ಕನ್ನಡಪ್ರಭ ವಾರ್ತೆ ಬೆಳಗಾವಿಕಬ್ಬಿನ ಎಫ್‌ಆರ್‌ಪಿ ಹೆಚ್ಚಳ, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಎಥೆನಾಲ್‌ ಖರೀದಿ ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹುಬ್ಬಳ್ಳಿ ನಿವಾಸದವರೆಗೆ ನಡೆಸುತ್ತಿರುವ ಪಾದಯಾತ್ರೆ ಗುರುವಾರ ಎರಡನೇ ದಿನ ಪೂರೈಸಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಬ್ಬಿನ ಎಫ್‌ಆರ್‌ಪಿ ಹೆಚ್ಚಳ, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ಎಥೆನಾಲ್‌ ಖರೀದಿ ಹಾಗೂ ಸ್ವಾಮಿನಾಥನ್‌ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹುಬ್ಬಳ್ಳಿ ನಿವಾಸದವರೆಗೆ ನಡೆಸುತ್ತಿರುವ ಪಾದಯಾತ್ರೆ ಗುರುವಾರ ಎರಡನೇ ದಿನ ಪೂರೈಸಿತು.

ಹುಕ್ಕೇರಿ ತಾಲೂಕಿನ ಹತ್ತರಗಿ ಪ್ರತಿಭಟನಾ ಸ್ಥಳದಿಂದ ಬುಧವಾರ ಸಂಜೆ ಆರಂಭಗೊಂಡ ಪಾದಯಾತ್ರೆ ಸುಮಾರು 30 ಕಿಮೀ ಕ್ರಮಿಸಿ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಸಮೀಪದ ಮುಕ್ತಿಮಠದಲ್ಲಿ ರೈತರು ವಾಸ್ತವ್ಯ ಹೂಡಿದ್ದರು. ಗುರುವಾರ ಬೆಳಗ್ಗೆ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಪಾದಯಾತ್ರೆ ಪುನಾರಂಭಗೊಂಡಿದ್ದು, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ಸಾವಿರಾರು ರೈತರು ಹೆಜ್ಜೆ ಹಾಕಿದರು. ಸುಮಾರು 130 ಕಿಮೀ ದೂರದ ಪಾದಯಾತ್ರೆ ಮೂಲಕ ಹುಬ್ಬಳ್ಳಿಗೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಮನೆಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ. ದಾರಿಯುದ್ದಕ್ಕೂ ವಿವಿಧೆಡೆಯಿಂದ ರೈತರು ಪಾದಯಾತ್ರೆಗೆ ಸೇರುವ ನಿರೀಕ್ಷೆಯಿದೆ.

ಮುಕ್ತಿಮಠದಿಂದ ಆರಂಭವಾದ ಪಾದಯಾತ್ರೆ ಕಾಕತಿ ಗ್ರಾಮದ ಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಿತು. ದೇವಸ್ಥಾನದಲ್ಲಿ ಮಧ್ಯಾಹ್ನದ ಊಟ ಮುಗಿಸಿದ ಬಳಿಕ ರೈತರು ಮತ್ತೆ ಪಾದಯಾತ್ರೆ ಮುಂದುವರಿಸಿದರು. ಸುವರ್ಣ ವಿಧಾನಸೌಧದ ಬಳಿ ವಾಸ್ಯವ್ಯ ಹೂಡಲಿದ್ದಾರೆ. ಪ್ರತಿದಿನ ಸುಮಾರು 20 ಕಿ.ಮೀ. ಕ್ರಮಿಸುವ ಮೂಲಕ ಹುಬ್ಬಳ್ಳಿ ತಲುಪುವ ಉದ್ದೇಶವನ್ನು ರೈತ ಮುಖಂಡರು ಹೊಂದಿದ್ದಾರೆ.

ಸಮಿತಿ ಮಾಡಿ ಕಾಲಹರಣ ಬೇಡ:

ಪಾದಯಾತ್ರೆ ವೇಳೆ ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಕೇಂದ್ರ ಸರ್ಕಾರ ಸಮಿತಿ ರಚಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ಸಮಿತಿ ರಚಿಸಿ ಒಂದು ತಿಂಗಳು ಕಾಲಹರಣ ಮಾಡುವುದನ್ನು ಒಪ್ಪುವುದಿಲ್ಲ. ಪ್ರಲ್ಹಾದ್‌ ಜೋಶಿ ಅವರ ಮನೆ ತಲುಪುವ ಮುನ್ನವೇ ನಮ್ಮ ಬೇಡಿಕೆಗಳಿಗೆ ಸ್ಪಷ್ಟ ಘೋಷಣೆ ಆಗಬೇಕು. ಇಲ್ಲವಾದರೆ ಹುಬ್ಬಳ್ಳಿಯಲ್ಲಿ 50 ಲಕ್ಷ ರೈತರನ್ನು ಸೇರಿಸಿ ಹೋರಾಟ ಮುಂದುವರಿಸುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಜನರು, ಜಾನುವಾರುಗಳು ಸಂಕಷ್ಟದಲ್ಲಿವೆ. ಇವೆಲ್ಲವನ್ನೂ ಬಿಟ್ಟು ರೈತರು ಪಾದಯಾತ್ರೆ ಮಾಡುತ್ತಿದ್ದಾರೆ. ನಮ್ಮ ನೋವು ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ಎಲ್ಲ ಪಕ್ಷಗಳಿಗೂ ನಾವು ಮತ ಹಾಕಿದ್ದೇವೆ. 224 ಶಾಸಕರು, 28 ಸಂಸದರು ಏನು ಮಾಡುತ್ತಿದ್ದಾರೆ? ರೈತರ ಋಣ ತೀರಿಸುವ ಜವಾಬ್ದಾರಿ ನಿಮಗಿಲ್ಲವೇ ಎಂದು ಪ್ರಶ್ನಿಸಿದರು.

