ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಕ್ರಮ ವಹಿಸಲು ಸೂಚನೆ

| Published : Jan 07 2025, 12:33 AM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಕ್ರಮ ವಹಿಸಲು ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಜಿದಾರರ ಮನವಿಯನ್ನು ಪರಿಶೀಲಿಸಲಾಗಿದೆ. ಮೆಡಿಕಲ್ ಕಾಲೇಜು ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಸೂಕ್ತ ಕ್ರಮವನ್ನು ಕೈಗೊಂಡು ಮತ್ತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ ನೀಡಿ ಅದರ ಒಂದು ಪ್ರತಿಯನ್ನು ೧೫ ದಿನಗಳೊಳಗೆ ನಿರ್ದೇಶನಾಲಯಕ್ಕೆ ಸಲ್ಲಿಸಲು ಸೂಚಿಸಿದೆ.

ಶಿರಸಿ: ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ದಿಂದ ಕೈಗೊಂಡ ಏಳು ದಿನಗಳ ಪಾಯಾತ್ರೆಯ ಪರಿಣಾಮ, ಬರೊಬ್ಬರಿ ಒಂದು ವರ್ಷದ ನಂತರ ಸರ್ಕಾರ ಎಚ್ಚೆತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಸೂಚನೆ ನೀಡಿದೆ.ಹೋರಾಟದ ಮನವಿಯನ್ನಾಧರಿಸಿ ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆಯಂತೆ, ವೈದ್ಯಕೀಯ ಶಿಕ್ಷಣ ಇಲಾಖೆ ಸರ್ಕಾರದ ಮುಖ್ಯಕಾರ್ಯದರ್ಶಿಯವರು ಸೂಕ್ತ ಕ್ರಮ ಕೈಗೊಳ್ಳುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕರಿಗೆ ಸೂಚಿಸಿದ್ದು, ಅದರಂತೆ ಅವರು ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಅರ್ಜಿದಾರರ ಮನವಿಯನ್ನು ಪರಿಶೀಲಿಸಲಾಗಿದೆ. ಮೆಡಿಕಲ್ ಕಾಲೇಜು ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೇಕಾದ ಸೂಕ್ತ ಕ್ರಮವನ್ನು ಕೈಗೊಂಡು ಮತ್ತು ಕೈಗೊಂಡ ಕ್ರಮದ ಬಗ್ಗೆ ಮಾಹಿತಿಯನ್ನು ನೇರವಾಗಿ ಅರ್ಜಿದಾರರಿಗೆ ನೀಡಿ ಅದರ ಒಂದು ಪ್ರತಿಯನ್ನು ೧೫ ದಿನಗಳೊಳಗೆ ನಿರ್ದೇಶನಾಲಯಕ್ಕೆ ಸಲ್ಲಿಸಲು ಸೂಚಿಸಿದೆ.

ಬಹುದಿನದ ಬೇಡಿಕೆ: ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗಬೇಕೆಂಬುದು ಬಹುದಿನದ ಬೇಡಿಕೆಯಾಗಿತ್ತು. ಅದರಂತೆ ಬಿಜೆಪಿ ಸರ್ಕಾರದಲ್ಲಿ ಕುಮಟಾದಲ್ಲಿ ಸ್ಥಳವನ್ನು ಗುರುತಿಸಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ ನಂತರ ಬದಲಾದ ಸರ್ಕಾರ ಜಿಲ್ಲೆಯ ಜನರ ಬಹುದಿನದ ಬೇಡಿಕೆಯನ್ನು ಮೂಲೆಗೆ ತಳ್ಳಿತ್ತು. ಇದನ್ನು ಅರಿತ ಅನಂತಮೂರ್ತಿ ಹೆಗಡೆ ಚಾರಿಟೆಬಲ್ ಟ್ರಸ್ಟ್‌ ಮುಖ್ಯಸ್ಥ ಅನಂತಮೂರ್ತಿ ಹೆಗಡೆ ಮತ್ತೆ ಹೋರಾಟವನ್ನು ಕೈಗೆತ್ತಿಕೊಂಡರು. ಅದರ ಭಾಗವಾಗಿ ೨೦೨೩ರ ನವೆಂಬರ್‌ನಲ್ಲಿ ಶಿರಸಿಯಿಂದ ಕಾರವಾರದವರೆಗೆ, ಜಿಲ್ಲೆಯ ಜನರ ಸಹಕಾರದೊಂದಿಗೆ ಏಳು ದಿನಗಳ ಕಾಲ ೧೪೦ ಕಿಮೀ ಪಾದಯಾತ್ರೆ ಮಾಡಿ ಜಿಲ್ಲೆಯ ಘಟ್ಟದ ಮೇಲೊಂದು ಮತ್ತು ಘಟ್ಟದ ಕೆಳಗೊಂದು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಈ ಕೂಡಲೇ ಮಂಜೂರು ಮಾಡಬೇಕು ಆಗ್ರಹಿಸಿದ್ದರು.

ಹೋರಾಟ ಕೈಬಿಡಲ್ಲ: ಜಿಲ್ಲೆಗೆ ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕುರಿತಾಗಿ ಸೂಕ್ತ ಕ್ರಮಕ್ಕೆ ಸೂಚಿಸಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಪತ್ರ ಬರೆದಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ. ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಆಗುವವರೆಗೂ ಹೋರಾಟ ನಿರಂತರ ನಡೆಯಲಿದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದರು.