ಸಾರಾಂಶ
ರೈತರ ಬಾಕಿ ಬಿಲ್ ನೀಡದ್ದಕ್ಕೆ ಸಕ್ಕರೆ ಕಾರ್ಖಾನೆ ಸೀಜ್
ಕನ್ನಡಪ್ರಭ ವಾರ್ತೆ ಚಡಚಣ
ರೈತರ ಉಳಿದ ಕಬ್ಬಿನ ಬಿಲ್ ಪಾವತಿಸದಿರುವುದಕ್ಕೆ ಹಾಗೂ ರೈತರ ಮೇಲೆ ಸಾಲ ಪಡೆದು ಸಾಲ ತೀರಿಸದೇ ಇರುವ ಹಾವಿನಾಳ ಇಂಡಿಯನ್ ಸಕ್ಕರೆ ಕಾರ್ಖಾನೆಯನ್ನು ಜಿಲ್ಲಾಧಿಕಾರಿ ಸೀಜ್ ಮಾಡಲು ಆದೇಶಿಸಿದ್ದರಿಂದ ಎಸಿ ಹಬೀದ ಗದ್ಯಾಳ ಹಾಗೂ ಪೊಲೀಸ್ ಸಿಬ್ಬಂದಿ ಮಂಗಳವಾರ ಸಂಜೆ ಸೀಜ್ ಮಾಡಿದ್ದಾರೆ.ನಂತರ ಕನ್ನಡಪ್ರಭದೊಂದಿಗೆ ಮಾತನಾಡಿದ ಎಸಿ ಹಬೀದ ಗದ್ಯಾಳ ಅವರು, ಕಳೆದ ವರ್ಷದ ಬಾಕಿ ಉಳಿದ ಕಬ್ಬಿನ ಬಿಲ್ ಪಾವತಿಸದೇ ಇರುವುದು, ರೈತರ ಜಮೀನು ಮೇಲೆ ಪಡೆದ ಸಾಲ ತುಂಬದೇ ಇರುವುದಕ್ಕೆ ಹಾಗೂ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಫ್ಆರ್‌ಪಿ ದರ ನೀಡದಿರುವ ಕಾರಣಕ್ಕೆ ಇಂಡಿಯನ್ ಸಕ್ಕರೆ ಕಾರ್ಖಾನೆ ಸೀಜ್ ಮಾಡಲಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಗೆ ಕಾಲಾವಕಾಶ ನೀಡಿದರೂ ಅವರು ರೈತರ ಸಮಸ್ಯೆ ಬಗೆಹರಿಸದ ಕಾರಣ ಈಗ ಮೂರು ದಿನಗಳವರೆಗೆ ಕಾರ್ಖಾನೆ ಸೀಜ್ ಮಾಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಲ್ಲಿ ಸೇರಿದ ರೈತರು ಅಧಿಕಾರಿಗಳ ಜೊತೆ ಮಾತನಾಡಿ, ನೀವು ಸೀಜ್ ಮಾಡಿದರೆ ನಾವು ಎಲ್ಲಿಗೆ ಕಬ್ಬು ಕಳುಹಿಸಬೇಕು ಎಂದು ಪ್ರಶ್ನಿಸಿದರು. ಆಗ ಅಧಿಕಾರಿಗಳು ಸಮೀಪದಲ್ಲಿ ಮರಗೂರ ಗ್ರಾಮದ ಭೀಮಾಶಂಕರ ಸಕ್ಕರೆ ಕಾರ್ಖಾನೆಗೆ ತಮ್ಮ ಕಬ್ಬು ಕಳುಹಿಸಿ ಅವರೊಂದಿಗೆ ನಾವು ಮಾತನಾಡಿದ್ದೇವೆ ಎಂದರು.ಈ ಸಂದರ್ಭದಲ್ಲಿ ಪಿಎಸ್ಐ ಸಂಜಯ ಕಲ್ಲೂರ ಸೇರಿದಂತೆ ತಹಶೀಲ್ದಾರ ಕಚೇರಿ ಸಿಬ್ಬಂದಿ ಹಾಗೂ ರೈತರು ಇದ್ದರು.