ಶಾಶ್ವತವಾಗಿ ನೀರಿನ ಬವಣೆ ನೀಗಿಸಲು ಸುಧಾಕರ್‌ ದಿಟ್ಟಹೆಜ್ಜೆ

| Published : Sep 04 2025, 02:00 AM IST

ಶಾಶ್ವತವಾಗಿ ನೀರಿನ ಬವಣೆ ನೀಗಿಸಲು ಸುಧಾಕರ್‌ ದಿಟ್ಟಹೆಜ್ಜೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಮತ್ತು ಅಲ್ಲಿನ 15 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸಲು 0.50 ಟಿಎಂಸಿ ನೀರು ಹಂಚಿಕೆ ಮಾಡಲು ಅನುಮೋದನೆ ನೀಡಿ ಎಂದು ಸಚಿವ ಡಿ.ಸುಧಾಕರ್ ಅವರು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಸಚಿವ ಡಿ.ಸುಧಾಕರ್ ತಾಲೂಕಿನ ನೀರಿನ ಬವಣೆಯನ್ನು ಶಾಶ್ವತವಾಗಿ ನೀಗಿಸಲು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಸತತವಾಗಿ ಬರಗಾಲಕ್ಕೆ ತುತ್ತಾಗುವ ಜೆಜಿ ಹಳ್ಳಿ ಹೋಬಳಿಯ ಜನತೆಯ ನೀರಿನ ಸಂಕಷ್ಟ ದೂರ ಮಾಡುವುದಕ್ಕೆ ಸತತ ಪ್ರಯತ್ನ ನಡೆಸಿದ್ದಾರೆ.

ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಮತ್ತು ಅಲ್ಲಿನ 15 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸಿ ಕುಡಿಯುವ ನೀರು ಮತ್ತು ಅಂತರ್ಜಲ ವೃದ್ಧಿಯ ಕಾಮಗಾರಿಗೆ 0.50 ಟಿಎಂಸಿ ನೀರು ಹಂಚಿಕೆ ಮಾಡಲು ಅನುಮೋದನೆ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ನೀರಿನ ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿವರಿಸಿ ನೀರಿನ ಅವಶ್ಯಕತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಜೆಜಿ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗವು ಪ್ರತಿ ವರ್ಷವೂ ಬರಗಾಲಕ್ಕೆ ತುತ್ತಾಗಿ ಆ ಭಾಗದ ಜನ ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಅಂತರ್ಜಲ ಮಟ್ಟ ಕುಸಿದು ತೋಟಗಾರಿಕೆ ಬೆಳೆಗಳಿಗೆ ನೀರು ಸಾಕಾಗದೆ ಒಣಗಿ ಹೋಗುವ ಪರಿಸ್ಥಿತಿಯನ್ನು ಕಳೆದ 20 ವರ್ಷಗಳಿಂದಲೂ ನೋಡಿಕೊಂಡು ಬಂದಿದ್ದಾರೆ. ಆ ಭಾಗದಲ್ಲಿ ಸುವರ್ಣಮುಖಿ ನದಿಗೆ ಅಡ್ಡಲಾಗಿ ಕಟ್ಟಿರುವ 0.97 ಟಿಎಂಸಿ ಸಾಮರ್ಥ್ಯದ ಗಾಯಿತ್ರಿ ಜಲಾಶಯವು 2022ನೇ ಸಾಲಿನಲ್ಲಿ ತುಂಬಿದ್ದು ಬಿಟ್ಟರೆ ಸತತವಾಗಿ ಎರಡು ದಶಕಗಳ ಕಾಲ ಮಳೆಯ ಕೊರತೆಯಿಂದ ಒಳ ಹರಿವು ಇಲ್ಲದೇ ನಲುಗಿದೆ. ಜೆಜಿ ಹಳ್ಳಿಯ ಗಾಯಿತ್ರಿ ಜಲಾಶಯ ಮತ್ತು ಚಿಕ್ಕನಾಯಕನಹಳ್ಳಿಯ ಬೋರನ ಕಣಿವೆ ಜಲಾಶಯಗಳು ಭದ್ರಾ ಮೇಲ್ದಂಡೆ ಯೋಜನೆ ವ್ಯಾಪ್ತಿಗೆ ಬರಲಿದ್ದು ಗಾಯಿತ್ರಿ ಜಲಾಶಯದ ಮೇಲ್ಭಾಗದಲ್ಲಿರುವ ಬೋರನ ಕಣಿವೆ ಜಲಾಶಯಕ್ಕೆ ಭದ್ರಾ ಮೇಲ್ದoಡೆ ಯೋಜನೆಯಡಿ 1 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ ಗಾಯಿತ್ರಿ ಜಲಾಶಯಕ್ಕೆ ಮೂಲ ಯೋಜನೆಯಡಿ ಯಾವುದೇ ನೀರಿನ ಹಂಚಿಕೆಯಾಗಿಲ್ಲ. ಸಾಲದು ಎಂಬಂತೆ ಗಾಯಿತ್ರಿ ಜಲಾಶಯದ ಮೇಲ್ಭಾಗದಲ್ಲಿ ನದಿಗೆ ಅಡ್ಡಲಾಗಿ ಅಲ್ಲಲ್ಲಿ ಚೆಕ್ ಡ್ಯಾoಗಳನ್ನು ನಿರ್ಮಿಸಲಾಗಿದ್ದು ಜಲಾಶಯಕ್ಕೆ ನೀರಿನ ಒಳ ಹರಿವಿನ ಮೂಲಗಳೇ ಇಲ್ಲದಂತಾಗಿದೆ. ಹಾಗಾಗಿ ಈ ಭಾಗದ ನೀರಿನ ಬವಣೆ ಬಗೆಹರಿಸುವ ನಿಟ್ಟಿನಲ್ಲಿ ತಾಲೂಕಿನ ಕೂನಿಕೆರೆ ಗ್ರಾಮದ ಹತ್ತಿರ ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ ಜಾಕ್ ವೆಲ್ ಪಂಪ್‌ಹೌಸ್ ನಿಂದ ನೀರನ್ನು ಸುಮಾರು 180 ಮೀ ಎತ್ತರಕ್ಕೆ ಪಂಪ್ ಮಾಡಿ ಜೆಜಿ ಹಳ್ಳಿ ಹೋಬಳಿಯ 15 ಕೆರೆಗಳಿಗೆ ತುಂಬಿಸಲು ಯೋಜಿಸಿದ್ದು ಈ ಯೋಜನೆಗೆ ಅಗತ್ಯವಿರುವ 0.50 ಟಿಎಂಸಿ ನೀರನ್ನು ಭದ್ರಾ ಮೇಲ್ದoಡೆ ಅಥವಾ ಸಣ್ಣ ನೀರಾವರಿ ಇಲಾಖೆ ವತಿಯಿಂದ ಮರು ಹಂಚಿಕೆ ಮಾಡುವಂತೆ ಕೋರಲಾಗಿತ್ತು. ಆನಂತರ ಸರ್ಕಾರದ ಹಂತದಲ್ಲಿ ಸಣ್ಣ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಹಾಗೂ ಕೃಷ್ಣ ನ್ಯಾಯಾಧೀಕರಣ ಪ್ರಧಾನ ಸಲಹೆಗಾರರ ಜೊತೆಗೆ ಫೆ.6-2025 ರಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಸಭೆ ನಡೆಸಿದ್ದರು. ಸಭೆಯಲ್ಲಿ ಸಚಿವರು 0.50 ಟಿಎಂಸಿ ನೀರು ಹಂಚಿಕೆಯ ಕಾರ್ಯ ಸಾಧುತ್ವದ ಬಗ್ಗೆ ವಿವರಿಸಿದ್ದರು. ಇದೀಗ ಜೆಜಿ ಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಹಾಗೂ 15 ಕೆರೆಗಳಿಗೆ ಏತ ನೀರಾವರಿ ಮೂಲಕ ನೀರು ತುಂಬಿಸುವ ಕಾಮಗಾರಿಗೆ 225 ಕೋಟಿ ರು. ಪ್ರಸ್ತಾವನೆಗೆ 2025-26ನೇ ಸಾಲಿನ ಆಯವ್ಯಯ ಅಂದಾಜಿನ ಅನುದಾನದಲ್ಲಿ ಮಂಜೂರಾತಿ ನೀಡಲಾಗಿದ್ದು ಸದರಿ ಕಾಮಗಾರಿ ಅನುಷ್ಠಾನಗೊಳಿಸಲು ಜಲ ಸಂಪನ್ಮೂಲ ಇಲಾಖೆಯಿಂದ 0.50 ಟಿಎಂಸಿ ನೀರಿನ ಹಂಚಿಕೆ ಮಾಡಲು ಅನುಮೋದನೆ ನೀಡಿ ಎಂದು ಸಚಿವ ಡಿ.ಸುಧಾಕರ್ ರವರು ಒತ್ತಾಯಿಸಿದ್ದಾರೆ.