ಅನಾರೋಗ್ಯದಿಂದ ಭಾನುವಾರ ನಿಧನರಾದ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಚಳ್ಳಕೆರೆ ಜೈನಧಾಮದಲ್ಲಿ ಸೋಮವಾರ ಸಂಜೆ ನೆರವೇರಿತು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಅನಾರೋಗ್ಯದಿಂದ ಭಾನುವಾರ ನಿಧನರಾದ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಚಳ್ಳಕೆರೆ ಜೈನಧಾಮದಲ್ಲಿ ಸೋಮವಾರ ಸಂಜೆ ನೆರವೇರಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಂಪುಟದ ಸಚಿವರು, ಶಾಸಕರು ಸೇರಿ ಹಲವು ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಅಗಲಿದ ನಾಯಕನಿಗೆ ತಮ್ಮ ಅಂತಿಮ ನಮನ ಸಲ್ಲಿಸಿದರು.

ಇದಕ್ಕೂ ಮೊದಲು, ಬೆಳಗ್ಗೆ 8ಕ್ಕೆ ಸ್ವಗೃಹದಿಂದ ಚಳ್ಳಕೆರೆಯ ಡಿ.ಸುಧಾಕರ್ ಸ್ಟೇಡಿಯಂಗೆ ಮೃತದೇಹವನ್ನು ತರಲಾಯಿತು. ಮಧ್ಯಾಹ್ನ 3ಗಂಟೆವರೆಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ವೇಳೆ, ಸಿಎಂ ಸಿದ್ಧರಾಮಯ್ಯ, ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಸಚಿವರು, ಶಾಸಕರು, ಶ್ರೀಗಳು ಸೇರಿ ಗಣ್ಯರು ಆಗಮಿಸಿ, ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು.

ಬಳಿಕ, 4 ಗಂಟೆಗೆ ಸುಧಾಕರ್ ಸೆಟಲ್‌ಕಾಕ್ ಕೋರ್ಟ್‌ನಲ್ಲಿನ ಜೈನಧಾಮಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಅಲ್ಲಿ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ, ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ, ಪೊಲೀಸರು ಮೂರು ಬಾರಿ ಕುಶಾಲು ತೋಪು ಸಿಡಿಸಿ, ಸರ್ಕಾರಿ ಗೌರವ ಸಲ್ಲಿಸಿದರು. ಮೃತರ ಸ್ಮರಣಾರ್ಥ ಮೌನಾಚರಣೆ ನಡೆಸಲಾಯಿತು. ಬಳಿಕ, ಸಿಎಂ ಸಿದ್ದರಾಮಯ್ಯ ಅವರು ಸುಧಾಕರ್ ಅವರ ಕುಟುಂಬಸ್ಥರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿ, ಗೌರವ ಸಲ್ಲಿಸಿದರು. ನಂತರ, ಜೈನ ಸಮುದಾಯದ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಲಾಯಿತು. ಡಿ.ಸುಧಾಕರ್ ಪುತ್ರ ಸುಹಾಸ್, ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿ, ತಂದೆಯವರ ಮೃತದೇಹಕ್ಕೆ ಅಗ್ನಿಸ್ಪರ್ಶ ನೆರವೇರಿಸಿದರು.

ಈ ವೇಳೆ, ‘ಬಡವರ ಬಂಧು ಡಿ.ಸುಧಾಕರ್‌ಗೆ ಜೈ’, ‘ಅಮರ್ ರಹೇ ಸುಧಾಕರ ಸಾಹೇಬ್ರು ಅಮರ್ ರಹೇ’ ಎಂಬ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು.