ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಪರೀಕ್ಷಾ ಪ್ರಾಕಾರವು (ಕೆಇಎ) ಸಿಇಟಿ ಅರ್ಜಿ ಸಲ್ಲಿಕೆ, ಕೌನ್ಸೆಲಿಂಗ್ ಸೇರಿ ಸಮಗ್ರ ಪ್ರಕ್ರಿಯೆಯನ್ನು ಮತ್ತಷ್ಟು ವಿದ್ಯಾರ್ಥಿ ಸ್ನೇಹಿಯಾಗಿ ಅಂಗೈನಲ್ಲೇ ಮಾಹಿತಿ ಒದಗಿಸುವ ಮೊಬೈಲ್ ಆ್ಯಪ್, ಎಐ ಆಧಾರಿತ ಚಾಟ್‌ಬಾಟ್ ಮತ್ತು ಕಾಲೇಜು ಪೋರ್ಟಲ್ ಜಾರಿಗೊಳಿಸಿದೆ.ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನಗರದ ಉನ್ನತ ಶಿಕ್ಷಣ ಪರಿಷತ್ ಕಚೇರಿಯಲ್ಲಿ ಈ ಮೂರೂ ಹೊಸ ಉಪಕ್ರಮಗಳಿಗೆ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿ, ಕೆಇಎ ವೆಬ್ ಸೈಟ್ ನಲ್ಲಿ ಲಭ್ಯವಾಗುವ ಎಲ್ಲ ಮಾಹಿತಿ ಈ ಆ್ಯಪ್ ನಲ್ಲಿ ಲಭ್ಯ ಇರುತ್ತದೆ. ಆ್ಯಪ್ ಮೂಲಕವೇ ಅರ್ಜಿ ಸಲ್ಲಿಕೆ, ಆಪ್ಷನ್ ಎಂಟ್ರಿ, ಛಾಯ್ಸ್ ಆಯ್ಕೆ, ಶುಲ್ಕ ಪಾವತಿ ಸೇರಿ ಎಲ್ಲ ಪ್ರಕ್ರಿಯೆಗಳನ್ನು ಮಾಡಬಹುದು. ವಿದ್ಯಾರ್ಥಿಗಳು ಸೈಬರ್ ಸೆಂಟರ್ ಅವಲಂಬನೆ ತಪ್ಪುತ್ತದೆ. ಪ್ಲೇ ಸ್ಟೋರ್ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಂಗೈನಲ್ಲೇ ಎಲ್ಲ ಮಾಹಿತಿ ವಿದ್ಯಾರ್ಥಿಗಳಿಗೆ ಸಿಗುತ್ತದೆ ಎಂದು ವಿವರಿಸಿದರು.ಚಾಟ್ ಬಾಟ್ : ಬುದ್ಧಿಮತ್ತೆ ತಂತ್ರಜ್ಞಾನದ(ಎಐ) ನೆರವಿನ ಚಾಟ್ ಬಾಟ್ ವ್ಯವಸ್ಥೆ ಬಳಸಿ ಅಭ್ಯರ್ಥಿಗಳು ತಮ್ಮ ಪ್ರಶ್ನೆ/ಅನುಮಾನಗಳಿಗೆ ನೇರವಾಗಿ ಉತ್ತರ ಪಡೆಯಬಹುದು. ಪ್ರಾಯೋಗಿಕ ಪರೀಕ್ಷೆಯಲ್ಲಿ ಈವರೆಗೂ 1.35 ಲಕ್ಷ ಅಭ್ಯರ್ಥಿಗಳು ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದಿದ್ದಾರೆ. ಕೆಇಎ ಪ್ರಕಟಿಸುವ ಎಲ್ಲ ಮಾಹಿತಿಯನ್ನು ಚಾಟ್ ಬಾಟ್ ವ್ಯವಸ್ಥೆಗೆ ಅಪ್ ಲೋಡ್ ಮಾಡಲಾಗುತ್ತದೆ. ಈ ಮಾಹಿತಿ ಆಧರಿಸಿ ಅಭ್ಯರ್ಥಿಗಳ ಪ್ರಶ್ನೆಗೆ ಚಾಟ್ ಬಾಟ್ ಉತ್ತರ ಒದಗಿಸುತ್ತದೆ. ಇದರಿಂದ ಮಾಹಿತಿಗಾಗಿ ಕೆಇಎ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಸದ್ಯ ಈ ವ್ಯವಸ್ಥೆ ಕೇವಲ ಇಂಗ್ಲಿಷ್ ನಲ್ಲಿ ಉತ್ತರ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಮಾಹಿತಿ ಸಿಗುವ ಹಾಗೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾಲೇಜು ಪೋರ್ಟಲ್:ಅಭ್ಯರ್ಥಿಗಳು ಆಪ್ಷನ್ ದಾಖಲಿಸುವ ವೇಳೆ ಯಾವ ಕಾಲೇಜು ಉತ್ತಮ, ಕೋರ್ಸುಗಳು, ಶುಲ್ಕ ಎಷ್ಟು, ಮೂಲಸೌಲಭ್ಯ, ಶೈಕ್ಷಣಿಕ ವಾತಾವರಣ, ಪ್ರಯೋಗಾಲಯ, ಕೊಠಡಿ, ಹಾಸ್ಟೆಲ್ ವ್ಯವಸ್ಥೆ ಹೀಗೆ ಸಾಕಷ್ಟು ಮಾಹಿತಿಗಾಗಿ ಅಲ್ಲಿ ಇಲ್ಲಿ ಕೇಳಬೇಕಾಗುತ್ತದೆ. ಆದರೆ, ಈಗ ಕಾಲೇಜು ಪೋರ್ಟಲ್‌ನಲ್ಲಿ ಎಲ್ಲ ಕಾಲೇಜುಗಳ ಪಟ್ಟಿ ಇರುತ್ತದೆ. ಆಯಾ ಕಾಲೇಜಿನಲ್ಲಿರುವ ಸೌಲಭ್ಯಗಳನ್ನು ವೀಕ್ಷಿಸಬಹುದು. ಇದನ್ನು ಕಾಲೇಜಿನವರೇ ಅಪ್ ಲೋಡ್ ಮಾಡಲು ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕ ರೀಕ್ಷಾ ಪ್ರಾಧಿಕಾರದ ಸ್ಪರ್ಧಾತ್ಮಕ ಪರೀಕ್ಷಾ ಪ್ರಕ್ರಿಯೆ ಸುಗಮಗೊಳಿಸಲು ಹಾಗೂ ಅಭ್ಯರ್ಥಿಸ್ನೇಹಿ ಆಗಿಸಲು ಕಾಲಕಾಲಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಸದಾ ಮುಂದಿದೆ. ಇದರ ಪರಿಣಾಮ ನಿಖರ ಸಮಯದಲ್ಲಿ ಖಚಿತ ಮಾಹಿತಿ ಲಭ್ಯವಾಗುತ್ತದೆ. ಅನಗತ್ಯ ಗೊಂದಲಕ್ಕೆ ತೆರೆ ಬೀಳುತ್ತದೆ. ಮಧ್ಯವರ್ತಿಗಳ ಹಾವಳಿ ಕೂಡ ತಪ್ಪುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಈ ವೇಳೆ ಉಪಸ್ಥಿತರಿದ್ದರು.