ಸಾರಾಂಶ
ನಿಗದಿತ ಅವಧಿಯೊಳಗೆ ಕಬ್ಬು ಕಟಾವು ಮಾಡಲು ಸಹಾಯವಾಗುವಂತೆ ನೆರೆ ಜಿಲ್ಲೆ ಹಾಗೂ ರಾಜ್ಯದ ಕಟಾವು ಗುಂಪುಗಳ ಆಳುಗಳಿಗೆ ೩.೩೦ ಕೋಟಿ ರು. ಹಣವನ್ನು ಮುಂಗಡವಾಗಿ ನೀಡಲಾಗಿದೆ.
ಕನ್ನಡಪ್ರಭವ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಪ್ರಕ್ರಿಯೆಗೆ ಭಾನುವಾರ ಚಾಲನೆ ನೀಡಲಾಯಿತು.ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪೂರ್ಣಸ್ವಾಮಿ ಮಾತನಾಡಿ, ಪ್ರತಿ ಟನ್ ಕಬ್ಬಿಗೆ ೩,೨೯೧ ರು. ದರ ನಿಗದಿಪಡಿಸಲಾಗಿದೆ ಎಂದರು. ಕಬ್ಬು ಅಭಿವೃದ್ಧಿ ಅಧಿಕಾರಿ ದೇವೇಗೌಡ ಮಾತನಾಡಿ, ೨೦೨೪- ೨೫ನೇ ಸಾಲಿನಲ್ಲಿ ೪.೧೩ ಲಕ್ಷ ಟನ್ ಕಬ್ಬನ್ನು ಅರೆಯಲಾಗಿದೆ. ಈ ಬಾರಿ ೫೦೮ ಎಕರೆ ವಿಸ್ತೀರ್ಣದಲ್ಲಿ ಅಂದಾಜು ೪ ಲಕ್ಷ ಟನ್ ಕಬ್ಬು ಲಭ್ಯವಿದ್ದು, ಪಕ್ಕದ ಜಿಲ್ಲೆಗಳಿಂದ ಕಬ್ಬನ್ನು ತರಿಸಿಕೊಂಡು ೫ ಲಕ್ಷ ಟನ್ ಕಬ್ಬನ್ನು ಅರೆಯುವ ಗುರಿ ಒಂದಲಾಗಿದೆ ಎಂದರು.
ನಿಗದಿತ ಅವಧಿಯೊಳಗೆ ಕಬ್ಬು ಕಟಾವು ಮಾಡಲು ಸಹಾಯವಾಗುವಂತೆ ನೆರೆ ಜಿಲ್ಲೆ ಹಾಗೂ ರಾಜ್ಯದ ಕಟಾವು ಗುಂಪುಗಳ ಆಳುಗಳಿಗೆ ೩.೩೦ ಕೋಟಿ ರು. ಹಣವನ್ನು ಮುಂಗಡವಾಗಿ ನೀಡಲಾಗಿದೆ, ೧೫೦ ಕಬ್ಬು ಕಟಾವು ಮೇಸ್ತ್ರಿಗಳಿಂದ ೩೬೦ ಕಟಾವು ಗುಂಪುಗಳನ್ನು ಒದಗಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕಬ್ಬು ಸಾಗಿಸಲು ಕಾರ್ಖಾನೆಗೆ ಆಗತ್ಯಕ್ಕೆ ತಕ್ಕಂತೆ ದಾರಿ, ಟ್ರ್ಯಾಕ್ಟರ್ ಹಾಗೂ ಎತ್ತಿನ ಬಂಡಿ ನೋಂದಣಿ ಪ್ರಾರಂಭಿಸಲಾಗಿದೆ ಎಂದರು.ಕಾರ್ಖಾನೆಯು ರೈತರಿಗೆ ಕಬ್ಬಿನ ಬಿತ್ತನೆ ಬಡ್ಡಿರಹಿತವಾಗಿ ಸಾಲ ನೀಡುತ್ತಿದೆ. ರೈತರಿಗೆ ಸಸಿಗಳ ಸಾಗಾಣಿಕೆಗೆ ತಗಲುವ ಸಾಗಾಣಿಕ ವೆಚ್ಚವನ್ನು ಕಾರ್ಖಾನೆಯಿಂದ ಒದಗಿಸಲಾಗುವುದು. ಕಬ್ಬಿನ ಬೆಳೆಗೆ ಸಮತೋಲನ ಗೊಬ್ಬರವನ್ನು ಒದಗಿಸಲಾಗುವುದು ಎಂದರು.