ಜಿಲ್ಲಾ ಆಸ್ಪತ್ರೆ, ಮಹಿಳಾ- ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತರ ಹಠಾತ್ ಭೇಟಿ

| Published : Feb 05 2024, 01:47 AM IST

ಜಿಲ್ಲಾ ಆಸ್ಪತ್ರೆ, ಮಹಿಳಾ- ವಿದ್ಯಾರ್ಥಿ ನಿಲಯಕ್ಕೆ ಉಪ ಲೋಕಾಯುಕ್ತರ ಹಠಾತ್ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ಜಿಲ್ಲಾ ಆಸ್ಪತ್ರೆ, ರಾಜ್ಯ ಮಹಿಳಾ ನಿಲಯ, ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಉಪ ಲೋಕಾಯುಕ್ತ ಫಣೀಂದ್ರ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಭಾನುವಾರ ಉಡುಪಿ ಜಿಲ್ಲಾ ಆಸ್ಪತ್ರೆ, ರಾಜ್ಯ ಮಹಿಳಾ ನಿಲಯ, ವಿದ್ಯಾರ್ಥಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ಮೂಲ ಸೌಕರ್ಯ, ಪೌಷ್ಟಿಕ ಆಹಾರ, ಸ್ವಚ್ಛತೆ, ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ ಸೇರಿದಂತೆ ಮತ್ತಿತರ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್, ಪುರುಷರ ಹಾಗೂ ಮಹಿಳಾ ವಾರ್ಡ್ ಮಕ್ಕಳ ವಾರ್ಡ್, ತುರ್ತು ಚಿಕಿತ್ಸಾ ಘಟಕ, ಔಷಧ ವಿತರಣ ಕೇಂದ್ರ ದೂರು ಪೆಟ್ಟಿಗೆಗಳಲ್ಲಿ ನೀಡಿದ ದೂರುಗಳನ್ನು ಸಹ ಪರಿಶೀಲಿಸಿದರು. ರೋಗಿಗಳಿಂದ ಚಿಕಿತ್ಸೆ, ಊಟದ ವ್ಯವಸ್ಥೆ, ಔಷಧಗಳ ನೀಡುವಿಕೆ ಬಗ್ಗೆ ಮಾಹಿತಿ ಪಡೆದರು.

ಜಿಲ್ಲಾ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿಸಲು, ಹೊಸದಾಗಿ ನ್ಯೂರೋಲಾಜಿ, ನೆಫ್ರೋಲಾಜಿ, ಕಾರ್ಡಿಲಾಜಿ ವಿಭಾಗಗಳನ್ನು ತೆರೆಯಲು ಮನವಿ ಪತ್ರವನ್ನು ನೀಡಿದರೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು.

ಮಕ್ಕಳೊಂದಿಗೆ ಸಮಾಲೋಚಿಸಿದ ಉಪಲೋಕಾಯುಕ್ತರು ಅವರಿಗೆ ಸರಿಯಾದ ಪೌಷ್ಟಿಕ ಆಹಾರ, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಹಾಸಿಗೆ - ಹೊದಿಕೆ, ಸ್ವಚ್ಛ ವಾತಾವರಣ ನಿರ್ಮಿಸುವ ಜೊತೆಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ಗ್ರಂಥಾಲಯ, ಕಂಪ್ಯೂಟರ್ ಹಾಗೂ ಉನ್ನತ ಜ್ಞಾನಾರ್ಜನೆಗಾಗಿ ಸ್ಪರ್ಧಾತ್ಮಕ, ನಾಗರಿಕ ಸೇವಾ ಪರೀಕ್ಷೆ ಎದುರಿಸಲು ಮಾಸಿಕ ವಿಶೇಷ ಉಪನ್ಯಾಸ, ಪುಸ್ತಕ ಗಳ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ಪಡೆದು, ಸೂಕ್ತ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಜಿಪಂ ಸಿಇಒ ಪ್ರತೀಕ್ ಬಾಯಲ್, ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ. ಸೈಮನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ರಾಜ್ಯ ಲೋಕಾಯುಕ್ತ ಉಪನಿಬಂಧಕ ಎಂ.ವಿ.ಚೆನ್ನಕೇಶವ ರೆಡ್ಡಿ, ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.