಯಕರ್ತರು ಹೆದ್ದಾರಿಯಲ್ಲಿ ೫೭ ನಿಮಿಷ ರಸ್ತೆ ತಡೆ ನಡೆದ ಕಾರಣ ಸಾರ್ವಜನಿಕರಿಗೆ ಆಗುವ ತೊಂದರೆಗೆ ಬ್ರೇಕ್ ಬೀಳೋದು ಯಾವಾಗ ಎಂದು ಪ್ರವಾಸಿಗರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ. ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳ ಭಾಷೆಯ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದು ಸರಿಯಲ್ಲ. ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಟ್ಟಣದಲ್ಲಿ ರೈತಸಂಘದ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಅಧಿಕಾರಿಗಳು ಬಾರದಿದ್ದಾಗ ದಿಢೀರ್ ರಸ್ತೆ ತಡೆ ನಡೆಸಿದರು. ಹೆದ್ದಾರಿ ತಡೆ ತೆರವು ಮಾಡಿಸಲು ಸ್ಥಳೀಯ ಪೊಲೀಸರಿಂದ ಆಗಲಿಲ್ಲ. ರೈತರ ಆಕ್ರೋಶದ ನುಡಿಗೆ ಪೊಲೀಸರು ಮೌನವಾದ ಕಾರಣ ಹೆದ್ದಾರಿ ಬದಿಯ ರಸ್ತೆಯಲ್ಲಿ ನಿಂತ ನೂರಾರು ವಾಹನಗಳಲ್ಲಿದ್ದ ಜನರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನಡೆಸಲಿ ಬೇಡ ಅನ್ನಲ್ಲ, ಆದರೆ ದಿಢೀರ್ ರಸ್ತೆ ತಡೆ ಅದು ಸರಿ ಸುಮಾರು ೧ ಗಂಟೆ ಆದರೆ ಪ್ರಯಾಣಿಕರಿಗೆ ತೊಂದರೆಯಾಗಿದೆ ಇದಕ್ಕೆ ಯಾರು ಹೊಣೆ ಎಂದು ಪೊಲೀಸರನ್ನು ಪ್ರಶ್ನಿಸಿದರು.