ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಕಬ್ಬು ತುಂಬಿಕೊಂಡು ತಮಿಳುನಾಡಿಗೆ ತೆರಳುತ್ತಿದ್ದ ಲಾರಿಯೊಂದು ರಾಮಪುರ ನಾಲಾ ರೋಡ್ ಮಾರ್ಗದಲ್ಲಿ ಪಲ್ಟಿ ಹೊಡೆದು ಚಾಲಕ ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಗ್ರಾಮದಿಂದ ಕಬ್ಬು ತುಂಬಿಕೊಂಡು ತಮಿಳುನಾಡಿನ ಸೇಲಂ ಜಿಲ್ಲೆಗೆ ತೆರಳುತ್ತಿದ್ದ ಲಾರಿಯೊಂದು ರಾಮಪುರ ಹಾಗೂ ನಾಲಾ ರೋಡ್ ಮಾರ್ಗ ಮಧ್ಯ ಬೆಳಗಿನ ಜಾವ 5.30ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ. ಇದರ ಪರಿಣಾಮ ಕಬ್ಬು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು, ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರಿಂದ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಗುಂಡಿಮಯವಾದ ರಸ್ತೆಯಿಂದ ಸರಣಿ ಅಪಘಾತಗಳು: ಈ ರಸ್ತೆಯಲ್ಲಿ ದಿನನಿತ್ಯ ನೂರಾರು ಸರಕು ತುಂಬಿದ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಯು ಗುಂಡಿಮಯವಾಗಿ ವಾಹನ ಸವಾರರು ಗುಂಡಿಗಳು ಇರುವುದನ್ನು ತಿಳಿಯದೆ ಈ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿವೆ. ಜೊತೆಗೆ ವಾಹನಗಳ ಬಿಡಿ ಭಾಗಗಳು ಸಹ ಹಾಳಾಗುತ್ತಿದ್ದು , ಖಾಸಗಿ ವಾಹನ ಸವಾರರೆ ಈ ರಸ್ತೆಯನ್ನು ಗುಂಡಿ ಮುಚ್ಚುವ ಕೆಲಸ ಮಾಡಿದ್ದರೂ ಸಹ ರಸ್ತೆ ದುರಸ್ತಿ ಪಡಿಸದೆ ಇರುವುದರಿಂದ ಪದೇ ಪದೇ ಈ ಮಾರ್ಗದಲ್ಲಿ ಹಲವಾರು ಸರಣಿ ಅಪಘಾತಗಳು ನಡೆಯುತ್ತಿವೆ.
ರಸ್ತೆ ದುರಸ್ತಿಗೆ ಒತ್ತಾಯ:ಅಂತಾರಾಜ್ಯ ತಮಿಳುನಾಡಿಗೆ ಹೋಗಿ ಬರುವ ರಸ್ತೆ ಇದಾಗಿದ್ದು, ಕಳೆದ 15-20 ವರ್ಷಗಳಿಂದ ಈ ಮಾರ್ಗದ ರಸ್ತೆ ದುರಸ್ತಿ ಪಡಿಸದೆ ಇರುವುದರಿಂದ ದಿನನಿತ್ಯ ವಾಹನ ದಟ್ಟಣೆಯಿಂದ ಈ ಭಾಗದಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯನ್ನು ದುರಸ್ತಿ ಪಡಿಸುವಂತೆ ವಾಹನ ಸವಾರರು ಸರ್ಕಾರ ಹಾಗೂ ಸಂಬಂಧಪಟ್ಟ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಮತ್ತು ಇಲ್ಲಿನ ಜನಪ್ರತಿನಿಧಿಗಳನ್ನು ಸಹ ಅಂತಾರಾಜ್ಯ ರಸ್ತೆ ದುರಸ್ತಿ ಪಡಿಸುವಂತೆ ಜೊತೆಗೆ ದಿನನಿತ್ಯ ಆಗುತ್ತಿರುವ ಅಪಘಾತಗಳನ್ನು ತಪ್ಪಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.