ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಭಾಷೆಯನ್ನು ಕಟ್ಟಬೇಕು, ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಬೇಕು ಎಂಬ ಆಶಯದೊಂದಿಗೆ ನಡೆದ ಎಂಬತ್ತೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಬೆನ್ನಲ್ಲೇ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಅವರ ನಡವಳಿಕೆಗಳು ಜಿಲ್ಲಾ ಸಾಹಿತ್ಯ ವಲಯ ಮನಸ್ಸುಗಳನ್ನು ಒಡೆಯುವುದಕ್ಕೆ ಕಾರಣವಾಗಿವೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತಂತೆ ರಾಜ್ಯಾಧ್ಯಕ್ಷರಾಗಿ ಜಿಲ್ಲೆಯ ಎಲ್ಲಾ ಸಾಹಿತಿಗಳೊಂದಿಗೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ ಒಗ್ಗೂಡಿಸಿಕೊಂಡು ಹೋಗುವ ಕೆಲಸಕ್ಕೆ ಡಾ.ಮಹೇಶ್ ಜೋಶಿ ಮುಂದಾಗಲೇ ಇಲ್ಲ. ಸಮ್ಮೇಳನದ ಆರಂಭದಿಂದಲೂ ವಿವಾದಗಳನ್ನೇ ಮುಂದಿಡುತ್ತಿದ್ದರು. ಯಾರೊಬ್ಬರ ಅಭಿಪ್ರಾಯ, ಸಲಹೆ, ಸೂಚನೆಗಳಿಗೆ ಮನ್ನಣೆ ನೀಡುವ ಸೌಜನ್ಯವನ್ನು ಎಲ್ಲಿಯೂ ಪ್ರದರ್ಶಿಸಲಿಲ್ಲ. ಸಾಹಿತಿಗಳು, ಸಾಹಿತ್ಯ ಪರಿಷತ್ತಿನವರು ರಾಜ್ಯಾಧ್ಯಕ್ಷರ ನಿಯಂತ್ರಣದಲ್ಲಿ ಇಬೇಕೆಂಬ ಭಾವನೆಯೊಂದಿಗೆ ನಡವಳಿಕೆಗಳನ್ನು ಪ್ರದರ್ಶಿಸಿದ್ದು ಸಕ್ಕರೆ ನಾಡಿನ ಸಾಹಿತಿಗಳಿಗೆ ರುಚಿಸಲಿಲ್ಲ.
ಅದಕ್ಕಾಗಿ ಹಲವಾರು ಹಿರಿಯ ಸಾಹಿತಿಗಳು ಬಹಿರಂಗವಾಗಿಯೇ ಜೋಶಿ ಅವರ ವಿರುದ್ಧ ತಿರುಗಿಬಿದ್ದದ್ದು ನಿಜ. ಇದರಿಂದ ಅವಮಾನಕ್ಕೊಳಗಾದವರಂತೆ ಕಂಡುಬಂದ ಜೋಶಿ ಅವರು ಒಡೆದು ಆಳುವ ನೀತಿ ಅನುಸರಿಸಿದರು. ಸಾಹಿತಿಗಳಲ್ಲೇ ಒಡಕುಂಟುಮಾಡಿ ಪರಿಷತ್ ಪದಾಧಿಕಾರಿಗಳಲ್ಲಿ ಗುಂಪುಗಾರಿಕೆ ಸೃಷ್ಟಿ ಮಾಡಿದರು ಎಂದು ಹೇಳಲಾಗಿದೆ.ಜಿಲ್ಲೆಯ ಹಿರಿಯ ಸಾಹಿತಿಗಳಲ್ಲಿ ಸಣ್ಣ ಪುಟ್ಟ ವೈಮನಸ್ಸುಗಳಿದ್ದರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸದೆ ಒಟ್ಟಿಗೆ ಕಾರ್ಯಕ್ರಮಗಳನ್ನು ನಡೆಸುತ್ತಾ ಒಗ್ಗಟ್ಟನ್ನು ಪ್ರದರ್ಶಿಸುತ್ತಿದ್ದರು. ಪರಸ್ಪರ ಅಭಿಪ್ರಾಯ, ಸಲಹೆಗಳು, ವಿಚಾರಗಳನ್ನು ವಿನಿಮಯ ಮಾಡಿಕೊಂಡು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದರು. ಅಂತಹವರನ್ನೇ ಇಬ್ಭಾಗ ಮಾಡಿ ಸಮ್ಮೇಳನದ ಚಟುವಟಿಕೆಗಳನ್ನು ನಡೆಸುವ ಚಾಕಚಕ್ಯತೆಯನ್ನು ಪ್ರದರ್ಶಿಸಿದರೆಂಬ ಮಾತುಗಳು ವ್ಯಕ್ತವಾಗುತ್ತಿವೆ.
