ಸಾರಾಂಶ
ದಿ ಉಗಾರ್ ಸುಗರ್ ವರ್ಕ್ ಲಿಮಿಟೆಡ್ ಯೂನಿಟ್ 2 ಸಕ್ಕರೆ ಕಾರ್ಖಾನೆಯಿಂದ ಹೊರಬರುವ ಕಪ್ಪು ಧೂಳು, ತ್ಯಾಜ್ಯದಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಹತ್ತಿ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ.
ಕನ್ನಡಪ್ರಭ ವಾರ್ತೆ ಯಡ್ರಾಮಿ
ತಾಲೂಕಿನ ನಾಗರಹಳ್ಳಿ, ಮಳ್ಳಿ ಗ್ರಾಮದ ದಿ ಉಗಾರ್ ಸುಗರ್ ವರ್ಕ್ ಲಿಮಿಟೆಡ್ ಯೂನಿಟ್ 2 ಸಕ್ಕರೆ ಕಾರ್ಖಾನೆ ತನ್ನ ಕಬ್ಬು ನುರಿಯುವ ಸಾಮರ್ಥ್ಯವನ್ನು ಹೆಚ್ಚಿಸಲು, ಹೆಚ್ಚು ವಿದ್ಯುತ್ ಉತ್ಪಾದಿಸಲು ಹಾಗೂ ಎಥನಾಲ್ ಘಟಕ ಸ್ಥಾಪಿಸಲು ಭಾರೀ ಪ್ರಯತ್ನ ಮಾಡುತ್ತಿದೆ.ಮತ್ತೊಂದು ಕಡೆ ಕಾರ್ಖಾನೆಯಿಂದ ಹೊರಬರುವ ಕಪ್ಪು ಧೂಳು, ತ್ಯಾಜ್ಯದಿಂದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಹತ್ತಿ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಸ್ತುತ ವರ್ಷದಿಂದ ಕಬ್ಬು ನುರಿಸುತ್ತಿರುವುದರಿಂದ ದಿನಾಲೂ ಹೊಗೆ ಹೊರಗೆ ಬರುತ್ತಿದೆ. ಇದರಿಂದಾಗಿ ಮಳ್ಳಿ, ನಾಗರಹಳ್ಳಿ, ಕುಳಗೇರಿ, ಬಿರಾಳ, ಹದ್ನೂರ ಸೇರಿದಂತೆ ಇತರೆ ಗ್ರಾಮಗಳ ಹೊಲಗಳಲ್ಲಿ ಬೆಳೆದು ನಿಂತಿರುವ ಹತ್ತಿ ಬೆಳೆಗೆ ಹಾನಿಯಾಗುತ್ತಿದೆ. ಹೊಗೆ ಮತ್ತು ಧೂಳಿನಿಂದಾಗಿ ಹತ್ತಿ ಸಂಪೂರ್ಣ ಕಪ್ಪಾಗುತ್ತಿದೆ. ಇದು ಬೆಲೆ ಕುಸಿತಕ್ಕೂ ಕಾರಣವಾಗಿದೆ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.ಪ್ರಸಕ್ತ ಮಾರುಕಟ್ಟೆಯಲ್ಲಿ ಹತ್ತಿ ಕ್ವಿಂಟಲ್‍ಗೆ 7200 ರು. ಬೆಲೆ ಇದೆ. ಆದರೆ, ಕಪ್ಪಾಗಿರುವ ಮತ್ತು ಧೂಳಿನಿಂದ ಕೂಡಿದ ಹತ್ತಿಗೆ 5500-6000 ರು. ನೀಡಲಾಗುತ್ತಿದೆ. ಇದರಿಂದ ಪ್ರತಿ ಕ್ವಿಂಟಲ್ 1000 ರಿಂದ 1500 ರು.ಗಳವರೆಗೆ ನಷ್ಟವಾಗುತ್ತಿದೆ ಎನ್ನುತ್ತಾರೆ ರೈತರು.
ರೈತರಾದ ಪರಶುರಾಮ ಹದ್ನೂರ, ಪ್ರಭು ಹದ್ನೂರ, ಶಿವಪ್ಪ ಅರಿಕೇರಿ, ಬಸಣ್ಣ ಕೆಂಭಾವಿ, ಶ್ರೀಶೈಲ್ ಪೂಜಾರಿ, ಶಿವಣ್ಣ ದೇವರಮನಿ, ಮಾನಪ್ಪ ಕೆಂಭಾವಿ, ಗರ್ದು ರಾಥೋಡ, ರಾಜು ರಾಥೋಡ, ದವಲಸಾಬ ಗೊಲಗೇರಿ, ಇಮಾಮಸಾಬ ಸಾಸಾಬಾಳ, ಬಂದೇನವಾಜ ಅವಂಟಿ, ದವಲಸಾಬ ಖಾಜಿ ಇದ್ದರು.