ಇಲ್ಲಿಂದ ಜೋಶಿ ಅವರ ಮನೆವರೆಗೆ ಹೋಗುತ್ತೇವೆ. ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಚೂನಪ್ಪ ಪೂಜಾರಿ ಸ್ಪಷ್ಟಪಡಿಸಿದರು.

ಹೆದ್ದಾರಿಯಲ್ಲೇ ಉರುಳು ಸೇವೆ:

ಪಾದಯಾತ್ರೆ ಸಾಗುತ್ತಿದ್ದ ವೇಳೆ ರೈತ ಮುಖಂಡ ಪ್ರೇಮ್‌ ಚೌಗಲಾ ಅವರು ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿರು ಬಿಸಿಲಿನಲ್ಲಿ ಅರೆಬೆತ್ತಲೆಯಾಗಿ ಉರುಳು ಸೇವೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಗೆ ಕರೆದು ರೈತರನ್ನು ಅವಮಾನ ಮಾಡಲಾಗಿದೆ. ರೈತರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು. ಪ್ರಹ್ಲಾದ ಜೋಶಿ ಅವರಿಗೆ ವಯಸ್ಸಾಗಿದೆ. ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ, ನಮ್ಮ ಜಮೀನಿಗೆ ಬನ್ನಿ, ನಿಮಗೆ ಕೆಲಸ ಕೊಡುತ್ತೇವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರೈತ ಹೋರಾಟದಲ್ಲಿ ಭಿನ್ನಮತ ಸ್ಫೋಟ:

ಇದೇ ವೇಳೆ ಹಿರೇಬಾಗೇವಾಡಿ ಟೋಲ್‌ಗೇಟ್‌ ಬಳಿ ರೈತ ಹೋರಾಟದಲ್ಲಿ ಭಿನ್ನಮತದ ವಾತಾವರಣವೂ ನಿರ್ಮಾಣವಾಯಿತು. ಹತ್ತರಗಿಯಿಂದ ಪಾದಯಾತ್ರೆ ಮುಂದುವರಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹೆದ್ದಾರಿ ತೆರವು ಮಾಡುವಂತೆ ಕೆಲ ರೈತ ಮುಖಂಡರು ಮನವಿ ಮಾಡಿದಾಗ, ಕೆಲವು ಪ್ರತಿಭಟನಾಕಾರರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಹೋರಾಟ ಕೈಬಿಟ್ಟಿರುವುದಕ್ಕೆ ಕೆಲ ರೈತರು ಆಕ್ರೋಶ ವ್ಯಕ್ತಪಡಿಸಿ, ರೈತ ಮುಖಂಡರ ವಿರುದ್ಧ ಕಿಡಿಕಾರಿದರು.

ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಹೆದ್ದಾರಿ ತೆರವು ಮಾಡುವುದಿಲ್ಲ ಎಂದು ಅವರು ಪಟ್ಟು ಹಿಡಿದರು. ಈ ವೇಳೆ ಮಧ್ಯಸ್ಥಿಕೆ ವಹಿಸಿದ ಡಿಸಿಪಿ ನಾರಾಯಣ ಭರಮನಿ, ರೈತರಿಗೆ ಇನ್ನೂ ಪೊಲೀಸ್‌ ಭಾಷೆಯಲ್ಲಿ ಉತ್ತರಿಸಬೇಕಾ? ಕಾನೂನು ಕೈಗೆತ್ತಿಕೊಳ್ಳುವ ಪರಿಸ್ಥಿತಿ ನಿರ್ಮಿಸಬೇಡಿ. ಎರಡು ದಿನಗಳಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ನಿಮ್ಮ ಮುಖಂಡರು ಕೂಡ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹೋರಾಟ ನಡೆಸುವ ಕುರಿತು ಹೇಳಿದ್ದಾರೆ. ನಾನೂ ರೈತನ ಮಗ. ನಿಮ್ಮ ಬೇಡಿಕೆ ಈಡೇರಿದರೆ ನನಗೂ ಖುಷಿಯೇ ಎಂದು ಮನವಿ ಮಾಡಿದರು.

ಹತ್ತರಗಿಯಿಂದ ಬರುತ್ತಿರುವ ಪಾದಯಾತ್ರೆಯೊಂದಿಗೆ ಸೇರಿಕೊಂಡು ಶಾಂತಿಯುತವಾಗಿ ಹೋರಾಟ ಮುಂದುವರಿಸುವಂತೆ ಅವರು ರೈತರಿಗೆ ಕರೆ ನೀಡಿದರು.