ಸಾಹಿತ್ಯ ವಲಯದ ಮನಸ್ಸುಗಳಿಗೆ ಘಾಸಿ ಉಂಟು ಮಾಡಿ ಪರಿಷತ್ತಿನ ಪದಾಧಿಕಾರಿಗಳಲ್ಲಿ ಗುಂಪುಗಾರಿಕೆ ಸೃಷ್ಟಿಸಿದರು. ಪರಿಷತ್ತಿನ ಪದಾಧಿಕಾರಿಗಳೂ ಕೂಡ ಸ್ಥಾನ-ಮಾನಗಳನ್ನು ಕಳೆದುಕೊಳ್ಳುತ್ತೇವೆಂಬ ಭಯದಿಂದ ಸಮಯಕ್ಕೆ ತಕ್ಕಂತೆ ರಾಜ್ಯಾಧ್ಯಕ್ಷರು ಓಲೈಸಿದವರ ಹಿಂದೆ ಓಡಾಡಲಾರಂಭಿಸಿದರು. ಇದು ಸಹಜವಾಗಿಯೇ ಹಿರಿಯ ಸಾಹಿತಿಗಳಿಗೆ ಬೇಸರವನ್ನು ಉಂಟುಮಾಡಿದ್ದು ನಿಜ.ಸಮ್ಮೇಳನದ ಕೊನೆಯ ದಿನದವರೆಗೂ ತಮ್ಮ ಹಠವನ್ನೇ ಸಾಧಿಸುತ್ತಲೇ ಬಂದು ಯಶಸ್ವಿಯಾಗಿ ಸಮ್ಮೇಳನ ನಡೆಸಿದ ಕೀರ್ತಿಗೂ ಪಾತ್ರರಾಗಿ ರಾಜಧಾನಿ ಸೇರಿಕೊಂಡರು. ಆದರೆ, ಸಮ್ಮೇಳನದ ನಡೆದ ಸಕ್ಕರೆ ನಾಡಿನೊಳಗಿನ ಸಾಹಿತಿಗಳು, ಪರಿಷತ್ತಿನ ಪದಾಧಿಕಾರಿಗಳು ಪರಸ್ಪರ ಮುಖ ತಿರುಗಿಸಿಕೊಂಡು ಓಡಾಡುವ ಸನ್ನಿವೇಶವನ್ನು ತಂದಿಟ್ಟರು. ಸಾಹಿತಿಗಳ ನಡುವೆ ಆಂತರಿಕ ಕಚ್ಚಾಟ ಏರ್ಪಟ್ಟು ಪರಸ್ಪರರು ಬೈಯ್ದಾಡಿಕೊಳ್ಳುವ ಸ್ಥಿತಿಗೆ ರಾಜ್ಯಾಧ್ಯಕ್ಷ ಡಾ.ಮಹೇಶ್ ಜೋಶಿ ಕಾರಣರಾಗಿದ್ದಾರೆ ಎನ್ನುವುದು ಎಲ್ಲೆಡೆ ವ್ಯಾಪಕವಾಗಿ ಕೇಳಿಬರುತ್ತಿರುವ ಮಾತಾಗಿದೆ.