ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂಬ ವಿಶ್ವಾಸ ನಿಮ್ಮಲ್ಲಿರಲಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಕರೆ ನೀಡಿದರು.
ಹಾನಗಲ್ಲ: ರೈತ ಬಂಧುಗಳೇ ಸಾಯುವ ವಾಣಿ ನಿಮ್ಮಿಂದ ಬರಬಾರದು, ನಮ್ಮ ಸಹಾಯವಾಣಿಗೆ ಫೋನಾಯಿಸಿ ನಿಶ್ಚಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ನಾವು ಪರಿಹಾರ ನೀಡುತ್ತೇವೆ, ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ ಎಂಬ ವಿಶ್ವಾಸ ನಿಮ್ಮಲ್ಲಿರಲಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಕರೆ ನೀಡಿದರು.ಶುಕ್ರವಾರ ಹಾನಗಲ್ಲ ತಾಲೂಕಿನ ಹುಣಶೆಟ್ಟಿಕೊಪ್ಪ ಗ್ರಾಮದಲ್ಲಿ ರೈತ ಸಂಘದ ತಾಲೂಕಿನ 47ನೇ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಟಿಸಿ ಸುಟ್ಟರೆ ಹೆಸ್ಕಾಂ ಅಧಿಕಾರಿ ನೌಕರರಿಗೆ ದುಡ್ಡು ಕೊಡುವ ಹವ್ಯಾಸ ಬೇಡ. ಹಾನಗಲ್ಲ ತಾಲೂಕಿನಲ್ಲಿ ಹೆಸ್ಕಾಂ ಸಮಸ್ಯೆ ಮುಗಿದಿಲ್ಲ. ಸಭೆ ಆಗಿದೆ. ಸಂಬಂಧಪಟ್ಟವರು ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಒದಗಿಸಬೇಕು. ಕಾಡುಗಳಲ್ಲಿನ ಕಾಡು ಪ್ರಾಣಿಗಳು ರೈತನ ಜಮೀನಿನಲ್ಲಿನ ಪೈರು ತಿಂದು ಬದುಕುತ್ತಿವೆ. ರೈತ ನಷ್ಟದ ಕೂಪಕ್ಕೆ ಸಿಲುಕಿದ್ದಾನೆ. ಅರಣ್ಯ ಹಾಳಾಗಿದ್ದರಿಂದ ಅವು ನಾಡಿಗೆ ಬರುತ್ತಿವೆ. ಅರಣ್ಯ ಹಾಳು ಮಾಡಿದವರು ಯಾರು ಎಂಬುದಕ್ಕಿಂತ ಅದನ್ನು ರಕ್ಷಿಸಬೇಕಾದವರು ಯಾಕೆ ರಕ್ಷಿಸಲಿಲ್ಲ. ಆ ಕಾಡುಗಳನ್ನು ನಮಗೆ ದತ್ತಕ್ಕೆ ಕೊಡಿ ನಾವು ಕಾಡು ರಕ್ಷಿಸುತ್ತವೆ. ಅಲ್ಲಿ ರೈತರು ಪೈರನ್ನು ಬೆಳೆಯುವುದಿಲ್ಲ. ಅರಣ್ಯವನ್ನೇ ಬೆಳೆಸುತ್ತೇವೆ. ಸಂಘಟನೆಯ ಶಕ್ತಿಯ ಅರಿವು ನಿಮಗಿರಲಿ. ಒಂಟಿಯಾಗಿ ಹೋರಾಟ ಯಶ ನೀಡದು. ಒಟ್ಟಾಗಿ ಹೋರಾಡೋಣ. ರೈತರಿಗಾಗಿಯೇ ಇರುವ ರೈತ ಸಂಘದ ಘಟಕಗಳನ್ನು ಹಾನಗಲ್ಲ ತಾಲೂಕಿನ ಎಲ್ಲ 150 ಹಳ್ಳಿಗಳಲ್ಲಿ ಸ್ಥಾಪನೆ ಮಾಡಿ. ಆಗ ರೈತರ ಶಕ್ತಿ ಏನು ಎಂದು ನಮ್ಮ ಪ್ರತಿನಿಧಿಗಳಿಗೆ ಗೊತ್ತಾಗುತ್ತದೆ. ಸಂಘಟನೆಗಳಲ್ಲಿ ಪಕ್ಷ ಜಾತಿ ತರಬೇಡಿ. ಸರ್ಕಾರ ನಮ್ಮ ಟ್ಯಾಕ್ಸಿನಲ್ಲಿ ನಮ್ಮ ಕೆಲಸ ಮಾಡುತ್ತಿದೆ. ನಮ್ಮ ಹಕ್ಕನ್ನು ನಮಗೆ ನೀಡಲಿ ಎಂದರು. ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಹಾನಗಲ್ಲ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಗಂಭೀರವಾಗಿದೆ. ವಿದ್ಯುತ್ ಇಲ್ಲದೆ ಲಕ್ಷಾಂತರ ರು. ಹೊಲದಲ್ಲಿ ಹಾಕಿದ ರೈತ ಬೆಳೆ ಬರುವ ವಿಶ್ವಾಸ ಕಳೆದುಕೊಂಡಿದ್ದಾನೆ. ವಿದ್ಯುತ್ ಸಮಸ್ಯೆ ಕುರಿತು ನಡೆಸಿದ ಹೋರಾಟದ ಫಲ ಇನ್ನೂ ಸಿಕ್ಕಿಲ್ಲ. ಹೆಸ್ಕಾಂ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ವಿಳಂಬ ಧೋರಣೆ ತೋರಿದರೆ ಅನಿವಾರ್ಯವಾಗಿ ಮತ್ತೆ ಬೀದಿಗಿಳಿಯುವುದು ಖಚಿತ. ನಮ್ಮ ಸಂಘಟನೆಯ ಹೆಸರನ್ನು ದುರುಪಯೋಗ ಮಾಡಿಕೊಂಡು ತಮ್ಮ ಸ್ವಂತ ಕೆಲಸಗಳಿಗೆ ಮುಂದಾಗುವವರ ಬಗೆಗೆ ಎಚ್ಚರಿಕೆಯಿಂದಿರಿ. ಸಂಘಟನೆ ಗಟ್ಟಿಯಾಗಿದ್ದರೆ ರೈತನ ಕಷ್ಟಗಳ ಪರಿಹಾರ ಸಾಧ್ಯ ಎಂದರು.ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಕೃಷಿಯಲ್ಲಿ ಅತಿವೃಷ್ಠಿ ಅನಾವೃಷ್ಠಿಗೆ ಲಕ್ಷಗಟ್ಟಲೇ ಹಣ ಕಳೆದುಕೊಂಡಾಗ ಸರ್ಕಾರ ನೂರಾರು ರು. ಪರಿಹಾರ ನೀಡುವ ಸ್ಥಿತಿ ನೋಡುತ್ತಿದ್ದೇವೆ. ರೈತರ ಬಗೆಗೆ ಸರ್ಕಾರಗಳಿಗೆ ಕಾಳಜಿ ಇಲ್ಲ. ರೈತ ಸಂಘಟನೆ ರೈತರ ನೋವಿಗೆ ಸ್ಪಂದಿಸುವ ಗಟ್ಟಿ ಸಂಘಟನೆ. ನಾವು ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧ. ರೈತರೇ ಸಂಘಟನೆಯೊಂದಿಗಿರಿ. ಸಂಘಟನೆ ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಶಕ್ತಿಯಾಗುತ್ತದೆ ಎಂದರು.ಹುಣಸೆಟ್ಟಿಕೊಪ್ಪದ ರೈತ ಮುಖಂಡ ಶಂಕ್ರಪ್ಪ ಕರಿಯಪ್ಪನವರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವೇದಿಕೆಯಲ್ಲಿದ್ದ ಹುಚ್ಚಯ್ಯ ಹಿರೇಮಠ, ಮಲ್ಲೇಶಪ್ಪ ಪರಪ್ಪನವರ, ಅಜಯ ನಂದಿಕೋಲ, ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ ಮಾತನಾಡಿದರು. ರೈತ ಮುಖಂಡರಾದ ಮಹೇಶ ವಿರುಪಣ್ಣನವರ, ಮಲ್ಲೇಶಪ್ಪ ಪರಪ್ಪನವರ, ಮಹಾಲಿಂಗಪ್ಪ ಅಕ್ಕಿವಳ್ಳಿ, ಎಂ.ಎಂ. ಬಡಗಿ, ಶಂಕ್ರಪ್ಪ ಕರಿಯಣ್ಣನವರ, ರವಿ ಸಂಕಪಾಳೆ, ಸೋಮಣ್ಣ ಜಡೆಗೊಂಡರ, ಗುಡ್ಡನಗೌಡ ಪ್ಯಾಟಿಗೌಡ್ರ, ಚನ್ನಬಸನಗೌಡ ಗಿರಿಗೌಡ್ರ, ರಾಘವೇಂದ್ರ ಪೂಜಾರ ಅತಿಥಿಗಳಾಗಿದ್ದರು.