ಜೀವನದಲ್ಲಿ ಎದುರಾಗುವ ಕಷ್ಟ-ಸಮಸ್ಯೆಗಳಿಗೆ ಆತ್ಮಹತ್ಯೆ ಯಾವುದೇ ರೀತಿಯಲ್ಲೂ ಪರಿಹಾರವಲ್ಲ. ಯಾರೊಬ್ಬರೂ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗದೆ, ಮಾನಸಿಕವಾಗಿ ಸದೃಢರಾಗಿ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು.

ಧಾರವಾಡ:

ಜೀವನದಲ್ಲಿ ಎದುರಾಗುವ ಕಷ್ಟ-ಸಮಸ್ಯೆಗಳಿಗೆ ಆತ್ಮಹತ್ಯೆ ಯಾವುದೇ ರೀತಿಯಲ್ಲೂ ಪರಿಹಾರವಲ್ಲ. ಯಾರೊಬ್ಬರೂ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗದೆ, ಮಾನಸಿಕವಾಗಿ ಸದೃಢರಾಗಿ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅಲ್ಲಪ್ಪ ಬಡಿಗೇರ ಹೇಳಿದರು.

ಕೇಂದ್ರ ಕಾರಾಗೃಹದ ಸಭಾಭವನದಲ್ಲಿ ಜಿಲ್ಲಾಡಳಿತವು ವಿವಿಧ ಇಲಾಖೆಗಳ ಸಹಯೋಗದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಉದ್ಘಾಟಿಸಿದ ಅವರು, ಕಷ್ಟದ ಸಂದರ್ಭಗಳಲ್ಲಿ ಒಂಟಿಯಾಗಿ ಸಮಸ್ಯೆಗಳನ್ನು ಎದುರಿಸುವ ಬದಲು ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ಅಗತ್ಯವಿದ್ದಲ್ಲಿ ತಜ್ಞರಿಂದ ಸೂಕ್ತ ಮಾರ್ಗದರ್ಶನ ಹಾಗೂ ನೆರವು ಪಡೆಯಬೇಕು. ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು, ಧೈರ್ಯ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪರಶುರಾಮ ಎಫ್.ಕೆ. ಮಾತನಾಡಿ, ಯಾರೇ ಆಗಲಿ ಮಾನಸಿಕವಾಗಿ ದುರ್ಬಲನಾದ ಸಂದರ್ಭದಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳಿಗೆ ಒಳಗಾಗುವ ಸಾಧ್ಯತೆ ಇದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮಾನಸಿಕವಾಗಿ ಸದೃಢರನ್ನಾಗಿಸುವ ಕಾರ್ಯವಾಗಬೇಕೆಂದರು.

ಕೇಂದ್ರ ಕಾರಾಗೃಹದ ಅಧೀಕ್ಷಕ ಸಿ.ಜೆ. ರಘುಪತಿ ಮಾತನಾಡಿ, ಕಾರಾಗೃಹದಲ್ಲಿರುವ ಬಂದಿಗಳು ಮಾನಸಿಕವಾಗಿ ಕುಗ್ಗದೆ, ಉತ್ತಮ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಿ, ಉತ್ತಮ ಚಿಂತನೆ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು ಸಶಕ್ತ ಜೀವನ ರೂಪಿಸಿಕೊಳ್ಳಬೇಕು ಎಂದರು.

ಕಾರಾಗೃಹ ಶಿಕ್ಷಕ ಡಿ.ಬಿ. ಕುಂಬಾರ ಸ್ವಾಗತಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎನ್. ಅಗಡಿ ವಂದಿಸಿದರು. ಡಿಮ್ಹಾನ್ಸ್ ಸಹಾಯಕ ಪ್ರಾಧ್ಯಾಪಕಿ ಡಾ. ಮೇಘಮಾಲಾ ತಾವರಗಿ ಆತ್ಮಹತ್ಯೆಗೆ ಕಾರಣಗಳು ಹಾಗೂ ಅದನ್ನು ತಡೆಗಟ್ಟುವ ವಿಧಾನಗಳ ಕುರಿತು ಅವರು ಉಪನ್ಯಾಸ ನೀಡಿದರು. ಡಾ. ಎಸ್.ಬಿ. ಕಳಸೂರಮಠ, ಡಾ. ಮಹೇಶ ಚಿತ್ತರಗಿ, ಬಿ.ಆರ್. ಪಾತ್ರೋಟ, ಡಾ. ಗೌರಿ ಬೆಲ್ಲದ, ಡಾ. ತನುಜಾ ಕೆ.ಎನ್, ವೈದ್ಯಾಧಿಕಾರಿ ಡಾ. ಬೀನಾ ಶೂರ್ಪಾಲಿ ಇದ್ದರು.