ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾವಗೀತೆಗಳ ನಿನಾದ, ಘರಾನಾ ಗಾಯನದ ವೈಭವದ ಜತೆಗೆ ಸಂಗೀತ ದಿಗ್ಗಜರು ಹಿರಿಯ ಕವಿಗಳು, ಗಾಯಕರಿಗೆ ಪುರಸ್ಕಾರ ಸಲ್ಲಿಕೆ ಮೂಲಕ ‘ಗಾನಚಂದ್ರಿಕಾ ಕಲ್ಚರಲ್ ಫೌಂಡೇಶನ್ 9ನೇ ವಾರ್ಷಿಕೋತ್ಸವ ಸಂಭ್ರಮ’ ಸಂಪನ್ನವಾಯಿತು.ಶನಿವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ಅಧ್ಯಕ್ಷ ಡಾ। ಮಹೇಶ್ ಜೋಶಿ, ‘ಭಾವಗೀತೆ ಜೀವನದಲ್ಲಿ ಉತ್ಸಾಹ ಮೂಡಿಸುತ್ತದೆ. ಸಂಗೀತದಲ್ಲಿ ಆತ್ಮಜ್ಞಾನ ಅಡಗಿದ್ದು, ಗುರುಮುಖೇನ ಅದನ್ನು ಕಲಿಯಬೇಕು. ಸಂಗೀತದ ಅಂತಿಮ ಗುರಿಯೂ ಆಧ್ಯಾತ್ಮವೇ ಆಗಿದೆ’ ಎಂದರು.
‘ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಸುಗಮ ಸಂಗೀತದ ವಿಶೇಷ ಕಾರ್ಯಕ್ರಮ ನಡೆಸಲಾಗುವುದು. ಜತೆಗೆ, ಕನ್ನಡ ರಾಜಮನೆತನಗಳ ಮಾಹಿತಿ ಪಸರಿಸುವ ಕಾರ್ಯಕ್ರಮ ನಡೆಸಲಿದ್ದೇವೆ. ಪರಿಷತ್ತಿನ ಎದುರಿನ ಪಂಪಮಹಾಕವಿ ರಸ್ತೆಯನ್ನು ಇನ್ನೆರಡು ವರ್ಷದಲ್ಲಿ ಕನ್ನಡಮಯ ಆಗಿಸಲು ಬಿಬಿಎಂಪಿ ಜೊತೆಗೂಡಿ ಪ್ರಯತ್ನಿಸಲಾಗುತ್ತಿದೆ’ ಎಂದರು.ಸಾಹಿತಿ, ರಮಣಶ್ರೀ ಸಂಸ್ಥೆಯ ಮುಖ್ಯಸ್ಥ ಎಸ್.ಷಡಕ್ಷರಿ, ‘ಗಾಯಕರು ಸಂಗೀತದಲ್ಲಿ ಮಾತ್ರವಲ್ಲದೆ ಸಾಹಿತ್ಯದಲ್ಲೂ ಆಸಕ್ತಿ ಹೊಂದಿರಬೇಕು. ಓದು, ಗಾಯನದಲ್ಲಿ ಆಸಕ್ತರಾದ ನಾಗಚಂದ್ರಿಕಾ ಅವರು ಗಾನಚಂದ್ರಿಕಾ ಮೂಲಕ ಕಾರ್ಯಪ್ರವೃತ್ತರಾಗಿದ್ದಾರೆ. ಸಂಸ್ಥೆ 99 ವಾರ್ಷಿಕೋತ್ಸವ ಆಚರಿಸುವಂತಾಗಲಿ. ತಾನ್‌ಸೇನ್‌ರಂಥ ಸಂಗೀತ ದಿಗ್ಗಜರನ್ನು ನಾಡಿಗೆ ಕೊಡುವಂತಾಗಲಿ’ ಎಂದು ಹಾರೈಸಿದರು.
ಪ್ರಾಸ್ತಾವಿಕ ಮಾತನಾಡಿದ ನಾಗಚಂದ್ರಿಕಾ ಭಟ್, ‘ವಿದ್ಯಾರ್ಥಿಗಳು ಮುಂದೆ ಬಂದು ಇಂತಹ ವೇದಿಕೆಯ ಪ್ರಯೋಜನ ಪಡೆಯಬೇಕು. ಬೆಳೆದ ಮೇಲೆ ಹಿರಿಯರನ್ನು ಗೌರವಿಸಬೇಕು, ಹತ್ತಿದ ಏಣಿಯನ್ನು ಮರೆಯಬಾರದು’ ಎಂದು ಹೇಳಿದರು.ಗಾಯಕಿ ಮಾಲತಿ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಬೆಂಗಳೂರು ನಿರ್ದೇಶಕ ಡಿ.ಮಹೇಂದ್ರ, ಕನ್ನಡ ಮತ್ತು ಸಂಸ್ಕೃತಿ ಬೆಂಗಳೂರು ನಗರ ಉಪನಿರ್ದೇಶಕ ಆರ್.ಚಂದ್ರಶೇಖರ್ ಇದ್ದರು.
ಇದಕ್ಕೂ ಮುನ್ನ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆ, ಆಲಾಪನಾ ಸಂಸ್ಥೆ, ಸಪ್ತಸ್ವರ ಸಂಗೀತ ವಿದ್ಯಾಲಯ ಹಾಗೂ ನಿನಾದ ಸಂಸ್ಕೃತಿ ಕೇಂದ್ರದ ವಿದ್ಯಾರ್ಥಿಗಳಿಂದ ಸಮೂಹ ಗಾಯನ ನಡೆಯಿತು. ಬಳಿಕ ನಡೆದ ಘರಾನಾ ಗಾಯನ ಸಂಗೀತಪ್ರಿಯರ ಮನತಣಿಸಿತು.‘ಗಾನಚಂದ್ರಿಕಾ’ ಗೌರವ ಸನ್ಮಾನ
ಹಿರಿಯ ಗಾಯಕರಾದ ಎಸ್.ಸೋಮಸುಂದರಂ, ಗರ್ತಿಕೆರೆ ರಾಘಣ್ಣ, ಎಂ.ಕೆ.ಜಯಶ್ರೀ, ಪುತ್ತೂರು ನರಸಿಂಹ ನಾಯಕ್, ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ವಯೊಲಿನ್ ಚಂದ್ರು ಅವರಿಗೆ ‘ಗಾನಚಂದ್ರಿಕಾ’ ಗೌರವ ಸನ್ಮಾನ ಮಾಡಲಾಯಿತು.