ಸುಹಾಸ್ ಕೊಲೆ ಪ್ರಕರಣ ಎನ್‌ಐಎ ಗೆ ವಹಿಸಿ

| Published : May 08 2025, 12:31 AM IST

ಸಾರಾಂಶ

ಶಿವಮೊಗ್ಗ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿಂದೆ ಪೊಲೀಸರ ವೈಫಲ್ಯ ಮತ್ತು ಕೆಲ ಪೊಲೀಸರ ಕೈವಾಡವಿದೆ. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಒತ್ತಾಯಿಸಿದರು.

ಶಿವಮೊಗ್ಗ: ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಹಿಂದೆ ಪೊಲೀಸರ ವೈಫಲ್ಯ ಮತ್ತು ಕೆಲ ಪೊಲೀಸರ ಕೈವಾಡವಿದೆ. ಈ ಪ್ರಕರಣವನ್ನು ಎನ್‌ಐಎ ತನಿಖೆಗೆ ಹಸ್ತಾಂತರಿಸಬೇಕು ಎಂದು ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್ ಒತ್ತಾಯಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳೂರಿನಲ್ಲಿ ಇಸ್ಲಾಮಿಕ್ ಹಂತಕರಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಮನೆಗೆ ರಾಷ್ಟ್ರಭಕ್ತರ ಬಳಗದ ಮುಖಂಡರೊಂದಿಗೆ ಮೇ 6 ರಂದು ನಾನು ಭೇಟಿ ನೀಡಿದ್ದೆ. ಈ ವೇಳೆ ಅವರ ತಂದೆ-ತಾಯಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಮೂಲಕ 1 ಲಕ್ಷ ರು. ಧನ ಸಹಾಯದ ನೆರವು ನೀಡಿ ಬಂದಿದ್ದೇವೆ. ಆ ಸಂದರ್ಭದ ವೇಳೆ ಸುಹಾಸ್ ಶೆಟ್ಟಿ ಪೋಷಕರು ನಮ್ಮೊಂದಿಗೆ ಹಂಚಿಕೊಂಡ ಮಾಹಿತಿ ಪ್ರಕಾರ ಸುಹಾಸ್ ಶೆಟ್ಟಿ ಕೊಲೆಗೆ ವ್ಯವಸ್ಥಿತವಾದ ಸಂಚು ನಡೆದಿದೆ ಎಂದು ದೂರಿದರು.

