ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಯಾವುದೇ ಕಾರಣಕ್ಕೂ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ರಾಜ್ಯ ಅವಕಾಶ ಮಾಡಿಕೊಡಬಾರದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಜಿಲ್ಲಾಢಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡು, ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾಢಳಿತಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ ,ಕೇರಳ ಸರ್ಕಾರದ ಒತ್ತಡಕ್ಕೆ ಮಣಿದು ಹಾಗೂ ವೈನಾಡಿನ ಸಂಸದೆ ಪ್ರಿಯಾಂಕಾ ವಾದ್ರಾ ರವರ ಮಾತಿಗೆ ರಾಜ್ಯ ಸರ್ಕಾರ ಮಣೆ ಹಾಕಿ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಿದರೆ ಅಕ್ರಮ ಚಟುವಟಿಕೆ ಹಾಗೂ ಕಾಡು ಪ್ರಾಣಿಗಳ ಹತ್ಯೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ರಾತ್ರಿ ಸಂಚಾರಕ್ಕೆ ರಾಜ್ಯ ಸರ್ಕಾರ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ ೫,೦೦೦ ನಿಗದಿಗೆ ಕ್ರಮ ಕೈಗೊಳ್ಳಬೇಕು, ಇಳುವರಿಯಲ್ಲಿನ ಮೋಸ ತಪ್ಪಿಸಲು ಸ್ಥಳೀಯ ತಜ್ಞರ ಜೊತೆ ರೈತ ಮುಖಂಡರ ತಾಂತ್ರಿಕ ಸಮಿತಿ ನೇಮಕ ಮಾಡಬೇಕು, ಹಾಗೂ ತೂಕದಲ್ಲಿನ ಮೋಸ ತಡೆಯಲು ಕಾರ್ಖಾನೆ ಮುಂಭಾಗ ತೂಕದ ಯಂತ್ರಗಳನ್ನು ಅಳವಡಿಸಬೇಕು ಎಂದರು.
ರಾಜ್ಯದಲ್ಲಿ ಆನ್‌ಲೈನ್ ಗೇಮ್‌ಗಳ ಹಾವಳಿ ಹೆಚ್ಚಾಗಿದ್ದು, ರಾಜ್ಯ ಸರ್ಕಾರ ಯುವಕರ ರಕ್ಷಣೆಗೆ ಮುಂದಾಗಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಆನ್ ಲೈನ್ ಗೇಮ್ ಎಂಬ ಕ್ಯಾನ್ಸರ್ ಗ್ರಾಮೀಣ ಭಾಗದಲ್ಲಿ ಯುವಕರ ಮಾರಣ ಹೋಮ ನಡೆಸುತ್ತದೆ. ಆದ್ದರಿಂದ ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಸಹ ತಕ್ಷಣ ನಿಲ್ಲಿಸಬೇಕು ಎಂದರು.ಮಲಿಯೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಚಿನ್ನದ ಅವ್ಯವಾರದಲ್ಲಿ ಮೋಸ ಹೋಗಿದ್ದ ಕೆಲವು ರೈತರಿಗೆ ಮಾತ್ರ ಚಿನ್ನವನ್ನು ಬಿಡಿಸಿಕೊಡಲು ಕ್ರಮ ಕೈಗೊಂಡಿದ್ದು, ಉಳಿದ ರೈತರ ಚಿನ್ನವನ್ನು ಕಾನೂನು ತೊಡಕುಗಳನ್ನು ಸರಿಪಡಿಸಿ ತಕ್ಷಣ ಕೊಡಿಸಲು ಕ್ರಮ ಕೈಗೊಳ್ಳಬೇಕು.
