ಸಾರಾಂಶ
ಬೆಂಗಳೂರು ದಕ್ಷಿಣ : ಸುಮಾರು 50 ಜನರ ತಂಡವೊಂದು ಏಕಾಏಕಿ ಮನೆ ಸಾಮಗ್ರಿಗಳನ್ನು ಹೊರಗೆ ಹಾಕಿ ಜೆಸಿಬಿಯಿಂದ ಮನೆಯನ್ನು ಕೆಡವಿ ಕುಟುಂಬಸ್ಥರ ಜೊತೆ ಅಸಭ್ಯವಾಗಿ ವರ್ತಿಸಿ ಜಾತಿ ನಿಂದನೆ ಮಾಡಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿರುವ ಕಾಳೇನ ಅಗ್ರಹಾರದಲ್ಲಿ ಸುಮಾರು 50 ವರ್ಷಗಳಿಂದ ವಾಸವಾಗಿರುವ ಕಾಳಪ್ಪ ಕುಟುಂಬದವರು ನಂಜುಂಡೇಗೌಡ ಅವರ ಮಕ್ಕಳು ಸೇರಿದಂತೆ 50 ಜನರ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕಾಳಪ್ಪ ಅವರಿಗೆ ನೀಡಿದ ಜಾಗವನ್ನು ಕಬ್ಜ ಮಾಡಿಕೊಳ್ಳಲು ಜಗಳ
ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕಾಳಪ್ಪ ಅವರಿಗೆ ಕಾಳೇನ ಅಗ್ರಹಾರದಲ್ಲಿ 60/40 ಅಡಿಯ ಜಾಗದಲ್ಲಿ ಮನೆ ಕಟ್ಟಿಕೊಟ್ಟು ಅವರ ಹೆಸರಿಗೆ ಕಾಗದ ಪತ್ರಗಳನ್ನು ನಂಜುಂಡೇಗೌಡರು ಮಾಡಿಕೊಟ್ಟಿದ್ದರು. ನಂಜುಂಡೇಗೌಡ ಮತ್ತು ಅವರ ಪತ್ನಿ ನಿಧನದ ನಂತರ ಅವರು ಮಕ್ಕಳು ಕಾಳಪ್ಪ ಅವರಿಗೆ ನೀಡಿದ ಜಾಗವನ್ನು ಕಬ್ಜ ಮಾಡಿಕೊಳ್ಳಲು ಜಗಳವಾಡಿ ಹಲವಾರು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು.
ಪೊಲೀಸರಿಗೆ ಹಲವಾರು ಬಾರಿ ದೂರಿತ್ತರೂ ಪ್ರಯೋಜನವಾಗಿರಲಿಲ್ಲ
ಈ ಕುರಿತು ಕಾಳಪ್ಪ ಅವರ ಕುಟುಂಬ ಪೊಲೀಸರಿಗೆ ಹಲವಾರು ಬಾರಿ ದೂರಿತ್ತರೂ ಪ್ರಯೋಜನವಾಗಿರಲಿಲ್ಲ. ಏಕಾಏಕಿ ಸ್ಥಳಕ್ಕೆ ಜೆಸಿಬಿಯೊಂದಿಗೆ ಆಗಮಿಸಿದ ನಂಜುಂಡೇಗೌಡರ ಮಕ್ಕಳು ಕಾಳಪ್ಪ ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೊಬೈಲ್ ಗಳನ್ನು ಕಸಿದುಕೊಂಡು, ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪ್ರಜಾ ಪರಿವರ್ತನಾ ವೇದಿಕೆ ರಾಷ್ಟ್ರಾಧ್ಯಕ್ಷ ಬಿ. ಗೋಪಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ್ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳು ಸಂತ್ರಸ್ತ ಕುಟುಂಬಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಟ್ಟು ಹುಳಿಮಾವು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

;Resize=(128,128))
;Resize=(128,128))
;Resize=(128,128))