ತಹಸೀಲ್ದಾರ್‌ ಕಚೇರಿಗೆ ಕಬ್ಬು ಬೆಳೆಗಾರರ ಮುತ್ತಿಗೆ

| Published : Nov 17 2024, 01:21 AM IST

ಸಾರಾಂಶ

ಮುಧೋಳ ನಿರಾಣಿ ಶುಗರ್ಸ್‌ಗೆ ಕಬ್ಬು ಪೂರೈಕೆದಾರರು, ಟ್ರ್ಯಾಕ್ಟರ್ ಮಾಲೀಕರು, ಕಾರ್ಮಿಕರಿಂದ ಬೃಹತ್ ಪ್ರತಿಭಟನೆ ಕೈಗೊಂಡು ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮುಧೋಳ ನಿರಾಣಿ ಶುಗರ್ಸ್ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಕಬ್ಬು ಕಟಾವುದಾರರು, ವಾಹನ ಮಾಲೀಕರು ಮತ್ತು ಕಬ್ಬು ಬೆಳೆಗಾರರು, ಕಾರ್ಮಿಕರಿಂದ ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಮಖಂಡಿ ರಸ್ತೆಯ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಆರಂಭಗೊಂಡ ಮೆರವಣಿಗೆ ತಹಸೀಲ್ದಾರ್‌ ಕಚೇರಿಗೆ ಆಗಮಿಸಿ ಮುತ್ತಿಗೆ ಹಾಕಲಾಯಿತು. ತಾಲೂಕು ಮತ್ತು ಜಿಲ್ಲಾಡಳಿತ ಕಬ್ಬು ಸಾಗಾಣಿಕೆಗೆ ಸೂಕ್ತ ಭದ್ರತೆ ಒದಗಿಸಿ ನಿರಾಣಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಲು ಅವಕಾಶ ಒದಗಿಸಿಕೊಂಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಗತಿಪರ ರೈತ ಬಸವರಾಜ ಜಮಖಂಡಿ ಮಾತನಾಡಿ, ನಿರಾಣಿ ಕಾರ್ಖಾನೆ ಮಾಲೀಕರು ಪ್ರಸಕ್ತ ಹಂಗಾಮಿಗೆ ಕಬ್ಬು ನುರಿಸುವ ಕಾರ್ಯ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಕೂಡಲೇ ತಾಲೂಕು, ಜಿಲ್ಲಾಡಳಿತ ಮಧ್ಯಸ್ಥಿಕೆವಹಿಸಿ ರೈತರ ಹಿತದೃಷ್ಟಿಯಿಂದ ಕಾರ್ಖಾನೆ ಪ್ರಾರಂಭಿಸಲು ಸೂಚಿಸಬೇಕು. ರಾಜ್ಯ ಮಾತ್ರವಲ್ಲ ಜಿಲ್ಲೆಯಲ್ಲಿನ ಎಲ್ಲ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶದಂತೆ 2024-25ರ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದೆ. ಆದರೆ ಅತೀ ಹೆಚ್ಚು ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುವ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿಲ್ಲ. ಕಾರಣವಲ್ಲದ ತೊಂದರೆಗಳಿಂದ ಕಾರ್ಖಾನೆ ಬಂದ್ ಮಾಡಿದ್ದು, ಇನ್ನು ಮುಂದೆ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ನ.12ರಂದು ಕಾರ್ಖಾನೆ ಆವರಣದಲ್ಲಿ ನಡೆದ ಘಟನೆಯಿಂದ ಈ ನಿರ್ಧಾರಕ್ಕೆ ಬಂದಿದ್ದು. ಅವರು ಕಾರ್ಖಾನೆ ಪ್ರಾರಂಭ ಮಾಡದಿದ್ದರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೈತರ, ಟ್ರ್ಯಾಕ್ಟರ್ ಮಾಲೀಕರು ಕೊಟ್ಯಂತರ ರು. ನಷ್ಟ ಅನುಭವಿಸಬೇಕಾಗುತ್ತದೆ.

ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಭಾರಿ ಬೆಲೆ ತೆರಬೇಕಾಗುತ್ತದೆ. ಈ ಕಾರಣಗಳಿಂದಾಗಿ ಕೂಡಲೇ ಕಾರ್ಖಾನೆಯನ್ನು ಸ್ಥಳೀಯ ಆಡಳಿತವು ಪೊಲೀಸ್ ಮಧ್ಯಸ್ಥಿಕೆಯಲ್ಲಿ ಸೂಕ್ತ ಬಂದೋಬಸ್ತ್‌ ನೀಡಿ ಪ್ರಾರಂಭ ಮಾಡಿಸಬೇಕು. ರಜತೆಗೆ ಕಬ್ಬು ಕಳಿಸುವ ರೈತರಿಗೆ ಮತ್ತು ಟ್ರ್ಯಾಕ್ಟರ್ ಮಾಲೀಕರಿಗೆ ಭದ್ರತೆ ಒದಗಿಸಿದಾಗ ಮಾತ್ರ ಈ ಕಾರ್ಖಾನೆ ಪ್ರಾರಂಭವಾಗಲು ಸಾಧ್ಯ ಎಂದು ಹೇಳಿದರು.

