ಕಬ್ಬು ಬೆಳಗಾರರಿಂದ ನಾಡಿದ್ದು ಸಿಎಂಗೆ ಘೇರಾವ್

| Published : Nov 15 2024, 12:35 AM IST

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಈ ಬಗ್ಗೆ ರೈತ ಮುಖಂಡರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಲು ಮುಂದಾಗುತ್ತಿಲ್ಲ. ಜಿಲ್ಲೆಯ ಆಡಳಿತ ಯಂತ್ರವೇ ನಿಷ್ಕ್ರೀಯವಾಗಿದೆ ಎಂದು ಬೇಸರ ವ್ಯಕ್ತ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮುಂದಿನ ಎರಡು ದಿನಗಳಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸದಿದ್ದರೆ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಪಾಲ್ಗೊಳ್ಳಲು 17ರಂದು ನಗರಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಘೇರಾವ್ ಹಾಕಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ತಿಳಿಸಿದರು.

ನಗರದಲ್ಲಿ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧೆಡೆ ಕಬ್ಬಿಗೆ ವೈಜ್ಞಾನಿಕ ಬೆಲೆ ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಯಾವುದೇ ಪ್ರಯೋಜನೆ ಆಗದ ಹಿನ್ನೆಲೆ ಈ ತೀರ್ಮಾನಕ್ಕೆ ರಾಜ್ಯ ರೈತ ಸಂಘ ಬರಲಿದೆ ಎಂದು ತಿಳಿಸಿದರು.

ಹಲವು ವರ್ಷಗಳಿಂದಲೂ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿ ಟನ್ ಕಬ್ಬಿನ ಬೆಲೆ ಘೋಷಿಸಿ ಕಾರ್ಖಾನೆ ಪ್ರಾರಂಭಿಸಿ ಎಂದು ತಿಳಿಸಿದರು, ಅವರು ಅದನ್ನು ಮಾಡುತ್ತಿಲ್ಲ. ಜತೆಗೆ 2018-19ರ ಸಾಲಿನ ಬಾಕಿ ಪಾವತಿ ಮಾಡದೇ ಈ ವರ್ಷದ ಹಂಗಾಮು ಪ್ರಾರಂಭಿಸುತ್ತಿದ್ದಾರೆ. ಈ ಬಗ್ಗೆ ಕ್ರಮವಹಿಸಬೇಕಾಗಿದ್ದ ಜಿಲ್ಲಾಡಳಿತ ಹಾಗೂ ಸರಕಾರ ಸುಮ್ಮನೆ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಬಾಕಿ ಬಿಲ್ ಪಾವತಿ ಹಾಗೂ ಈ ವರ್ಷದ ದರ ಘೋಷಣೆಗೆ ಆಗ್ರಹಿಸಿ ಜಿಲ್ಲೆಯ ಮುಧೋಳ ಹಾಗೂ ಗದ್ದನಕೇರಿ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರು ಹೋರಾಟ ನಡೆಸಿದರು, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಈ ಬಗ್ಗೆ ರೈತ ಮುಖಂಡರ ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಲು ಮುಂದಾಗುತ್ತಿಲ್ಲ. ಜಿಲ್ಲೆಯ ಆಡಳಿತ ಯಂತ್ರವೇ ನಿಷ್ಕ್ರೀಯವಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಹಿಂದಿನ ರಿಕವರಿ ನೋಡಿಕೊಂಡು ಇಂದಿನ ಎಫ್‌ಆರ್‌ಪಿ ದರವನ್ನು ನಿಗದಿ ಪಡಿಸಬೇಕು. ಆದರೆ, ಸದ್ಯದ ಪ್ರತಿ ಟನ್‌ಗೆ 3 ಸಾವಿರ ರು. ಘೋಷಣೆಯಾಗಿರುವುದು ಇದಲ್ಲಿ ನ್ಯಾಯವು ಇಲ್ಲ ಹಾಗೂ ಲಾಭವು ಇಲ್ಲ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಹಿಂದಿನ ಬಿಲ್ ಪಾವತಿಸಿ ಹಾಗೂ ಪ್ರಸಕ್ತ ಸಾಲಿನ ದರ ಘೋಷಿಸಿಯೇ ಕಾರ್ಖಾನೆ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ಈರಪ್ಪ ಹಂಚನಾಳ ಮಾತನಾಡಿ, ಎಫ್‌ಆರ್‌ಪಿ ಪ್ರಕಾರ ಬಾಕಿ ಇಲ್ಲ ಎಂದು ಸಕ್ಕರೆ ಕಾರ್ಖಾನೆಯವರು ಹೇಳುತ್ತಾರೆ. ಆದರೆ, ರೈತರು ಇಲ್ಲಿಯವರೆಗೆ ಎಫ್‌ಆರ್‌ಪಿಯನ್ನೇ ಒಪ್ಪಿಲ್ಲ. ಮುಧೋಳ ತಾಲೂಕಿನ ಐಸಿಪಿಎಲ್ ಕಾರ್ಖಾನೆಯವರು ಹಿಂದಿನ ಬಿಲ್ ಪಾವತಿಗೆ ಕಾಲಾವಕಾಶ ಕೇಳಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಬೇರೆ ಸಕ್ಕರೆ ಕಾರ್ಖಾನೆಯವರು ಸಹ ಇದೇ ರೀತಿ ಸಮಯಾವಕಾಶ ಕೇಳಿದರೆ ನಾವು ಸಹ ನೀಡುತ್ತೇವೆ. ಅದನ್ನು ಬಿಟ್ಟು ಬಾಕಿ ಇಲ್ಲವೇ ಇಲ್ಲ ಎನ್ನುವುದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ರೈತರು ಹಾಗೂ ಸಕ್ಕರೆ ಕಾರ್ಖಾನೆಯವರು ಸಹೋದರರಂತೆ. ನಮಗೆ ಅವರ ಬಗ್ಗೆ ಯಾವುದೇ ಶತ್ರುತ್ವವಿಲ್ಲ. ಆದರೆ, ಕಾರ್ಖಾನೆಯವರೇ ರೈತರನ್ನು ತುಚ್ಛ ಭಾವನೆಯಿಂದ ನೋಡುತ್ತಾರೆ ಎಂದರು.

ಮುಖಂಡರಾದ ಲಿಂಗಪ್ಪ ಮೆಟಗುಡ್ಡ, ರಾಜೇಂದ್ರ ಪಾಟೀಲ, ಹನಮಂತ ಕಣಬೂರ, ನಾಗರಾಜ ಪೂಜಾರಿ ಸೇರಿ ಇತರರಿದ್ದರು.

ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಸಕ್ಕರೆ ಕೆಜಿಗೆ 31ರು. ದರವಿದ್ದು, ಅದನ್ನು 41.50ಕ್ಕೆ ಏರಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ರೈತ ಸಂಘದವರು ತಯಾರಿದ್ದಾರೆ. ಕೇಂದ್ರ ಸರಕಾರ ಮಾತ್ರ ಮನೆ ಬಳಕೆಯಾಗುವ ಸಕ್ಕರೆ ದರವನ್ನು ಹೆಚ್ಚಿಸಲು ಹೊರಟಿದೆ.

ಮುತ್ತಪ್ಪ ಕೋಮಾರ, ರಾಜ್ಯ ರೈತ ಸಂಘದ ಉಪಾಧ್ಯಕ್ಷ