ಸಾರಾಂಶ
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನ ಕಾರ್ಖಾನೆ ಅ ವರ್ಗದ ಸದಸ್ಯರಿಗೆ ರಿಯಾಯತಿ ದರದಲ್ಲಿ ಮಾ.5ರಿಂದ ಡಿಸೆಂಬರ್ ಕೊನೆಯವರೆಗೆ ಪ್ರತಿ ಕೆ.ಜಿ. ಸಕ್ಕರೆಗೆ ₹17 ದರದಂತೆ ವಿತರಿಸಲು ಆಡಳಿತ ಮಂಡಳಿ ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಬಸವರಾಜ್ ಕಲ್ಲಟ್ಟಿ ಮತ್ತು ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ ತಿಳಿಸಿದರು.ಕಾರ್ಖಾನೆಯಲ್ಲಿ ಸೋಮವಾರ ಕರೆಯಲಾದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನುಳಿದ ಕಬ್ಬು ಪೂರೈಸಿದ ಎಲ್ಲ ರೈತರಿಗೆ ₹17 ದರದಂತೆ ಪ್ರತಿ ಟನ್‌ಗೆ ಅರ್ಧ ಕೆಜಿ ಸಕ್ಕರೆಯನ್ನು ಏ.1ರಿಂದ ಸೆ.30ರ ವರೆಗೆ ವಿತರಿಸಲಾಗುವುದು. ಕಬ್ಬು ಪೂರೈಸಿದ ರೈತರಿಗೆ ಮಾ.31ರೊಳಗೆ ಸಕ್ಕರೆ ಸ್ಲಿಪ್ ಮುಟ್ಟಿಸಲಾಗುವುದು ಎಂದ ಅವರು, ಸದಸ್ಯರ ಹಿತ ಕಾಪಾಡಲು ಬದ್ಧವೆಂದು ಹೇಳಿದರು.
2025-26ನೇ ಸಾಲಿನಲ್ಲಿ ಕಬ್ಬು ಕಟಾವು ಹಾಗೂ ಸಾರಿಗೆ ಮುಕ್ತೆದಾರರಿಗೆ ನೆರೆಹೊರೆಯ ಕಾರ್ಖಾನೆಗಳು ನೀಡುವ ದರದಂತೆ ನಾವೂ ಕೂಡಾ ದರ ನೀಡಲು ಬದ್ಧವಿರುವುದಾಗಿ ಹೇಳಿದ ಅವರು, ಕಬ್ಬು ಬೆಳೆಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಬಾಂಡ್ ಮಾಡಲು ವಿನಂತಿಸಿ ರೈತರು ಬೆಳೆದ ಕಬ್ಬನ್ನು ಕಾರ್ಖಾನೆಗೆ ಕಳುಹಿಸುವಂತೆ ಕೋರಿದರು.ದರ ಇಳಿಕೆ:ರೈತರಿಗೆ ಕೊಡಮಾಡುವ ಕಾಂಪೋಸ್ಟ್ ಗೊಬ್ಬರದ ದರವನ್ನು ಪ್ರತಿ ಮೆಟ್ರಿಕ್ ಟನ್‌ಗೆ ₹1500ರಿಂದ 1,000ಕ್ಕೆ ಇಳಿಕೆ ಮಾಡಿದ್ದು, 2024–25ನೇ ಸಾಲಿಗೆ ಕಾರ್ಖಾನೆಗೆ ಕಬ್ಬು ಪೂರೈಸಿದ ಎಲ್ಲರಿಗೂ ಏಪ್ರಿಲ್ ಮೊದಲ ವಾರದಲ್ಲಿ ಉಳಿದ ಕಬ್ಬಿನ ಬಿಲ್ ಸಂದಾಯ ಮಾಡಲಾಗುವುದು ಎಂದು ಅಶೋಕ ಪಟ್ಟಣಶೆಟ್ಟಿ ಹೇಳಿದರು. 20205-26ನೇ ಸಾಲಿನ ಹಂಗಾಮಿಗೆ ಕಬ್ಬು ಪೂರೈಕೆದಾರರಿಗೆ ಪ್ರತಿ 15 ದಿನಕ್ಕೊಮ್ಮೆ ಕಬ್ಬಿನ ಬಿಲ್ ಸಂದಾಯ ಮಾಡಲು ಆಡಳಿತ ಮಂಡಳಿ ಬದ್ಧತೆ ಹೊಂದಿದೆ ಎಂದರು.ಜೊಲ್ಲೆ-ಜಾರಕಿಹೊಳಿ ಮಾರ್ಗದರ್ಶನ:
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಅರಭಾಂವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಸದಸ್ಯರಿಗೆ, ಉದ್ಯೋಗಿಗಳಿಗೆ ಮತ್ತು ಕಾರ್ಮಿಕರಿಗೆ ಯಾವುದೇ ರೀತಿಯ ಅಡಚಣೆ ಆಗದಂತೆ ಕಾರ್ಖಾನೆ ನಡೆಸಿಕೊಂಡು ಹೋಗುವುದಾಗಿ ಹೇಳಿದರು.ಒಟ್ಟು ಆಡಳಿತ ಮಂಡಳಿ ಸದಸ್ಯರಲ್ಲಿ ತಾವು 7 ಮಂದಿ ಬೇರೆಡೆ ಆಗಿ ನಿರ್ಣಯ ಕೈಗೊಂಡಿದ್ದು ಏಕೆ ಎಂದು ಪ್ರಶ್ನಿಸಿದಾಗ, ಕಳೆದ 10-15 ವರ್ಷದಿಂದ ತಾವು ಏನೇ ಹೇಳಿದರೂ, ತಮ್ಮ ಮಾತು ಕೇಳುತ್ತಿರಲಿಲ್ಲ ಎಂದು ಸದ್ಯದ ಆಡಳಿತ ಮಂಡಳಿ ಒಕ್ಕೊರಲಿನಿಂದ ಹೇಳಿತು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಖಾನೆ ನಿರ್ದೇಶಕರಾದ ಪ್ರಭುದೇವ ಪಾಟೀಲ್, ಬಸಪ್ಪ ಮರಡಿ, ಬಾಬಾಸಾಹೇಬ ಅರಬೋಳೆ, ವ್ಯವಸ್ಥಾಪಕ ನಿರ್ದೇಶಕ ಸಾತಪ್ಪ ಕರ್ಕಿನಾಯಿಕ, ಆಡಳಿತ ಸಮನ್ವಯಾಧಿಕಾರಿ ರವೀಂದ್ರ ಚೌಗಲಾ, ಕಚೇರಿ ಅಧೀಕ್ಷಕ ಸುಭಾಸ ನಾಶಿಪುಡಿ ಉಪಸ್ಥಿತರಿದ್ದರು.ಬಿಡಿಸಿಸಿ ಬ್ಯಾಂಕ್‌ನಿಂದ ₹150 ಕೋಟಿ ಸಾಲ
ಬಿಡಿಸಿಸಿ ಬ್ಯಾಂಕಿನಿಂದ ₹150 ಕೋಟಿ ಸಾಲವನ್ನು ಶೇ.12ರ ಬಡ್ಡಿ ದರದಲ್ಲಿ ಸಕ್ಕರೆ ಅಡವಿನ ಮೇಲೆ ಸಾಲ ಪಡೆಯಲಾಗಿದೆ. ಸದ್ಯ 3.80 ಲಕ್ಷ ಕ್ವಿಂಟಲ್ ಸಕ್ಕರೆ ದಾಸ್ತಾನು ಇದೆ ಎಂದು ಅಶೋಕ ಪಟ್ಟಣಶೆಟ್ಟಿ ಹೇಳಿದರು.