ಸಾರಾಂಶ
‘ಕಿಚ್ಚ ಸುದೀಪ್ ಅವರಿಗೆ ಚಲನಚಿತ್ರೋತ್ಸವಕ್ಕೆ ಅಕಾಡೆಮಿ ಹಾಗೂ ಸಾಧು ಕೋಕಿಲ ಅವರಿಂದ ಯಾವುದೇ ಆಹ್ವಾನ ತಲುಪಿಲ್ಲ’ ಎಂದು ಸುದೀಪ್ ಆಪ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕಿಚ್ಚ ಸುದೀಪ್ ಅವರಿಗೆ ಚಲನಚಿತ್ರೋತ್ಸವಕ್ಕೆ ಅಕಾಡೆಮಿ ಹಾಗೂ ಸಾಧು ಕೋಕಿಲ ಅವರಿಂದ ಯಾವುದೇ ಆಹ್ವಾನ ತಲುಪಿಲ್ಲ’ ಎಂದು ಸುದೀಪ್ ಆಪ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದಾರೆ.ಈ ಕುರಿತು ಮಂಗಳವಾರ ಮಾತನಾಡಿರುವ ಅವರು, ‘ಕನ್ನಡದ ನೆಲ, ಜಲ, ಭಾಷೆಯ ಕುರಿತಂತೆ ಯಾವುದೇ ಪಕ್ಷಾತೀತ ಹೋರಾಟಗಳಿಗೆ ಕಲಾವಿದರು ಭಾಗವಹಿಸಿರುವ ಹಲವು ಉದಾಹರಣೆಗಳಿವೆ. ಅದು ನಮ್ಮ ಕರ್ತವ್ಯ. ಮುಂದೆಯೂ ಹೋರಾಟ ಇರುತ್ತದೆ. ಅದಕ್ಕೆ ಯಾವುದೇ ಆಹ್ವಾನ ಬೇಕಿಲ್ಲ. ಆದರೆ, ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಿಗೆ ಕನಿಷ್ಠ ಆಹ್ವಾನ ಕೊಡುವ ಸೌಜನ್ಯ ಇರಬೇಕು. ಇಲ್ಲಿ ಉಪ ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ. ಎಲ್ಲಾ ಕಲಾವಿದರಿಗೂ ಹೀಗೆ ಆಗಿದೆ’ ಎಂದು ಚಕ್ರವರ್ತಿ ಅಭಿಪ್ರಾಯ ಪಟ್ಟಿದ್ದಾರೆ.
‘ಇದೇ ರೀತಿ ನಟರಾದ ಸುದೀಪ್, ಯಶ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರುಗಳಿಗೆ ಚಿತ್ರೋತ್ಸವದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ತಲುಪಿಲ್ಲ’ ಎಂದಿದ್ದಾರೆ.‘ಸಾಧು ಕೋಕಿಲ ಅವರಿಗೆ ನಿಮ್ಮ ಪಕ್ಷದ ಬಗ್ಗೆ ಒಲವಿತ್ತು. ಅವರು ಬಂದು ಪಾದಯಾತ್ರೆಯಲ್ಲಿ ಪಾಲ್ಗೊಂಡರು, ರಸಮಂಜರಿ ಕಾರ್ಯಕ್ರಮ ಕೊಟ್ಟರು. ಈಗ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರೂ ಆದರು. ನಿಮ್ಮ ಪಕ್ಷ ಸಂಘಟನೆ ಮಾಡುವ ಕಾರ್ಯಕ್ರಮಗಳಿಗೆ ಸಿನಿಮಾದವರು ಬಂದಿಲ್ಲ ಅಂದಮಾತ್ರಕ್ಕೆ ಅವರಿಗೆ ಕನ್ನಡದ ಮೇಲೆ ಪ್ರೀತಿ ಇಲ್ಲ ಎನ್ನುವುದು ಎಷ್ಟು ಸರಿ’ ಎಂದು ಚಕ್ರವರ್ತಿ ಪ್ರಶ್ನೆ ಮಾಡಿದ್ದಾರೆ.
‘ಒಂದು ಪಕ್ಷದ ಕಾರ್ಯಕ್ರಮಕ್ಕೆ ಸಿನಿಮಾದವರು ಬರಲಿಲ್ಲ ಎಂದು ಅಧಿಕಾರಕ್ಕೆ ಬಂದ ಮೇಲೆ ಸೇಡಿನ ರಾಜಕಾರಣ ಮಾಡೋದು ಸರಿಯಲ್ಲ. ಇದು ತಮಿಳುನಾಡಿನ ಮಾದರಿಯಾಗುತ್ತದೆ. ಇದನ್ನು ಕರ್ನಾಟಕದವರು ಯಾರೂ ಸಹಿಸಿಕೊಳ್ಳುವುದಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಆಯಾ ಪಕ್ಷಗಳು ನೂರಾರು ಕಾರ್ಯಕ್ರಮಗಳು ಮಾಡುತ್ತವೆ. ಆ ಎಲ್ಲಾ ಕಾರ್ಯಕ್ರಮಗಳಿಗೆ ಸಿನಿಮಾದವರು ಹೋಗಬೇಕು ಅಂತ ಯಾವುದಾದರೂ ಕಾನೂನು ಇದೆಯೇ’ ಎಂದು ಚಕ್ರವರ್ತಿ ಪ್ರಶ್ನಿಸಿದ್ದಾರೆ.