ಸಾರಾಂಶ
ಬಳ್ಳಾರಿ: ಮನುಷ್ಯನ ಅತಿಯಾದ ಆಸೆಗಳಿಂದ ಪ್ರಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಮನುಷ್ಯನ ಬದುಕು ಅತ್ಯಂತ ಸಂಕಷ್ಟಕ್ಕೆ ಸಿಲುಕುವುದು ಖಚಿತ ಎಂದು ಪರಿಸರ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆಯ ತರಬೇತುದಾರರಾದ ಎಚ್.ಎಂ. ಲತಾ ತಿಳಿಸಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ''''''''ಎಕೋ ಕ್ಲಬ್ '''''''' ಹಾಗೂ ಬೆಂಗಳೂರಿನ ಪರಿಸರ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ''ಪ್ಲಾಸ್ಟಿಕ್ ನಿಷೇಧ ಮತ್ತು ಹವಾಮಾನ ಬದಲಾವಣೆ'' ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ವಿನಾಶದ ಅಂಚಿಗೆ ತಲುಪುತ್ತಿದೆ. ದಿನಬಳಕೆಯ ವಸ್ತುಗಳನ್ನು ತರಲು ಪ್ಲಾಸ್ಟಿಕ್ ಮೊರೆ ಹೋಗುತ್ತಿದ್ದೇವೆ. ಅದು ನೆಲದಲ್ಲಿ ಸೇರಿಕೊಂಡು ಮಳೆ ನೀರನ್ನು ಇಂಗಿಕೊಳ್ಳಲಾರದಂತೆ ತಡೆಯುತ್ತದೆ. ಇದರಿಂದಾಗಿ ಅಂತರ್ಜಲ ಕುಸಿಯುತ್ತದೆ. ಸಹಜವಾಗಿಯೇ ನೀರಿನ ಸಮಸ್ಯೆ ಉದ್ಭವವಾಗುತ್ತದೆ ಎಂದು ಎಚ್ಚರಿಸಿದರು.
''ಹವಾಮಾನ ಮತ್ತು ಬದಲಾವಣೆಗೆ ಕಾರಣಗಳು'' ಎನ್ನುವ ವಿಷಯದ ಕುರಿತು ಮಾತನಾಡಿದ ಎ.ಎಂ. ರುಚಿತಾಶ್ರೀ ಅವರು, ಕಾಡನ್ನು ನಾಶ ಮಾಡದೆ ಉಳಿಸಿಕೊಳ್ಳಬೇಕು. ನಮ್ಮ ಸುತ್ತಮುತ್ತ ಹೆಚ್ಚು ಗಿಡ ಮರಗಳು ಹಸಿರಿನಿಂದ ನಳನಳಿಸುವ ಹಾಗೆ ನೋಡಿಕೊಳ್ಳಬೇಕು. ಇದು ನಮ್ಮ ಸಾಮಾಜಿಕ ಹೊಣೆಗಾರಿಕೆ ಎಂದರು. ಅರಣ್ಯಗಳನ್ನು ನಾಶ ಮಾಡುವುದರಿಂದ ನೀರು, ಗಾಳಿ, ಆಹಾರದ ಸಮಸ್ಯೆಗಳು ತಲೆದೂರಿ ನಮ್ಮ ಬದುಕಿನ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತವೆ ಎಂದು ವಿಶ್ಲೇಷಿಸಿದರು.ಎಕೋ ಕ್ಲಬ್ಬಿನ ಸಂಚಾಲಕರಾದ ಡಾ. ಪ್ರಹ್ಲಾದ ಚೌದರಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಕೆ. ಮಂಜುನಾಥ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕರಾದ ಅಮರೇಗೌಡ, ಡಾ. ದಸ್ತಗೀರಸಾಬ್ ದಿನ್ನಿ, ಡಾ. ಮೋನಿಕಾ ರಂಜನ್, ಡಾ. ಶೋಭಾರಾಣಿ, ಡಾ. ಕನ್ಯಾಕುಮಾರಿ, ಡಾ. ಪಲ್ಲವಿ, ಗುರುಬಸಪ್ಪ, ಘಂಟೆಪ್ಪ ಶೆಟ್ಟಿ, ದೊಡ್ಡ ಬಸವರಾಜ ಮುಂತಾದವರು ಉಪಸ್ಥಿತರಿದ್ದರು.