ಸಾರಾಂಶ
ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗಿನ ಸಭೆ
ಕನ್ನಡಪ್ರಭ ವಾರ್ತೆ ಹಾನಗಲ್ಲವ್ಯವಸ್ಥೆಯ ಸುಧಾರಣೆಗೆ ಗಮನ ಹರಿಸಿದ್ದು, ಸತ್ಯ ಮಾತನಾಡಿ ವಾಸ್ತವ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಬದಿಗೊತ್ತಿ ಜನಪರ ಆಡಳಿತಕ್ಕೆ ಮುಂದಾಗಿದ್ದು ಸಮಾಜದಲ್ಲಿ ಬದಲಾವಣೆ ತರಲು, ಸಮಸ್ಯೆ ಪರಿಹರಿಸಲು ಸಕಾಲಿಕ ಸಲಹೆ, ಸೂಚನೆ ನೀಡಿ ಎಂದು ಶಾಸಕ ಶ್ರೀನಿವಾಸ ಮಾನೆ ಮನವಿ ಮಾಡಿದರು.
ಇಲ್ಲಿನ ಗುರುಭವನದಲ್ಲಿ ರೋಷನಿ ಸಮಾಜ ಸೇವಾ ಸಂಸ್ಥೆಯ ಆಶ್ರಯದಲ್ಲಿ ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದರು.ದಿನೇ ದಿನೆ ಸರ್ಕಾರದ ಮೇಲಿನ ಆರ್ಥಿಕ ಒತ್ತಡ ಹೆಚ್ಚುತ್ತಿದೆ. ಪ್ರತಿ ಹಂತದಲ್ಲಿಯೂ ಸಹ ಆಡಳಿತ ಸವಾಲಿನಿಂದ ಕೂಡಿದೆ. ₹೫ ಲಕ್ಷ ೫೦ ಸಾವಿರ ಕೋಟಿ ಸಾಲದ ಹೊರೆ ನಮ್ಮ ರಾಜ್ಯದ ಮೇಲಿದೆ. ಈ ಸಾಲಕ್ಕೆ ನಿತ್ಯವೂ ₹೧೩೫ ಕೋಟಿ ಬಡ್ಡಿ ಕಟ್ಟಬೇಕಿದೆ. ನಮ್ಮ ರಾಜ್ಯದಿಂದ ಅತ್ಯಧಿಕ ಪ್ರಮಾಣದಲ್ಲಿ ಆದಾಯ ಪಡೆಯುವ ಕೇಂದ್ರ ಸರ್ಕಾರ ಮರಳಿ ನಮಗೆ ಕಡಿಮೆ ಪ್ರಮಾಣದ ಅನುದಾನ ನೀಡುತ್ತಿದೆ. ಇಂಥ ಸಂದಿಗ್ಧ ಸಮಯದಲ್ಲಿ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಭಾವನೆಗಳೂ ಸಹ ಬದಲಾಗಬೇಕಿದೆ ಎಂದರು.
ಕಳೆದ ೫ ವರ್ಷಗಳ ಅವಧಿಯಲ್ಲಿ ವಾಯುವ್ಯ ಸಾರಿಗೆ ಸಂಸ್ಥೆ ಒಂದೇ ಒಂದು ಹೊಸ ಬಸ್ ಸಹ ಖರೀದಿಸಿಲ್ಲ.ಇರುವ ಬಸ್‌ಗಳಲ್ಲಿ ಬಹಳಷ್ಟು ಉಪಯೋಗಕ್ಕೆ ಬಾರದಂತಾಗಿವೆ. ಈ ಬಗೆಗೆ ಆಲೋಚಿಸದೇ ಹೊಸ ಬಸ್ ಓಡಿಸುವಂತೆ ಒತ್ತಡ ಹೆಚ್ಚುತ್ತಿದೆ. ಬಸ್ ಓಡಿಸಲು ಮುಂದಾದರೆ ಬಸ್ ಹತ್ತದೇ ಖಾಸಗಿ ವಾಹನಗಳಲ್ಲಿ ಓಡಾಡುತ್ತಾರೆ. ಹೀಗೆಯೇ ಆದರೆ ವ್ಯವಸ್ಥೆ ಸುಧಾರಿಸುವುದಾದರೂ ಹೇಗೆ? ಎಂದು ಪ್ರಶ್ನಿಸಿದ ಶ್ರೀನಿವಾಸ ಮಾನೆ, ಎಲ್ಲರೂ ಒಮ್ಮನಸಿನಿಂದ ಒಂದಾಗಬೇಕು, ವಾಸ್ತವ ಅರಿಯಬೇಕು, ಜವಾಬ್ದಾರಿಯಿಂದ ವರ್ತಿಸಬೇಕು. ಅನವಶ್ಯಕ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಂಡು ಇಡೀ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುವುದು ನಿಶ್ಚಿತ ಎಂದು ಆತಂಕ ವ್ಯಕ್ತಪಡಿಸಿದರು.ನಿಯಮಿತವಾಗಿ ವಾರ್ಡ ಸಭೆ, ಗ್ರಾಮ ಸಭೆ ನಡೆಸುತ್ತಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿನ್ನೆಲೆ ಪರೀಕ್ಷಾ ಕೇಂದ್ರದವರೆಗೆ ಬಸ್ ಸೌಲಭ್ಯ ಕಲ್ಪಿಸುವುದು, ರೈತರ ಸಮಸ್ಯೆ, ಪೌಷ್ಟಿಕಾಂಶ ಆಹಾರದ ಕೊರತೆ ಸೇರಿದಂತೆ ನಾನಾ ಸಮಸ್ಯೆಗಳ ಬಗೆಗೆ ಪ್ರಗತಿಪರರು ಗಮನ ಸೆಳೆದಾಗ ಸ್ಪಂದಿಸಿದ ಶಾಸಕ ಶ್ರೀನಿವಾಸ ಮಾನೆ, ನಿರಂತರವಾಗಿ ಜನಸಂಪರ್ಕ ಹೊಂದಿದ್ದೇನೆ. ನಿಯಮಿತವಾಗಿ ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ. ಸಮಸ್ಯೆಗಳ ಬಗೆಗೆ ಸಂಪೂರ್ಣವಾಗಿ ಅರಿವು ಇದೆ. ಸಮಸ್ಯೆಗಳ ಪರಿಹಾರಕ್ಕೆ ಖಂಡಿತ ಕಾಳಜಿ ವಹಿಸುವೆ. ಆದರೆ ಬರೀ ಸಮಸ್ಯೆಗಳ ಬಗೆಗೆ ಹೇಳುತ್ತಾ ಹೋಗದೇ ಸಮಸ್ಯೆ ಪರಿಹರಿಸುವ ಮಾರ್ಗಗಳೇನು? ನಿಮ್ಮ ಪಾತ್ರವೇನು? ಎನ್ನುವುದನ್ನು ಹಂಚಿಕೊಳ್ಳಿ. ಎಲ್ಲರೂ ಜೊತೆಗೂಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗೋಣ ಎಂದರು.
ರೋಷನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶಕಿ ಸಿಸ್ಟರ್ ಅನಿತಾ ಡಿಸೋಜಾ, ನಿವೃತ್ತ ಅಧಿಕಾರಿ ಬಿ.ಆರ್.ಶೆಟ್ಟರ, ಎನ್.ಎಂ. ಪೂಜಾರ, ಡಾ. ಎನ್.ಎಫ್.ಕಮ್ಮಾರ, ಪುಟ್ಟಪ್ಪ ನರೇಗಲ್, ರುದ್ರಪ್ಪ ಬಳಿಗಾರ, ಮುನೀರ್‌ಅಹ್ಮದ್ ಗೊಂದಿ, ಮಂಜುನಾಥ ಕುದರಿ, ಮಂಜುನಾಥ ಕರ್ಜಗಿ, ಬಸವರಾಜ ಕೋತಂಬರಿ ಈ ಸಂದರ್ಭದಲ್ಲಿದ್ದರು.