ಕೃಷಿ ಪಂಪ್ಸೆಟ್ಟುಗಳಿಗೆ ಅಕ್ರಮ ಸಕ್ರಮ ಯೋಜನೆ ಮರು ಜಾರಿ ಆಗಬೇಕು, ಹಗಲು ವೇಳೆ ಕೃಷಿ ಪಂಪ್‌ಸೆಟ್‌ಗಳಿಗೆ ೧೦ ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು, ಹಾಲಿನ ಪ್ರೋತ್ಸಾಹ ಧನ ಸುಮಾರು ೮೦೦ ಕೋಟಿ ರು. ಹಣವನ್ನು ರಾಜ್ಯ ಸರ್ಕಾರ ನೀಡಬೇಕು. ಗ್ರಾಹಕರ ಮೇಲೆಹೊರೆಯನ್ನು ಹೊರಿಸಿ, ರೈತರಿಗೆ ಹಾಲಿನ ದರ ೪ ರು. ಹೆಚ್ಚಿಸಿದ್ದೇವೆ ಎಂದು ಸುಳ್ಳು ಹೇಳುವುದನ್ನು ನಿಲ್ಲಿಸಿ ಪ್ರೋತ್ಸಾಹ ಧನದ ಹಣವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಕಾವೇರಿ ಗ್ರಾಮೀಣ ಬ್ಯಾಂಕ್ ರೈತರ ಮನೆ ಬಾಗಿಲಿಗೆ ನೋಟಿಸ್ ಅನ್ನು ನೀಡಿ ಕಿರುಕುಳ ನೀಡುತ್ತಿರುವುದನ್ನು ನಿಲ್ಲಿಸಬೇಕು, ಜಿಲ್ಲೆಯಲ್ಲಿ ಅಂತರ್‌ಜಲ ವೃದ್ಧಿಗಾಗಿ ಉಳಿದಿರುವ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದರು.ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತಾಗಬೇಕು. ಇದಕ್ಕೆ ಪೂರಕವಾಗುವಂತೆ ಸ್ಥಳೀಯ ಸಮಸ್ಯೆಗಳ ಬಗೆಹರಿಸಲು ಜಿಲ್ಲಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಮಂತ್ರಿಗಳು, ಎಂಎಲ್‌ಎಗಳು, ಎಂಪಿಗಳು ತಮಗೆ ಬೇಕಾದಂತೆ ಸಂಬಳ, ಸಾರಿಗೆ, ವಸತಿ ಭತ್ಯೆಗಳನ್ನು ಪಕ್ಷಾತೀತವಾಗಿ ಏರಿಕೆ ಮಾಡಿಕೊಂಡರು, ಆದರೆ ರೈತರ ವೈಜ್ಞಾನಿಕ ಬೆಲೆ ಮತ್ತು ಕೃಷಿ ಉತ್ಪನ್ನಗಳಿಗೆ ಬಿಎಸ್‌ಪಿ ಮಿನಿಮಮ್ ಸಪೋರ್ಟ್ ಪ್ರೈಸ್ ಕಾನೂನು ಜಾರಿಗೆ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.ಈ ವಿಚಾರಗಳ ಬಗ್ಗೆ ಜಿಲ್ಲಾಢಳಿತ ಗಮನ ಹರಿಸಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ರೈತರ ಜೊತೆಗೂಡಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್, ಬಸವಣ್ಣ, ಪುಟ್ಟಮಲ್ಲೇಗೌಡ, ಮಹೇಂದ್ರಕುಮಾರ್, ನಾಗರಾಜು, ಮಹದೇವಸ್ವಾಮಿ, ಮಾದೇಶ್, ಪ್ರಕಾಶ್, ಸೋಮು, ಸಿದ್ದಪ್ಪಾಜಿ, ಸಿದ್ದರಾಜು, ನಂಜುಂಡಿ, ಮೂರ್ತಿ, ಮಂಜು, ಮಹದೇವಪ್ಪ, ರಾಜು, ಮಾದಪ್ಪ, ಶಿವನಂಜಪ್ಪ, ನಾಗೇಂದ್ರ, ಪ್ರಭುಸ್ವಾಮಿ, ನಂದೀಶ್ ಇತರರು ಭಾಗವಹಿಸಿದ್ದರು.