ಬಿರುಗಾಳಿ ಸಹಿತ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಹಾವೇರಿ ತಾಲೂಕಿನ ಹಳೇರಿತ್ತಿ, ಯಲಗಚ್ಚ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಕಬ್ಬು ಹಾಗೂ ಮೆಕ್ಕೆಜೋಳದ ಫಸಲು ನೆಲಕಚ್ಚಿದ್ದು, ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ.

ಹಾವೇರಿ:ಬಿರುಗಾಳಿ ಸಹಿತ ಸೋಮವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಹಾವೇರಿ ತಾಲೂಕಿನ ಹಳೇರಿತ್ತಿ, ಯಲಗಚ್ಚ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಕಬ್ಬು ಹಾಗೂ ಮೆಕ್ಕೆಜೋಳದ ಫಸಲು ನೆಲಕಚ್ಚಿದ್ದು, ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದೆ.

ಮಳೆಯಿಂದಾಗಿ ಹಳೇರಿತ್ತಿ, ಯಲಗಚ್ಚ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ 200ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ನೆಲಕ್ಕುರುಳಿದೆ. ಅಲ್ಲದೆ, ಸುಮಾರು 40 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಕೂಡ ಸಂಪೂರ್ಣವಾಗಿ ನೆಲಸಮವಾಗಿದೆ. ಕಟಾವಿಗೆ ಸಿದ್ಧವಾಗಿದ್ದ ಮೆಕ್ಕೆಜೋಳ ಬಿರುಗಾಳಿ ಮಳೆಗೆ ನೆಲಕ್ಕುರುಳಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರತಿ ಎಕರೆಗೆ ಸುಮಾರು 20 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮಳೆ ಹಾಗೂ ಬಿರುಗಾಳಿಯ ರಭಸಕ್ಕೆ ಕಬ್ಬಿನ ಬೆಳೆ ನೆಲಕ್ಕುರುಳಿದ್ದು, ಮುಂದಿನ ದಿನಗಳಲ್ಲಿ ಕಟಾವು ಹಾಗೂ ಸಾಗಣೆ ಕಾರ್ಯವೂ ಕಷ್ಟಕರವಾಗುವ ಆತಂಕ ರೈತರನ್ನು ಕಾಡುತ್ತಿದೆ.

ಹಳೇರಿತ್ತಿ ಭಾಗದ ಹೇಮನಗೌಡ, ಮಹೇಶ ಕಲ್ಲೇದೇವರ, ನೀಲನಗೌಡ, ಚನ್ನಬಸಪ್ಪ, ಸತೀಶ ಗೋಪಾಳಿ ಸೇರಿದಂತೆ ಹಲವು ರೈತರ ಕಬ್ಬಿನ ಬೆಳೆ ಹಾನಿಗೊಳಗಾಗಿದೆ. ಮೆಕ್ಕೆಜೋಳ ಬೆಳೆದ ರೈತರಿಗೂ ಇದೇ ಪರಿಸ್ಥಿತಿ ಎದುರಾಗಿದ್ದು, ಕಟಾವಿನ ಹಂತದಲ್ಲಿದ್ದ ಫಸಲು ಸಂಪೂರ್ಣ ನೆಲಸಮವಾಗಿದೆ.

ಮಳೆ ಕೊರತೆಯಿಂದ ಈಗಾಗಲೇ ಸಂಕಷ್ಟದಲ್ಲಿದ್ದ ರೈತರಿಗೆ ಇದೀಗ ಬಿರುಗಾಳಿ ಮಳೆ ಮತ್ತೊಂದು ಆಘಾತ ನೀಡಿದೆ. ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಸಂಭವಿಸಿರುವುದು ರೈತರ ಆರ್ಥಿಕ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಸ್ಥಳಕ್ಕೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬೆಳೆಹಾನಿ ಸಮೀಕ್ಷೆ ನಡೆಸಬೇಕು. ಹಾನಿಗೊಳಗಾದ ಪ್ರತಿಯೊಬ್ಬ ರೈತನಿಗೂ ವಾಸ್ತವಿಕ ಬೆಳೆಹಾನಿ ಆಧರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.