ಸಾರಾಂಶ
ಚಾಮರಾಜನಗರದಲ್ಲಿ ಸರ್ಕಾರಿ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರಿಗೆ ಅಡೆ-ತಡೆರಹಿತ ವಾತಾವರಣ ನಿರ್ಮಿಸುವ ಸಂಬಂಧ ಸುಗಮ್ಯ ಯಾತ್ರಾ ಸಮೀಕ್ಷೆ ಜಾಥಾಗೆ ಜಿಪಂ ಸಿಇಒ ಮೋನಾ ರೋತ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಸರ್ಕಾರಿ ಕಚೇರಿ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ವಿಕಲಚೇತನರಿಗೆ ಅಡೆ-ತಡೆರಹಿತ ವಾತಾವರಣ ನಿರ್ಮಿಸುವ ಸಂಬಂಧ ಸುಗಮ್ಯ ಯಾತ್ರಾ ಸಮೀಕ್ಷೆ ಜಾಥಾಗೆ ನಗರದಲ್ಲಿ ಜಿಪಂ ಸಿಇಒ ಮೋನಾ ರೋತ್ ಚಾಲನೆ ನೀಡಿದರು.ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಸುಗಮ್ಯ ಯಾತ್ರೆಯ ಪ್ರತಿ ಹೆಜ್ಜೆ ಸಮಾನತೆಯ ಕಡೆಗೆ’ ಘೋಷವಾಕ್ಯದಡಿ ಹಮ್ಮಿಕೊಳ್ಳಲಾಗಿದ್ದ ಸಮೀಕ್ಷೆ ಹಾಗೂ ಜಾಥಾಗೆ ಹಸಿರು ನಿಶಾನೆ ತೋರಿದರು.
ಇದೇ ವೇಳೆ ಸಮೀಕ್ಷೆ ಹಾಗೂ ಜಾಥಾ ಉದ್ದೇಶಿಸಿ ಮಾತನಾಡಿದ ಜಿಪಂ ಸಿಇಒ ಮೋನಾ ರೋತ್, ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳನ್ನು ಸಂರಕ್ಷಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಲುವಾಗಿ ಸರ್ಕಾರವು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ -೨೦೧೬ನ್ನು ಜಾರಿಗೊಳಿಸಿದೆ. ಅದರನ್ವಯ ಸರ್ಕಾರಿ ಕಚೇರಿಗಳು, ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷಚೇತನರಿಗೆ ಅವಶ್ಯವಿರುವ ಮೂಲಸೌಲಭ್ಯ ಒದಗಿಸಿ ಅಡೆ-ತಡೆರಹಿತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ರ‍್ಯಾಂಪ್ ವ್ಯವಸ್ಥೆ, ಮನೋರಂಜನೆ ಸ್ಥಳಗಳು, ಉದ್ಯಾನವನಗಳು, ಗ್ರಂಥಾಲಯಗಳು, ಮಾರುಕಟ್ಟೆಗಳು, ಪ್ರವಾಸಿ ತಾಣಗಳು, ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಇತರೆ ಸ್ಥಳಗಳಲ್ಲಿ ವಿಶೇಷಚೇತನರಿಗೆ ಮೂಲಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಿ ಯಾವುದೇ ಅಡೆ-ತಡೆರಹಿತ ವಾತಾವರಣ ಸೃಷ್ಟಿಸಿ ಅನುಕೂಲ ಮಾಡಿಕೊಡಬೇಕಾಗಿದೆ. ಈ ಸಂಬಂಧ ಭಾರತ ಸರ್ಕಾರದ ಎಂಎಸ್‌ಜೆ ಮತ್ತು ಇ ಮಂತ್ರಾಲಯವು ಸುಗಮ್ಯ ಯಾತ್ರಾ ಅಭಿಯಾನದಡಿ ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮೀನಾಕ್ಷಿ ವಿಶೇಷಚೇತನರಿಗೆ ಮೂಲಸೌಕರ್ಯಗಳನ್ನು ಒದಗಿಸಿ ಸರ್ಕಾರಿ ಕಚೇರಿ, ಎಲ್ಲ ಸಾರ್ವಜನಿಕ ಸ್ಥಳಗಳನ್ನು ವಿಕಲಚೇತನ ವ್ಯಕ್ತಿಗಳ ಸ್ನೇಹಮಯಿ ವ್ಯವಸ್ಥೆಯನ್ನಾಗಿ ರೂಪಿಸಿರುವ ಬಗ್ಗೆ ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಂದ ಮಾಹಿತಿ ಕ್ರೋಢಿಕರಿಸಲು ಸಮೀಕ್ಷೆಯನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ. ಸರ್ಕಾರವು ಬೆಂಗಳೂರಿನ ಎಪಿಡಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಮಾಹಿತಿ ಸಂಗ್ರಹಣೆ ಬಗ್ಗೆ ಸಂಸ್ಥೆಯು ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರಿಗೆ ತರಬೇತಿ ನೀಡಲಿದೆ. ಇದಕ್ಕಾಗಿ ಎಸ್ ಟು ಎಕ್ಸೆಸ್ ಆ್ಯಪ್ ಸಹ ಸಂಸ್ಥೆ ಸಿದ್ದಪಡಿಸಿದೆ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ. ಸುರೇಶ್, ವಿ.ಆರ್.ಡಬ್ಲ್ಯೂ, ಎಂ.ಆರ್.ಡಬ್ಲ್ಯೂ ಪುನರ್ವಸತಿ ಕಾರ್ಯಕರ್ತರು, ಇತರರು ಇದೇ ಸಂದರ್ಭದಲ್ಲಿ ಇದ್ದರು. ಜಾಥಾ ಬಳಿಕ ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿರುವ ಸಭಾಂಗಣದಲ್ಲಿ ಸರ್ಕಾರಿ ಕಚೇರಿ, ಎಲ್ಲ ಸಾರ್ವಜನಿಕ ಸ್ಥಳಗಳನ್ನು ವಿಕಲಚೇತನ ವ್ಯಕ್ತಿಗಳ ಸ್ನೇಹಮಯಿ ವ್ಯವಸ್ಥೆಯನ್ನಾಗಿ ರೂಪಿಸುವ ಬಗ್ಗೆ ಮಾಹಿತಿ ಸಂಗ್ರಹಿಸುವ ಕುರಿತು ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಿಗೆ ತರಬೇತಿ ನಡೆಯಿತು.