ಸರ್ಕಾರ ಬೇಗನೆ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮುಂದೆ ರೈಲು ಸಂಚಾರ ಹಾಗೂ ವಿಮಾನ ಹಾರಾಟ ನಿಲ್ಲಿಸುವ ಮೂಲಕ ಉಗ್ರ ಹೋರಾಟ
ಬಂಕಾಪುರ: ಮಂಗಳವಾರ ಬೆಳಗ್ಗೆಯಿಂದಲೇ ಪ್ರಾರಂಭವಾದ ರೈತರ ಹೋರಾಟ ರಾತ್ರಿವರೆಗೂ ಶಾಂತಿಯಿಂದ ನಡೆಯಿತು. ರಾತ್ರಿ ರೈತ ಸಂಘಟನೆಗಳು ಕೂಡಿಕೊಂಡು ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದರು. ನಂತರ ರೈತರು ಅಹೋರಾತ್ರಿ ಭಜನೆ ಮಾಡಿದರು. ಕೆಲವು ರೈತರು ರಸ್ತೆಯಲ್ಲೇ ಮಲಗಿದರೆ ಕೆಲವು ರೈತರು ಭಜನೆ ನೋಡುತ್ತಾ ಬೆಳಗಿನವರೆಗೂ ಕಾಲ ಕಳೆದರು. ರೈತರ ಹೋರಾಟಕ್ಕೆ ಬೆಲೆ ಕೊಡದೇ ಸರ್ಕಾರಗಳು ತಮ್ಮ ದರ್ಪವನ್ನು ತೋರಿಸುತ್ತಿವೆ. ಹೋರಾಟ ನಡೆಸಿ ಎರಡು ದಿನವಾದರೂ ಯಾವುದೇ ರಾಜಕಾರಣಿಗಳಾಗಲಿ, ಅಧಿಕಾರಿಗಳಾಗಲಿ ರೈತರ ಗೋಳನ್ನು ಕೇಳಲು ಮುಂದಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಬೇಗನೆ ಎಚ್ಚೆತ್ತುಕೊಂಡು ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ನಾವು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಮುಂದೆ ರೈಲು ಸಂಚಾರ ಹಾಗೂ ವಿಮಾನ ಹಾರಾಟ ನಿಲ್ಲಿಸುವ ಮೂಲಕ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಹೋರಾಟಕ್ಕೆ ಹಾವೇರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೇಮನಗೌಡ ಸಿ. ಸಿದ್ದನಗೌಡ್ರ ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ನೀವು ಯಾವುದೇ ರೀತಿಯಲ್ಲಿ ಹೋರಾಟಕ್ಕೆ ಭಯ ಪಡದೇ ಶಾಂತ ರೀತಿಯಿಂದ ಹೋರಾಟ ನಡೆಸಬೇಕು. ನಿಮ್ಮ ಬೆಂಬಲಕ್ಕೆ ಯಾವಾಗಲೂ ಸಿದ್ಧರಿದ್ದೇವೆ ಎಂದು ಧೈರ್ಯ ತುಂಬಿದರು.ರೈತರ ಪ್ರತಿಭಟನೆಗೆ ಸಹಾಯಹಸ್ತ ನೀಡಿದ ಸವಣೂರು ತಾಲೂಕಿನ ಹುಲಗೂರ ಗ್ರಾಮದ ಉದ್ಯಮಿ ಬಾಬಾಪೀರ ಖಾದ್ರಿ ಇವರು ಬಿರು ಬಿಸಿಲೆನ್ನದೇ ಪ್ರತಿಭಟನೆಯಲ್ಲಿ ನಿರತರಾದ ರೈತರಿಗೆ ಕುಡಿಯುವ ನೀರಿನ ಬಾಟಲಿಗಳನ್ನು ನೀಡಿ ಮಾನವೀಯತೆ ಮೆರೆದರು. ಹಾನಗಲ್ಲ ತಾಲೂಕಿನ ದೇವಿಹೊಸೂರಿನ ರಾಜು ಎಂಬವರು ರೈತರಿಗೆ ಅಲ್ಪ ಉಪಹಾರ ನೀಡಿದರು.ಪ್ರತಿಭಟನೆಯಲ್ಲಿ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಣ್ಣ ಹುಚ್ಚಣ್ಣವರ, ಉಪಾಧ್ಯಕ್ಷರಾದ ಬಸಯ್ಯ ಬರಡಿ, ರುದ್ರಪ್ಪ ಬಳಿಗಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶಶಿಧರ ಹೊನ್ನಣ್ಣವರ, ಕೃಷಿ ಸಮಾಜದ ಅಧ್ಯಕ್ಷರಾದ ನಾಗನಗೌಡ ಮರಿಗೌಡ್ರ, ಸಂಗಮೇಶ ಪಿತಾಂಬರಶೆಟ್ಟಿ, ದೇವರಾಜ ದೊಡ್ಡಮನಿ, ಶಿವಾನಂದ ಜಡಿಮಠ, ಶಿವಣ್ಣ ಕಬ್ಬೂರ, ಬಸಲಿಂಗಪ್ಪ ನರಗುಂದ, ಈರಣ್ಣ ಸೋಮಗೊಂಡ, ದೇವಣ್ಣ ಹಳವಳ್ಳಿ, ಕರೆಪ್ಪ ಹಳ್ಳದ, ಆನಂದ ಕೆಳಗಿನಮನಿ, ಶಂಕರಗೌಡ ಪಾಟೀಲ, ಶಿಗ್ಗಾಂವಿ, ರಾಣಿಬೆನ್ನೂರು, ಸವಣೂರು, ಹಾನಗಲ್ಲ ತಾಲೂಕಿನ ರೈತ ಮುಖಂಡರು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಡಿಸಿ ಭೇಟಿ: ಮಂಗಳವಾರ ರಾತ್ರಿ ಆಗಮಿಸಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು ಪ್ರತಿಭಟನೆಯಲ್ಲಿ ನಿರತರಾದ ರೈತ ಸಂಘಟನೆಗಳ ಹೋರಾಟವನ್ನುದ್ದೇಶಿಸಿ ಮಾತನಾಡಿದ ಅವರು, ರೈತರಿಗೆ ಶಾಂತರೀತಿಯಿಂದ ಹೋರಾಟ ನಡೆಸುವಂತೆ ತಿಳಿಸಿದರು. ನಾನು ಈಗಲೇ ದೆಹಲಿಯಿಂದ ಆಗಮಿಸಿದ್ದು, ಮೇಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು ತಮ್ಮ ಹೋರಾಟಕ್ಕೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇನೆ ಎಂದರು.