ಸುಹಾಸ್ ಶೆಟ್ಟಿ ಅವರ ಹತ್ಯೆಯಲ್ಲಿ ಪೊಲೀಸರ ವೈಫಲ್ಯ ಮತ್ತು ಕೆಲ ಪೊಲೀಲಿಸರ ಕೈವಾಡವಿರುವ ಶಂಕೆಯಿದೆ. ಸುಹಾಶ್ ಶೆಟ್ಟಿ ಅವರ ತಾಯಿ ಹೇಳುವ ಪ್ರಕಾರ ಕೆಲವು ಪೊಲೀಸರು ಅವರಿಗೆ ನಿರಂತರವಾಗಿ ಕಿರುಕುಳ ನೀಡಿದ್ದಾರೆ. ಪದೇ ಪದೇ ಅವರ ಮನೆಗೆ ಬಂದು ವಾಹನ ತಪಾಸಣೆ ನಡೆಸುವುದರೊಂದಿಗೆ ಮಾನಸಿಕ ಹಿಂಸೆ ನೀಡಲಾಗಿದೆ. ಅಲ್ಲದೆ ಕೊಲೆಗಡುಕರಿಗೆ ವಿದೇಶದಿಂದ ಹಣದ ನೆರವು ದೊರೆತಿರುವ ಸುಳಿವು ಇದೆ. ಹಾಗೆಯೇ ರಾಜ್ಯ ಸರ್ಕಾರದ ಭದ್ರತಾ ವೈಫಲ್ಯವೂ ಇಲ್ಲಿ ಎದ್ದು ಕಾಣುತ್ತಿದೆ. ಹಾಗಾಗಿ ಈ ಪ್ರಕರಣವನ್ನು ಎನ್.ಐ.ಎ ಗೆ ಹಸ್ತಾಂತರಿಸಬೇಕೆನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಮುಸ್ಲಿಮರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಹಿಂದೂ ಕಾರ್ಯಕರ್ತರು ಬಲಿಯಾಗಬೇಕಿದೆ. ಗೃಹ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಭೇಟಿ ನೀಡಿದ್ದರೂ ಮೃತರ ಮನೆಗೆ ಹೋಗಿ ಸಾಂತ್ವಾನ ಹೇಳದಿರುವುದು ಹಾಗೂ ಕೇವಲ ಮುಸ್ಲಿಂ ಮುಖಂಡರೊಟ್ಟಿಗೆ ಸಭೆ ನಡೆಸಿರುವುದು ಅತ್ಯಂತ ಖೇದಕರ ವಿಷಯ ಎಂದರು.ಗೃಹ ಸಚಿವರು ನಡೆಸಿದ ಮುಸ್ಲಿಮರ ಸಭೆಯಲ್ಲಿ ಸಚಿವರನ್ನೇ ಬೆದರಿಸುವ ರೀತಿಯಲ್ಲಿ ಅಲ್ಲಿನ ಮುಸ್ಲಿಮರು ವರ್ತಿಸಿದ್ದು, ಇದು ಕಾಂಗ್ರೆಸ್ಸಿನ ತುಷ್ಠೀಕರಣ ರಾಜಕಾರಣದ ಫಲ. ಅಲ್ಲದೆ ಸ್ವತಃ ಮೃತ ಸುಹಾಸ್ ಅವರ ಅಜ್ಜ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರೂ ಇದುವರೆಗೂ ಯಾವೊಬ್ಬ ಕಾಂಗ್ರೆಸ್ ಮುಖಂಡ ಮೃತರ ಮನೆಗೆ ಭೇಟಿ ನೀಡದಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿಂದೂಗಳ ಮೇಲಿನ ತಾತ್ಸಾರ ಮನೋಭಾವನ್ನು ತೋರಿಸುತ್ತದೆ ಎಂದು ದೂರಿದರು.ಸುಹಾಸ್ ಶೆಟ್ಟಿ ರೌಡಿ ಶೀಟರ್ ಆಗಿದ್ದರು ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸುಹಾಸ್ ಶೆಟ್ಟಿ ಹಿಂದೂ ರಕ್ಷಕರಾಗಿದ್ದರು. ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗೆ ನಿಂತಿದ್ದರು. ಗೋ ರಕ್ಷಣೆಗೆ ಕೆಲಸ ಮಾಡಿದ್ದರು. ಈ ಕಾರಣಕ್ಕೆ ಅವರನ್ನು ರೌಡಿ ಶೀಟರ್ ಎನ್ನುವುದಾದರೆ ಹೇಗೆ? ಆ ಬಗ್ಗೆ ಬೇಕಾದರೆ ತನಿಖೆಯಾಗಲಿ. ಹಾಗಂತ ಹಿಂದೂಗಳು ತಮ್ಮ ರಕ್ಷಣೆಗೆ ರೌಡಿಗಳಾಗುವುದು ತಪ್ಪಾ? ಎಂದು ಪ್ರಶ್ನಿಸಿದರು. ಕೊಲೆಗಡುಕರು ತಪ್ಪಿಸಿಕೊಳ್ಳಲು ಇಬ್ಬರು ಬುರ್ಕಾದಾರಿ ಮುಸ್ಲಿಂ ಮಹಿಳೆಯರು ಸಹಾಯ ಮಾಡಿದ್ದು, ಅವರನ್ನು ತಕ್ಷಣ ಬಂಧಿಸಿ ತನಿಖೆಗೆ ಒಳಪಡಿಸಬೇಕು, ಕರಾವಳಿಯಲ್ಲಿ ಶಾಶ್ವತವಾಗಿ ಶಾಂತಿ ನೆಲೆಸಲು ಜಿಹಾದಿ ಮನಸ್ಥಿತಿಯುಳ್ಳ ಸಮಾಜ ಘಾತುಕರನ್ನು ಮಟ್ಟಹಾಕಬೇಕು. ಸುಹಾಸ್ ಶೆಟ್ಟಿ ಕುಟುಂಬಕ್ಕೆ ೨೫ ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಎಂ.ಶಂಕರ್, ಇ.ವಿಶ್ವಾಸ್, ಜಾಧವ್, ಮಹೇಶ್, ಬಾಲು, ಶಿವಕುಮಾರ್, ಕುಬೇರಪ್ಪ ಹಾಗೂ ಶ್ರೀಕಾಂತ್ ಇದ್ದರು.