ಡಿಕೆಶಿಯಿಂದ ದಿಢೀರ್‌ ಮೃದು ಹಿಂದುತ್ವ ಜಪ

| Published : Feb 28 2025, 12:48 AM IST

ಸಾರಾಂಶ

ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಬಿಜೆಪಿ ಜತೆಗಿನ ಸಖ್ಯದ ವದಂತಿ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಬಿಜೆಪಿ ಜತೆಗಿನ ಸಖ್ಯದ ವದಂತಿ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮೃದು ಹಿಂದುತ್ವ ಧೋರಣೆ ಅನುಸರಿಸುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಹಾಕುಂಭ ಮೇಳದ ಕುರಿತು ವ್ಯತಿರಿಕ್ತ ಹೇಳಿಕೆ ನೀಡಿದ ನಂತರವೂ ಶಿವಕುಮಾರ್‌ ಅವರು ಕುಟುಂಬ ಸಮೇತರಾಗಿ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದರು. ನಂತರ ತಾವು ಮಹಾಕುಂಭ ಮೇಳದಲ್ಲಿ ಪಾಲ್ಗೊಂಡಿದ್ದನ್ನು ಸಮರ್ಥಿಸಿಕೊಂಡು, ನಂಬಿದ್ದನ್ನು ಪಾಲಿಸುವುದು ನನ್ನ ವೈಯಕ್ತಿಕ. ನಾನು ಹಿಂದುವಾಗಿ ಹುಟ್ಟಿದ್ದು, ಹಿಂದುವಾಗಿಯೇ ಸಾಯುತ್ತೇನೆ ಎಂಬ ಹೇಳಿಕೆಗಳನ್ನೂ ನೀಡಿದ್ದರು. ಅದರ ಜತೆಗೆ ಮಹಾಕುಂಭ ಮೇಳ ಆಯೋಜನೆ ಬಗ್ಗೆ ಹೊಗಳಿಕೆಯ ಮಾತನ್ನಾಡಿ, ಪರೋಕ್ಷವಾಗಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅದರ ಜತೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪಾಲ್ಗೊಂಡಿದ್ದ ಇಶಾ ಯೋಗ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಮಿತ್‌ ಶಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಹಾಗೆಯೇ, ಇಶಾ ಯೋಗ ಕೇಂದ್ರದ ಕಾರ್ಯಕ್ರಮದ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅನುಭವ ಹಂಚಿಕೊಂಡಿದ್ದರು.

ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರ ನಾಯಕರು, ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಅದರ ನಡುವೆ ಶಿವಕುಮಾರ್‌ ಅವರು ಹಿಂದುತ್ವದ ಪರವಾದ ಮಾತುಗಳು, ಮೃದು ಹಿಂದುತ್ವ ಧೋರಣೆ ಅಳ‍ಡಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿ ನೀಡುವಂತಿದೆ. ಅಲ್ಲದೆ, ಶಿವಕುಮಾರ್‌ ಅವರ ಈ ಎಲ್ಲ ನಡೆಗಳು ಬಿಜೆಪಿ ನಾಯಕರ ಜತೆಗಿನ ಸಂಪರ್ಕದ ವದಂತಿಗೆ ಪುಷ್ಟಿ ನೀಡುವಂತಿದೆ ಎಂಬ ಚರ್ಚೆ ಶುರುವಾಗುವಂತಾಗಿದೆ.