ಪೌರಕಾರ್ಮಿಕರ ಸಂಘದ ಕಚೇರಿ ಉದ್ಘಾಟನೆ ಧಿಡೀರ್‌ ಬಂದ್: ಪ್ರತಿಭಟನೆ

| Published : Nov 20 2025, 12:45 AM IST

ಸಾರಾಂಶ

ಹುಬ್ಬಳ್ಳಿಯ ಜನತಾ ಬಜಾರ್‌ನ ಮೂರನೇ ಮಹಡಿಯಲ್ಲಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಕಚೇರಿ ಉದ್ಘಾಟನೆ ಕಾರ್ಯಕ್ರಮ ದಿಢೀರ್‌ ಬಂದ್ ಮಾಡಿದ ಮಹಾನಗರ ಪಾಲಿಕೆ ಕ್ರಮವನ್ನು ಖಂಡಿಸಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿ:

ಇಲ್ಲಿನ ಜನತಾ ಬಜಾರ್‌ನ ಮೂರನೇ ಮಹಡಿಯಲ್ಲಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಕಚೇರಿ ಉದ್ಘಾಟನೆ ಕಾರ್ಯಕ್ರಮ ದಿಢೀರ್‌ ಬಂದ್ ಮಾಡಿದ ಮಹಾನಗರ ಪಾಲಿಕೆ ಕ್ರಮವನ್ನು ಖಂಡಿಸಿ ಪೌರಕಾರ್ಮಿಕರು ರಾಯಣ್ಣ ವೃತ್ತದ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ರಾಯಣ್ಣ ವೃತ್ತದಿಂದ ಚೆನ್ನಮ್ಮ ವೃತ್ತದ ಮಾರ್ಗದ ರಸ್ತೆ ಸಂಚಾರವನ್ನು ಕೆಲಕಾಲ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆಯಾಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಜನತಾ ಬಜಾರ್ ಕಟ್ಟಡದ ಸುತ್ತಮುತ್ತ ಭದ್ರತೆ ಒದಗಿಸಿದ್ದರು. ಸಂಘದ ಕಚೇರಿಗೆ ಪ್ರವೇಶ ನಿಷೇಧಿಸಿದ್ದರು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ, ಸಂಘದ ಕಚೇರಿಗೆ ಪಾಲಿಕೆಯ ಅಧೀನದ ಜನತಾ ಬಜಾರ್ ಕಟ್ಟಡದ 3ನೇ ಮಹಡಿಯಲ್ಲಿ ಕೊಠಡಿ ನೀಡಲಾಗಿತ್ತು. ಅಲ್ಲದೇ, ಕೊಠಡಿಯ ನವೀಕರಣಕ್ಕೆ ನೀಡಿದ ₹3 ಲಕ್ಷ ಅನುದಾನದಲ್ಲಿ ನವೀಕರಿಸಲಾಗಿದೆ. ಪಾಲಿಕೆ ಅಧಿಕಾರಿಗಳು ಮಂಗಳವಾರ ಏಕಾಏಕಿ ಉದ್ಘಾಟನೆ ನಡೆಸದಂತೆ ತಡೆಹಿಡಿದು ಗೊಂದಲ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದ ಅವರು, ಒಂದು ವಾರದಲ್ಲಿ ಆದೇಶ ಪ್ರತಿ ನೀಡದಿದ್ದರೆ, ಸ್ವಚ್ಛತಾ ಕಾರ್ಯ ಬಂದ್ ಮಾಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದರು.