ಹೊಸಪೇಟೆ ಗಣಿ ಉದ್ಯಮಿಯಿಂದ ಸಕ್ಕರೆ ಕಾರ್ಖಾನೆ?

| Published : May 05 2025, 12:50 AM IST

ಸಾರಾಂಶ

ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಕೂಡ ಒಲವು ಹೊಂದಿದ್ದು, ಈಗ ಗಣಿ ಉದ್ಯಮಿಯೊಬ್ಬರ ಜತೆಗೆ ಸ್ವತಃ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹಮದ್ ಖಾನ್‌ ಅವರೇ ಈ ಕುರಿತು ಚರ್ಚಿಸಿದ್ದಾರೆ. ಹಾಗಾಗಿ ಸಕ್ಕರೆ ಕಾರ್ಖಾನೆ ವಿಷಯ ಮತ್ತೆ ಮುನ್ನಲೆಗೆ ಬಂದಿದೆ.

ಸಾಧನಾ ಸಮಾವೇಶದಲ್ಲಿ ರೈತರಿಗೆ ಸಿಎಂ ಸಿದ್ದರಾಮಯ್ಯ ಉಡುಗೊರೆ!ಕೃಷ್ಣ ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಕೂಡ ಒಲವು ಹೊಂದಿದ್ದು, ಈಗ ಗಣಿ ಉದ್ಯಮಿಯೊಬ್ಬರ ಜತೆಗೆ ಸ್ವತಃ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹಮದ್ ಖಾನ್‌ ಅವರೇ ಈ ಕುರಿತು ಚರ್ಚಿಸಿದ್ದಾರೆ. ಹಾಗಾಗಿ ಸಕ್ಕರೆ ಕಾರ್ಖಾನೆ ವಿಷಯ ಮತ್ತೆ ಮುನ್ನಲೆಗೆ ಬಂದಿದೆ.

ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲೆ ನಗರದಲ್ಲಿ ಮೇ 20ರಂದು ಸಾಧನಾ ಸಮಾವೇಶ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಸ್ತು ಎಂದಿದ್ದಾರೆ. ಈ ಸಮಾವೇಶ ನಡೆಸಲು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹಮದ್ ಖಾನ್‌ ಅವರು ಪರಿಶೀಲನೆ ಕೂಡ ನಡೆಸಿದ್ದಾರೆ. ಈ ಸಮಾವೇಶಕ್ಕೆ 2 ಲಕ್ಷ ಜನ ಬರುವ ನಿರೀಕ್ಷೆ ಇದೆ.

ಸಕ್ಕರೆ ಕಾರ್ಖಾನೆ ಉಡುಗೊರೆ:

ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಸ್ವತಃ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ ಸರ್ಕಾರ ಬಂದರೆ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಸರ್ಕಾರ ರಚನೆ ಆದ ಬಳಿಕ ಈ ಭಾಗದ ರೈತರು ಹಲವು ಬಾರಿ ಮನವಿ ಮಾಡಿದ್ದಾರೆ.

ಈ ಹಿನ್ನೆಲೆ ಮುಖ್ಯಮಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ರೈತರಿಗೆ ಸಕ್ಕರೆ ಕಾರ್ಖಾನೆ ಉಡುಗೊರೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಸಕ್ಕರೆ ಕಾರ್ಖಾನೆ ಕುರಿತು ನಗರದ ಗಣಿ ಉದ್ಯಮಿಯೊಬ್ಬರ ಬಳಿ ಚರ್ಚಿಸಿದ್ದಾರೆ. ಈಗ ಗಣಿ ಉದ್ಯಮಿ ಕೂಡ ಬಂಡವಾಳ ಹೂಡಲು ಮುಂದಾಗಿದ್ದಾರೆ. ಈ ಕುರಿತು ರೈತರ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.

5 ಲಕ್ಷ ಟನ್‌ ಕಬ್ಬು ಉತ್ಪಾದನೆ:

ಹೊಸಪೇಟೆ, ಕಮಲಾಪುರ, ಹಗರಿಬೊಮ್ಮನಹಳ್ಳಿ ಪ್ರದೇಶದಲ್ಲಿ ವಾರ್ಷಿಕ 5 ಲಕ್ಷ ಟನ್‌ ಕಬ್ಬು ಉತ್ಪಾದನೆ ಮಾಡಲಾಗುತ್ತಿದೆ. ನಗರದ ಚಿತ್ತವಾಡ್ಗಿ ಪ್ರದೇಶದಲ್ಲಿದ್ದ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ 2015ರಲ್ಲೇ ಬಂದ್‌ ಆಗಿದೆ. ಈ ಕಾರ್ಖಾನೆ ಬಂದ್‌ ಆಗಿರುವುದರಿಂದ ಸಕ್ಕರೆ ಕಾರ್ಖಾನೆಗಾಗಿ ಈ ಭಾಗದ ರೈತರು ದೂರದ ಊರುಗಳಿಗೆ ತೆರಳುವಂತಾಗಿದೆ. ಹಾಗಾಗಿ ಬಸವರಾಜ ಬೊಮ್ಮಾಯಿ ಸರ್ಕಾರ ನಗರದಲ್ಲಿ ಹಂಪಿ ಶುಗರ್ಸ್‌ ಎಂಬ ಕಾರ್ಖಾನೆ ಸ್ಥಾಪನೆಗೆ ಅನುಮೋದನೆ ನೀಡಿತ್ತು. ಈ ಕಾರ್ಖಾನೆ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ. ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಕುಟುಂಬಕ್ಕೆ ಸೇರಿದ ಈ ಕಾರ್ಖಾನೆಗೆ ಮಂಜೂರಾಗಿದ್ದ 80ಕ್ಕೂ ಅಧಿಕ ಎಕರೆ ಜಾಗ ಇನ್ನೂ ಪರಭಾರೆ ಆಗಿಲ್ಲ. ಹಾಗಾಗಿ ಈ ಕಾರ್ಖಾನೆ ಸ್ಥಾಪನೆ ಕಾಮಗಾರಿಯೂ ನನೆಗುದಿಗೆ ಬಿದ್ದಿದೆ. ಇದರಿಂದ ಕಬ್ಬು ಬೆಳೆಯುವ ರೈತರು ನಿರಂತರ ಹೋರಾಟ ಮಾಡುತ್ತಿದ್ದಾರೆ. ರೈತರ ಧ್ವನಿಗೆ ಸ್ಪಂದಿಸಿರುವ ಸಚಿವ ಜಮೀರ್‌ ಅಹಮದ್ ಖಾನ್‌ ಹಾಗೂ ಶಾಸಕ ಎಚ್‌.ಆರ್‌. ಗವಿಯಪ್ಪ ಅವರು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರ ಗಮನ ಕೂಡ ಸೆಳೆದಿದ್ದಾರೆ.

ಯಾವ ಜಾಗದಲ್ಲಿ ಕಾರ್ಖಾನೆ?:

ಈ ಹಿಂದೆ ಮಾಜಿ ಸಚಿವ ಆನಂದ ಸಿಂಗ್‌ ಅವರು ನಗರದ ಜಂಬುನಾಥನಹಳ್ಳಿ ಪ್ರದೇಶದಲ್ಲಿ 80 ಎಕರೆ ಸರ್ಕಾರಿ ಜಾಗ ಗುರುತಿಸಿ ಹಂಪಿ ಶುಗರ್ಸ್‌ಗೆ ನೀಡಲು ಕ್ಯಾಬಿನೆಟ್‌ನಲ್ಲೂ ಪಾಸು ಮಾಡಿಸಿದ್ದರು. ಸರ್ಕಾರ ಬದಲಾದ ಬಳಿಕ ಈ ಕಾರ್ಖಾನೆಗೆ ಜಾಗ ಪರಭಾರೆ ಆಗಿಲ್ಲ.

ಈ ಮಧ್ಯೆ ರೈತರು ಎತ್ತಿನ ಬಂಡಿಯಲ್ಲಿ ಕಬ್ಬು ಸಾಗಿಸಲು ಅನುಕೂಲ ಆಗಲಿದೆ ಎಂದು ಕಾಳಗಟ್ಟ ಪ್ರದೇಶದಲ್ಲಿ ಶಾಸಕ ಎಚ್.ಆರ್‌. ಗವಿಯಪ್ಪ ಅವರು ಜಾಗ ಗುರುತಿಸಿದ್ದಾರೆ. ಈ ಎರಡು ಜಾಗದ ಪೈಕಿ ಎಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಆಗಲಿದೆ ಎಂಬುದು ಇನ್ನೂ ನಿಗೂಢವಾಗಿದೆ.

ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್‌ ಅಹಮದ್‌ ಖಾನ್‌ ಅವರು ಕೂಡ ರೈತರ ಬಳಿ ಚರ್ಚೆ ನಡೆಸುವಾಗ ಸಕ್ಕರೆ ಕಾರ್ಖಾನೆ ಸ್ಥಾಪನೆ ಆಗಲಿದೆ ಎಂದು ಮಾತ್ರ ಹೇಳಿದ್ದಾರೆ. ಎಲ್ಲಿ, ಯಾವ ಜಾಗದಲ್ಲಿ ಎಂಬುದನ್ನು ಬಹಿರಂಗಪಡಿಸಿಲ್ಲ. ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಆದರೆ, ಕಬ್ಬಿಗೆ ಸೂಕ್ತ ಬೆಲೆ ಮತ್ತು ಸಾಗಣೆ ವೆಚ್ಚ, ಕೂಲಿ ವೆಚ್ಚದ ಹೊರೆ ಕೂಡ ತಪ್ಪಲಿದೆ ಎಂಬುದು ರೈತರ ಅಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಜಾಗ ಆಯ್ಕೆ ಮಾಡಿ, ಸಕ್ಕರೆ ಕಾರ್ಖಾನೆ ಮಂಜೂರು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.