ಸಾರಾಂಶ
ಕಾರವಾರ: ಸುಹಾಸ ಶೆಟ್ಟಿ ಹತ್ಯೆ ಖಂಡಿಸಿ ವಿವಿಧ ಹಿಂದೂ ಸಂಘಟನೆಯವರು ನೀಡಿದ್ದ ಕಾರವಾರ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ಅಂಗಡಿ- ಮಳಿಗೆಗಳನ್ನು ಬಂದ್ ಮಾಡಲಾಗಿತ್ತು. ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಂಗಡಿ- ಮಳಿಗೆಗಳು, ಖಾಸಗಿ ಕಚೇರಿಗಳು, ಮೀನು ಮಾರುಕಟ್ಟೆ ಬಂದ್ ಆಗಿದ್ದರೆ, ಆಟೋ, ಟ್ಯಾಕ್ಸಿ ಭಾಗಶಃ ಬಂದ್ ಆಗಿತ್ತು. ಸರ್ಕಾರಿ ಕಚೇರಿಗಳು, ಬ್ಯಾಂಕ್, ಔಷಧಿ ಅಂಗಡಿಗಳು, ಬಸ್ ಸಂಚಾರ ಎಂದಿನಂತೆ ಇತ್ತು.ಹಿಂದೂ ಸಂಘಟನೆಗಳ ಸಮಾನ ಮನಸ್ಕರ ವೇದಿಕೆ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇಲ್ಲಿನ ಕೋಡಿಬೀರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ವೃದ್ಧರು ಮಹಿಳೆಯರು ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಸುಭಾಷ್ ವೃತ್ತ, ಹೂವಿನ ಚೌಕ, ಕಾಜುಬಾಗ ವೃತ್ತ, ಪಿಕಳೆ ರಸ್ತೆ ಮೂಲಕಸಾಗಿದ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾರೋಪಗೊಂಡಿತು.ಹಿಂದೂ ಸಂಘಟನೆಗಳ ಸಮಾನ ಮನಸ್ಕ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ, ಸುಹಾಸ್ ಶೆಟ್ಟಿ ಹತ್ಯೆ ನಡೆದರೂ ರಾಜ್ಯದ ನಾಯಕರು ಅವರ ಮನೆಗೆ ಭೇಟಿ ನೀಡಿಲ್ಲ. ಇದು ಖಂಡನೀಯ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎಗೆ ನೀಡಬೇಕು. ಜಿಲ್ಲೆಯಲ್ಲಿರುವ ಪಾಕಿಸ್ತಾನಿ ಹಾಗೂ ಬಾಂಗ್ಲಾ ಪ್ರಜೆಗಳನ್ನು ದೇಶದಿಂದ ಹೊರಗೆ ಹಾಕಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಸುಹಾಸ್ ಹತ್ಯೆಗೆ ತಿಂಗಳ ಮೊದಲೇ ಜಿಹಾದಿಗಳು ಬೆದರಿಕೆ ಹಾಕಿದ್ದರು. ಆದರೂ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ. ಹಿಂದೂಗಳು ಒಗ್ಗಟ್ಟಾಗುವವರೆಗೆ ದಬ್ಬಾಳಿಕೆ ಮುಂದುವರೆಯುತ್ತದೆ. ಒಗ್ಗಟ್ಟಾಗಿದ್ದರೆ ಯಾರೂ ನಮ್ಮನ್ನು ಎದುರಿಸಲು ಸಾಧ್ಯವಿಲ್ಲ ಎಂದರು.
ಸನಾತನ ಧರ್ಮ ರಕ್ಷಣಾ ವೇದಿಕೆ ಅಧ್ಯಕ್ಷ ಗಅಜೇಂದ್ರ ನಾಯ್ಕ, ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡನೀಯ. ಸನಾತನ ಧರ್ಮ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಆದರೆ ಧರ್ಮ ಗಟ್ಟಿಯಾಗಿ ನಿಂತಿದೆ ಎಂದರು.ಪ್ರತಿಭಟನೆಯಲ್ಲಿ ಬಿ.ಎಸ್.ಪೈ, ಮಹೇಶ ಹರಿಕಂತ್ರ, ಸುಶೀಲಾ ಹರಿಕಂತ್ರ, ಶರದ್ ಬಾಂದೇಕರ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಯರು ಇದ್ದರು.