ಸಾರಾಂಶ
ನಾವು ವೀರಶೈವ ಜಂಗಮರಲ್ಲ, ಬೇಡ ಜಂಗಮರಾಗಿದ್ದು ನಮ್ಮ ಕುಲಕಸಬು ಧಾರ್ಮಿಕ ಭಿಕ್ಷಾಟನೆಯಾಗಿದೆ. ಎಲ್ಲ ನಮ್ಮ ಸಮಾಜದವರ ಜಾತಿಯನ್ನು ಬೇಡ ಜಂಗಮ ಎಂದು ನೋಂದಾಯಿಸಲು ಗಣತಿದಾರರಿಗೆ ತಿಳಿಸಬೇಕು.
ಕುಷ್ಟಗಿ:
ರಾಜ್ಯದಲ್ಲಿ ನಡೆಸುತ್ತಿರುವ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯಲ್ಲಿ ಬೇಡಜಂಗಮ ಜಾತಿಯನ್ನು ಗಣತಿಯಲ್ಲಿ ನೋಂದಾಯಿಸುವಂತೆ ಒತ್ತಾಯಿಸಿ ಜಂಗಮ ಸಮಾಜದ ವತಿಯಿಂದ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರಿಗೆ ಮನವಿ ಸಲ್ಲಿಸಲಾಯಿತು.ಚಳಗೇರಿ ವೀರಸಂಗಮೇಶ್ವರ ಶಿವಾಚಾರ್ಯರು ಮಾತನಾಡಿ, ನಾವು ವೀರಶೈವ ಜಂಗಮರಲ್ಲ, ಬೇಡ ಜಂಗಮರಾಗಿದ್ದು ನಮ್ಮ ಕುಲಕಸಬು ಧಾರ್ಮಿಕ ಭಿಕ್ಷಾಟನೆಯಾಗಿದೆ. ಎಲ್ಲ ನಮ್ಮ ಸಮಾಜದವರ ಜಾತಿಯನ್ನು ಬೇಡ ಜಂಗಮ ಎಂದು ನೋಂದಾಯಿಸಲು ಗಣತಿದಾರರಿಗೆ ತಿಳಿಸಬೇಕು ಎಂದು ಹೇಳಿದರು.
ಸರ್ಕಾರವು 2025ರಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ ಕೈಗೊಂಡಿದೆ. ಇದರಲ್ಲಿ ಬೇಡ ಜಂಗಮ ಜಾತಿಯು ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ನಮೂದು ಇದ್ದು, ಜಾತಿ ಉಪಜಾತಿ ಕ್ರಮ ಸಂಖ್ಯೆ: 019.1 ಬೇಡ ಜಂಗಮ ಎಂದು ಮತ್ತು ನಮ್ಮ ಕುಲಕಸುಬು (ಕೋಡ್ ನಂ.50) ಧಾರ್ಮಿಕ ಭಿಕ್ಷಾಟನೆಯಾಗಿರುತ್ತದೆ ಎಂದರು.ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಶಿವಕುಮಾರ ಗಂಧದಮಠ ಮಾತನಾಡಿ, ಜಾತಿಗಣತಿಯಲ್ಲಿ ಬರೆಸಬೇಕಿದ್ದು ಈಗಾಗಲೇ ಗಣತಿದಾರರು ಕೆಲವೊಂದು ಕುಟುಂಬಗಳ ಸಮೀಕ್ಷೆ ಮಾಡಿದ್ದಾರೆ. ಬೇಡ ಜಂಗಮರನ್ನು ಸಾಮಾನ್ಯ ವರ್ಗದಲ್ಲಿ ಗುರುತಿಸಿದ್ದು, ಅಂತಹ ಕುಟುಂಬಗಳನ್ನು ಮತ್ತೆ ಹುಡುಕಿ ಅವರನ್ನು ಪರಿಶಿಷ್ಟ ಜಾತಿ ಉಪಜಾತಿಯಲ್ಲಿ ಸೇರಿಸಿಕೊಳ್ಳಬೇಕು. ಈ ಬಗ್ಗೆ ಸಂಬಂಧಿಸಿದ ಜಾತಿಯವರಿಂದ ಯಾವುದೇ ದಾಖಲೆ ಕೇಳದೇ ಎಲ್ಲ ಗಣತಿದಾರರು ನೇರವಾಗಿ ಪರಿಶಿಷ್ಟ ಜಾತಿ ಉಪಜಾತಿಯಲ್ಲಿ ಬೇಡ ಜಂಗಮ ಎಂದು ನಮೂದಿಸಿಕೊಳ್ಳುವಂತೆ ತಾವು ಈ ಕೂಡಲೇ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಸಮಾಜದ ಮುಖಂಡರಾದ ಸಿ.ಎಂ. ಹಿರೇಮಠ, ದೊಡ್ಡಯ್ಯ ಗದ್ದಡಕಿ, ವೀರಯ್ಯ ಮಳಿಮಠ, ಮಲ್ಲಿಕಾರ್ಜುನಯ್ಯ ಮ್ಯಾಗೇರಿಮಠ, ಎಸ್.ಎಸ್. ಹಿರೇಮಠ, ವಿಜಯಕುಮಾರ ಹಿರೇಮಠ, ಮಂಜುನಾಥ ಚಪ್ಪನ್ನಮಠ, ಸಂಗಮೇಶ ಲೂತಿಮಠ, ಈಶ್ವರಯ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.