ರೈತ ವೆಂಕಣ್ಣ ಗಿಡಪ್ಪನವರ ಮಾತನಾಡಿ, ಕೃಷಿ ಚಟುವಟಿಕೆಗೆ ಅನುಕೂಲವಾಗಬೇಕಾದರೆ ಕಬ್ಬು ಸೂಕ್ತ ಸಮಯದಲ್ಲಿ ಕಳಿಸಬೇಕಾಗತ್ತದೆ. ಆದರೆ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯೂ ಇದುವರೆಗೂ ಪ್ರಾರಂಭಗೊಳ್ಳದೇ ಇರುವುದರಿಂದ ನಾವು ಬೆಳೆದ ಕಬ್ಬು ಹಾನಿಗೊಳಗಾಗುವ ಸಂಭವವಿದೆ. ವಿಳಂಬವಾಗುತ್ತಾ ಹೋದರೆ ಕಬ್ಬು ಮಾಗಿ, ಹೂ ಬಿಟ್ಟು, ತೂಕ ಮತ್ತು ಇಳುವರಿ ಕಡಿಮೆಯಾಗುತ್ತದೆ. ಜನವರಿ ತಿಂಗಳಿನಿಂದ ಬಿಸಿಲಿನ ಜಳ ಹೆಚ್ಚಾದಂತೆ ಕಬ್ಬು ಕಡಿಯುವ ಆಳುಗಳಿಗೆ ಹೆಚ್ಚಿನ ಹಣ ನೀಡುವ ಸಮಸ್ಯೆ ಉಂಟಾಗಿ ಮುಂದಿನ ಕೃಷಿ ಚಟುವಟಿಕೆಗಳು ಸಹ ಕುಂಠಿತಗೊಳ್ಳುತ್ತವೆ ಎಂದರು.

ಕೋಲೂರಿನ ರೈತ ಮಲ್ಲಪ್ಪ ಪೂಜಾರ ಮಾತನಾಡಿ, ನಾವು ನಿರಾಣಿ ಕಾರ್ಖಾನೆಗೆ ಹಲವಾರು ವರ್ಷಗಳಿಂದ ಕಬ್ಬು ಕಳಿಸುತ್ತಿದ್ದು, ನಮ್ಮ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನದರ ನೀಡುತ್ತಾ ಬಂದಿದ್ದಾರೆ. ನಾವೇ ನಿಗದಿಪಡಿಸಿದ ಬೆಲೆ ನೀಡಿದ್ದಾರೆ. ಆದರೆ ಕೆಲವರು ವಿನಾಕಾರಣ ಕಾರ್ಖಾನೆ ಪ್ರಾರಂಭವಾಗದಂತೆ ನೋಡಿ ಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಬೆಳೆದ ಕಬ್ಬನ್ನು ಕಳುಹಿಸಲು ಸಿದ್ಧರಿದ್ದು, ತಾವು ನಮ್ಮ ಕಬ್ಬಿಗೆ ಯಾವುದೇ ರೀತಿ ಹಾನಿಯಾಗದಂತೆ ಸೂಕ್ತ ಕ್ರಮಕೈಗೊಂಡು ಕಬ್ಬು ಪೂರೈಸಲು ಅನುಕೂಲ ಮಾಡಿ ಕೊಡಲು ಮುಂದಾಗಬೇಕೆಂದರು.

ರೈತ ಮುಖಂಡರಾದ ಉದಯಕುಮಾರ ಸಾರವಾಡ, ಮಲ್ಲಪ್ಪ ಪೂಜಾರ, ಬಸವರಾಜ ಜಮಖಂಡಿ, ಅಜೀತ ಹೊನವಾಡ, ವೆಂಕಣ್ಣ ಗಿಡಪ್ಪನವರ, ಎಸ್.ಎಸ್.ಅಕ್ಕಿಮರಡಿ, ಸದಾಶಿವ ಇಟಕನ್ನವರ, ನಾರಾಯಣ ಹವಾಲ್ದಾರ, ಮಹಾದೇವಪ್ಪ ಹೊಸಕೋಟಿ, ಬಸವಂತಪ್ಪ ಕಾಠೆ, ರಾಮನಗೌಡ ನಾಡ, ಕಲ್ಮೇಶ ಗೋಸಾರ, ಭೀಮಶಿ ಹಲಕಿ, ಈಶ್ವರ ಕಾಡಪ್ಪನವರ, ಚನ್ನಪ್ಪ ಪುರಾಣಿಕ, ಯಲ್ಲಪ್ಪ ಬೇಗತಿ, ಚಿಕ್ಕಪ್ಪ ನಾಯಕ , ರಾಮನಗೌಡ ಪಾಟೀಲ, ಎಂ.ಜಿ. ಹಾದಿಮನಿ, ಗಿರೆಪ್ಪ ಬಳಗಾರ, ಎಂ.ಜಿ.ಹಾದಿಮನಿ, ರಂಗನಗೌಡ ಪಾಟೀಲ, ಎಸ್.ಎಸ್.ಅಕ್ಕಿಮರಡಿ, ಪಂಡಿತ ಪೂಜಾರಿ, ಚಿಕ್ಕಪ್ಪ ನಾಯ್ಕ, ಪರಮಾನಂದ ಆಲಗೂರ ಇತರರು ಸೇರಿದಂತೆ ಕಾರ್ಖಾನೆಯ ಕಾರ್ಮಿಕರು ಇದ್ದರು.

ನಾಳೆಯೊಳಗೆ ಸಮಸ್ಯೆ ಇತ್ಯರ್ಥದ ಭರವಸೆ

ರೈತ ಮುಖಂಡರು ಜಮಖಂಡಿ ಡಿವೈಎಸ್ಪಿ ಶಾಂತವೀರ ಜೊತೆ ಮಾತುಕತೆ ನಡೆಸಿದ್ದು, ಇದೇ ಸೋಮವಾರದೊಳಗಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರೈತರ ಸಭೆ ನಡೆಸಿ ಯಾವುದೇ ತೊಂದರೆ ಆಗದಂತೆ ತಾವು ಅನುಕೂಲ ಮಾಡಿಕೊಡಲಾಗುವುದೆಂದು ತಿಳಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.